ವಸಂತದ ಗಾಳಿ

ವಸಂತದ ಗಾಳಿ

ಚಿತ್ರ

ಬೀಳ್ವ ಮಂಜನು ಬೀಳ್ಕೊಡುವುದಕೆ  ಋತು ವಸಂತನು ಬಂದಿರೆ

ಹೂತ ಮಾಮರದಲ್ಲಿ ಮೆಲ್ಲಗೆ ಕೊಂಬೆರೆಂಬೆಯನಲುಗಿಸಿ

ಕೋಗಿಲೆಯ ಸವಿದನಿಯ ಹಾಡನು ದಿಕ್ಕುದಿಕ್ಕಲಿ ಪಸರಿಸಿ

ಮಂದ ಮಾರುತ ಹೃದಯಗಳನೂ ಜೊತೆಯಲೇ ಸೆಳೆದೊಯ್ದನೆ!

 

ಸಂಸ್ಕೃತ ಮೂಲ (ಕಾಳಿದಾಸನ ಋತುಸಂಹಾರ, 6ನೇ ಸರ್ಗ-22):

 

ಅಕಂಪಯನ್ ಕುಸುಮಿತಾ: ಸಹಕಾರ ಶಾಖಾ

ವಿಸ್ತಾರಯನ್ ಪರಭೃತಸ್ಯ  ವಚಾಂಸಿ ದಿಕ್ಷು

ವಾಯುರ್ವಿವಾತಿ ಹೃದಯಾನಿ ಹರನ್ನರಾಣಾಂ

ನೀಹಾರಪಾತ ವಿಗಮಾತ್ ಸುಭಗೋ ವಸಂತೇ

 

-ಹಂಸಾನಂದಿ

 

ಕೊ: ಮಾರ್ಚ್ ೨೦ ವಸಂತ ವಿಷುವ - ಅಂದರೆ  ವಸಂತದ ಮೊದಲ ದಿನ. ಈ ದಿನ ಹಗಲು ಇರುಳು ಭೂಮಿಯ ಮೇಲೆ ಎಲ್ಲ ಕಡೆಯಲ್ಲೂ ಒಂದೇ ಸಮನಾಗಿರುತ್ತವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಇಲ್ಲಿ ಮತ್ತೆ ಇಲ್ಲಿ ನೀವು ಓದಬಹುದು.

 

ಕೊ.ಕೊ: ನಮ್ಮ ಪುರಾಣಗಳ ಪ್ರಕಾರ, ವಸಂತ ಅಂದರೆ ಮನ್ಮಥನ ಗೆಳೆಯನಂತೆ. ಈ ಮನ್ಮಥ ವಸಂತಕಾಲದಲ್ಲಿ ಅರಳುವ ಅರವಿಂದ, ಅಶೋಕ, ನೀಲೋತ್ಪಲ, ಚೂತ (ಮಾವು) ಮತ್ತೆ ನವಮಲ್ಲಿಕಾ - ಹೀಗೆ ಐದು ಹೂವಿನ ಅಂಬುಗಳನ್ನು ನೇರವಾಗಿ ಪ್ರೇಮಿಗಳ ಎದೆಗೇ ಗುರಿ ಇಡುತ್ತಾನಂತೆ! ತಪಸ್ಸು ಮಾಡಲು ಕುಳಿತಿದ್ದ ಶಿವನನ್ನೇ ಬಿಡಲಿಲ್ಲ ಈ ಮದನ ಅಂದರೆ, ಇವನು ಅದೆಷ್ಟು ಗಟ್ಟಿಗ ನೋಡಿ! ಶಿವನ ಮೂರನೇ ಉರಿಗಣ್ಣಿಂದ ಬೂದಿ ಆದರೂ, ದೇಹವೇ ಇರದೇ ಹೋದರೂ ತನ್ನ ಕಾಯಕವನ್ನು ಮಾತ್ರ ಮುಂದುವರಿಸಿಯೇ ಇದ್ದಾನೆ, ಯುಗ ಯುಗಾಂತರದಿಂದಲೂ. ಇಂತಹ ಹೂ ಬಾಣ ಹಿಡಿದವನ ಮೇಲೊಂದು ಹಳೆಯ ಹರಟೆ ಇಲ್ಲಿದೆ.

 

ಕೊ.ಕೊ.ಕೊ: ಇಂತಹ ವಸಂತ ಕಾಲದಲ್ಲಿ ಬೀಸುವ ಗಾಳಿ ಅದೆಂತದದ್ದು ನೋಡಿ? ಎಲ್ಲರಲ್ಲೂ ಪ್ರೇಮವನ್ನು ಚಿಮ್ಮಿಸಿ ಅವರ ಹೃದಯಗಳನ್ನು ಸೆಳೆದೊಯ್ಯುವಂತಹದ್ದು ಅನ್ನುವುದು ಕಾಳಿದಾಸನ ಅಂಬೋಣ. ಕವಿಕುಲಗುರುವಲ್ಲವೇ ಅವನು? ಹಾಗೆಂದಮೇಲೆ ಅವನು ಹೇಳಿರುವುದು ನಿಜವೇ ಇರಬೇಕು, ಏನಂತೀರ?

 

ಚಿತ್ರ: http://treesplanet.blogspot.com/2013/06/mangifera-indica-mango-tree.html...ಇವರ ಕೃಪೆ

 

Rating
No votes yet

Comments

Submitted by lpitnal Sun, 03/23/2014 - 09:37

ನಮಸ್ಕಾರ ಆತ್ಮೀಯರಿಗೆ, ಕವನ, ಅನುವಾದ ಚನ್ನಾಗಿದೆ. ಅದರ ವಿವರಣೆ ಕೂಡ. ಧನ್ಯವಾದಗಳು ಸರ್.