ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಗಿರೀಶ್ ಕಾರ್ನಾಡರು ತಮ್ಮ `ತಲೆದಂಡ' ನಾಟಕದ ಮುನ್ನುಡಿಯಲ್ಲಿ ನೋಯುವ ಹಲ್ಲಿನ ಕಡೆ ನಾಲಗೆ ಪದೇ ಪದೇ ಹೊರಳುವಂತೆ ಕನ್ನಡ ಪ್ರಜ್ಞೆ ಪದೇ ಪದೇ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಡೆ ಹೊರಳುವ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ. ಈ ಮಾತನ್ನು ಆನಂತರ ನಮ್ಮ ಅನೇಕ ಸಂಸ್ಕೃತಿ ಚಿಂತಕರು ಮತ್ತು ಲೇಖಕರು ತಮ್ಮ ಸಾಹಿತ್ಯ - ಸಂಸ್ಕೃತಿ ಚಿಂತನೆಗಳ ಮಧ್ಯೆ ಪ್ರಸ್ತಾಪಿಸಿದ್ದಾರೆ. ಆದರೆ ಇವರೆಲ್ಲ ಕಾರ್ನಾಡರ ಈ ಮಾತನ್ನು ಕನ್ನಡ ಸಂಸ್ಕೃತಿಯಲ್ಲಿ ಕಲ್ಯಾಣ ಕ್ರಾಂತಿಯ ಮಹತ್ವವನ್ನು ಸೂಚಿಸಲಷ್ಟೇ ಬಳಸಿರುವಂತೆ ತೋರುತ್ತದೆಯೇ ಹೊರತು, ಆ ಮಾತಿನಲ್ಲಿರುವ `ನೋಯುವ ಹಲ್ಲು' ಎಂಬ ಪದಪುಂಜದ ಕಡೆ ಗಮನ ಕೊಟ್ಟಂತೆ ತೋರುವುದಿಲ್ಲ. ಅವರು ಹಾಗೆ ಗಮನ ಕೊಟ್ಟಿದ್ದರೆ `ತಲೆದಂಡ' ನಾಟಕವೂ ಸೇರಿದಂತೆ ಕಲ್ಯಾಣ ಕ್ರಾಂತಿ ಕುರಿತು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮೂಡಿರುವ ಸೃಜನ ಮತ್ತು ಸೃಜನೇತರ ಕೃತಿಗಳ ಬಗ್ಗೆ ಈಗ ಬಂದಿರುವ ಕೇವಲ `ಚಿಂತನಶೀಲ' ಬರಹಗಳ ಜೊತೆ ಜೊತೆಗೇ `ಕ್ರಿಯಾಶೀಲ' ಬರವಣಿಗೆಯೂ ಹೊಮ್ಮಿರುತ್ತಿತ್ತೇನೋ! ಅಂದರೆ ಕನ್ನಡ ಸಮಾಜದಲ್ಲಿ ಒಂದು ನಿರ್ಣಾಯಕ ಸಾಮಾಜಿಕ ಬದಲಾವಣೆಗೆ - ತಮಿಳ್ನಾಡಿನಲ್ಲಿ ಆದಂತೆ - ಇಂಬುಕೊಡುವ ಒಂದು ಪ್ರಬುದ್ಧ ಸಾಹಿತ್ಯಕ, ಸಾಂಸ್ಕೃತಿಕ ಸಂವಾದ ಕನ್ನಡ ಸಾಹಿತ್ಯದ ಚೈತನ್ಯದ ಶಕ್ತಿಯಾಗಿರುತ್ತಿತ್ತೇನೋ...
ಇಂತಹ ಸಂವಾದ ಕನ್ನಡ ಸಾಹಿತ್ಯದಲ್ಲಿ ನಡೆದಿಲ್ಲ ಎಂದಲ್ಲ. ಆದರೆ ಅದು ಕನ್ನಡ ಸಾಹಿತ್ಯದ ಚೈತನ್ಯಶಕ್ತಿ (driving force) ಆಗಿಲ್ಲ. ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು'ವನ್ನೂ, ಭೈರಪ್ಪನವರ `ಆವರಣ'ವನ್ನೂ ಒಟ್ಟಿಗೇ ಶ್ರೇಷ್ಠ ಕೃತಿಗಳು ಎಂದು `ಪ್ರಾಮಾಣಿಕ'ವಾಗಿ ಗುರುತಿಸುವ, ಚರ್ಚಿಸುವ, ಸಮರ್ಥಿಸುವ ಒಂದು ದೊಡ್ಡ ಸಾಂಸ್ಕೃತಿಕ ಧಾರೆಯೇ ಇಂದು ಕನ್ನಡ ಸಾಹಿತ್ಯ ಸಂಕಥನದ ಮಧ್ಯೆ ಜೀವಂತವಿದೆ! ನಾನು ಹೇಳುತ್ತಿರುವುದು ಈ ಅಸಾಂಗತ್ಯದ ಬಗ್ಗೆ; ಇದು ಸೂಚಿಸುವ ಸಾಹಿತ್ಯದ ಲೋಕಾಭಿರಾಮೀಕರಣದ ಹಿಂದಿರುವ ಸಾಂಸ್ಕೃತಿಕ ದೃಷ್ಟಿ ಕೇಂದ್ರದ ಪ್ರಕ್ಷೇಪದ ಬಗ್ಗೆ - ಕನ್ನಡ ಸಾಹಿತ್ಯ ಕಲ್ಯಾಣ ಕ್ರಾಂತಿಯಿಂದ ಸ್ಫೂರ್ತಿ ಪಡೆದು, ಒಂದು ದೊಡ್ಡ ಸಾಮಾಜಿಕ ಕ್ರಾಂತಿಗೆ ಕಾರಣವಾಗಿರಬೇಕಿತ್ತು ಎಂದಲ್ಲ. ನಿಜ, ಕಲ್ಯಾಣ ಕ್ರಾಂತಿ ಈಗಲೂ ಕನ್ನಡ ಸಂವೇದನೆಯ ಹೃದಯ ಸ್ಥಾನದಲ್ಲಿದೆ. ಆದರೆ ಒಂದು ಒಣ ಹೆಮ್ಮೆಯ ವಿಷಯವಾಗಿ. ಕನ್ನಡ ಸಮಾಜ - ಅದರ ರಾಜಕಾರಣ, ಭಾಷೆ, ಸಂವೇದನೆ ಎಲ್ಲವೂ ಒಟ್ಟಿಗೆ ಏರಿದ್ದ ಹೊಸ ಎತ್ತರಗಳ ದ್ಯೋತಕವಾಗಿ ಅದನ್ನು ನೋಡುತ್ತೇವೆ. ಆದರೆ ಅದು ಕಾರ್ನಾಡರು ಹೇಳುವ ಹಾಗೆ `ನೋಯುವ ಹಲ್ಲು' ಕೂಡಾ ಆಗಿದೆಯಲ್ಲವೇ? ಅಂದರೆ ಕಲ್ಯಾಣ ಕ್ರಾಂತಿಯ ನೆನಪು ಆ ಹೊಸ ಎತ್ತರಗಳನ್ನು ಕನ್ನಡ ಸಮಾಜ, ರಾಜಕಾರಣ, ಸಂವೇದನೆ ಮತ್ತು ಭಾಷೆಗಳು ಬೀಜರೂಪಿಯಾಗಿ ಉಳಿಸಿಕೊಳ್ಳಲಾಗದೇ ಹೋದ ವೇದನೆಯಾಗಿ ನಮ್ಮನ್ನು ಕಾಡಬೇಕಲ್ಲವೆ? ಆದರೆ ಇಂದು ಹಾಗೆ ಅದು ನಮ್ಮನ್ನು ಕಾಡುತ್ತಿದೆಯೇ!
ಈ ಪ್ರಶ್ನೆಗೆ ಉತ್ತರ ನಾವು ಕಲ್ಯಾಣ ಕ್ರಾಂತಿಯನ್ನು ಒಂದು ಪರಿಕಲ್ಪನೆಯಾಗಿ ಹೇಗೆ ಗ್ರಹಿಸುತ್ತೇವೆ ಎಂಬುದನ್ನು ಅವಲಂಬಿಸಿದೆ ಎಂದು ತೋರುತ್ತದೆ. ಇಲ್ಲಿ ಕ್ರಾಂತಿ ಎಂದರೆ ಅಲ್ಲಮಪ್ರಭುಗಳ ಪ್ರಭಾವದಲ್ಲಿ, ಬಸವಣ್ಣನ ನೇತೃತ್ವದಲ್ಲಿ ನಡೆದ ವೈಚಾರಿಕ ಕ್ರಾಂತಿಯೋ ಅಥವಾ ಇದರ ಪರಿಣಾಮವಾಗಿ ನಡೆದುವೆಂದು ಹೇಳಲಾದ ಬಿಜ್ಜಳನ ಕೊಲೆ, ಶರಣರ ಸಾಮೂಹಿಕ ಹತ್ಯೆ ಮತ್ತು ಬಸವಣ್ಣನ `ಲಿಂಗೈಕ್ಯತೆ' ಇತ್ಯಾದಿಗಳು ಸೂಚಿಸುವ ರಕ್ತ ಕ್ರಾಂತಿಯೋ? ಇದಕ್ಕೆ ನಿಶ್ಚಿತ ಉತ್ತರ ಕಂಡುಕೊಳ್ಳಲಾಗದ ಕನ್ನಡ ಸಮಾಜ ತನ್ನೊಳಗೇ ವೀರಶೈವ ಸಮಾಜವೆಂಬುದೊಂದನ್ನು ಸೃಷ್ಟಿಸಿಕೊಂಡು, ಪಡಬಾರದ ಪಡಿಪಾಟಲನ್ನು ಪಡುತ್ತಿದೆ. ಇದರ ಪರಿಣಾಮವಾಗಿ ತನ್ನ ನಿಜವಾದ ನಾಯಕನನ್ನೇ ಕಳೆದುಕೊಂಡು ಅನಾಥವಾಗಿದೆ. ಕಿರೀಟ ಧರಿಸಿಕೊಂಡು ಕುದುರೆ ಮೇಲೆ ಕೂತ ಬಸವಣ್ಣನ ಪ್ರತಿಮೆ ಕನ್ನಡ ಸಮಾಜದ ಈ ದುರಂತವನ್ನು ಅಣಕಿಸಿ ಹೇಳುವಂತಿದೆ. ಬಸವಣ್ಣನನ್ನು ನಿಜವಾಗಿ ಕೊಂದವರು ಯಾರು, ಹೇಗೆ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ವರ್ಗವೊಂದರ ಧಾಷ್ಟ್ರ್ಯವನ್ನು ಸೂಚಿಸುವಂತಿದೆ.
ಇದೆಲ್ಲ ನನ್ನ ಮನಸ್ಸಿನಲ್ಲಿ ಹಾದು ಹೋದದ್ದು, ಇತ್ತೀಚೆಗೆ ಕುವೆಂಪು ವಿಶ್ವವಿದ್ಯಾಲಯದ ಅಧ್ಯಾಪಕ ಗೆಳೆಯರೊಬ್ಬರು, ಇಡೀ ವಚನ ಸಾಹಿತ್ಯವನ್ನು ಹುಡುಕಿದರೂ ಜಾತಿ ವಿರೋಧಿಯಾದ ಒಂದು ವಚನವೂ ಸಿಕ್ಕಲಾರದು ಎಂದು ಹೇಳಿ ನನ್ನನ್ನು ದಂಗುಬಡಿಸಿದಾಗ! ಕಲ್ಯಾಣ ಕ್ರಾಂತಿ ಎಂದರೆ, ವಚನ ಚಳುವಳಿ ಎಂದರೆ, ಜಾತಿ ವಿರೋಧಿ ಚಳುವಳಿ ಎಂದು ಕನ್ನಡದ ಜನ ಶತ ಶತಮಾನಗಳಿಂದ ನಂಬಿ, (ಹುಸಿ) ಹೆಮ್ಮೆಪಡುತ್ತಾ, ಚರ್ಚಿಸುತ್ತಾ, ಮಠ - ಮಂದಿರಗಳನ್ನೂ ಕಟ್ಟುತ್ತಾ ಬರುತ್ತಿರುವಾಗ ಇವರೇನು ಹೀಗೆ ಹೇಳುತ್ತಿದ್ದಾರೆಂದು ವಿವರವಾಗಿ ವಿಚಾರಿಸಿದೆ. ಅವರು ತಮ್ಮ ಮಾತನ್ನು ವಿವರಿಸಿದ್ದು ಹೀಗೆ: ಜಾತಿ ವಿರುದ್ಧ ನಿಂತ ಶರಣರದೇ ಇಂದು ಒಂದು ಜಾತಿಯಾಗಿದೆ ಎಂದು ನಾವು ಸೋಜಿಗ ಅಥವಾ ವಿಷಾದಪಡುವ ಅಗತ್ಯವಿಲ್ಲ. ಏಕೆಂದರೆ ಬಸವಣ್ಣ ಮಾಡಿದ್ದು ಶರಣ ಚಳುವಳಿಯೇ ಹೊರತು, ಜಾತಿ ವಿರೋಧಿ ಚಳುವಳಿಯಲ್ಲ. ಆತ ಶರಣರಾದವರಿಗೆ ಜಾತಿ ಇಲ್ಲವೆಂದನೇ ಹೊರತು, ಜಾತಿ ವ್ಯವಸ್ಥೆಯ ತಾತ್ವಿಕತೆ ಮತ್ತು ರಾಜಕಾರಣದ ವಿರುದ್ಧ ಮಾತನಾಡಲಿಲ್ಲ.
ಇವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡು ವಚನಗಳನ್ನು ಓದಿದರೆ, ವಚನಗಳೆಲ್ಲ ಹಾಗೇ ಕಾಣುತ್ತವೆ! ಜಾತಿ ಉಲ್ಲೇಖವಿರುವ ಎಲ್ಲ ವಚನಗಳೂ `ಶಿವಭಕ್ತನೇ ಕುಲಜ' ಎಂಬ ನಂಬಿಕೆಯ ಆಧಾರದ ಮೇಲೆ ಕಾಯಕದ ಘನತೆ ಮತ್ತು ದಾಸೋಹದ ಮಹತ್ವಗಳನ್ನು ಹೇಳುತ್ತಾ, ಶರಣಸಂಕುಲವೆಂಬ ಕಾಯಕ ಜೀವಿಗಳ ಹೊಸದೊಂದು ಸಮುದಾಯದ ಶೀಲ ಮತ್ತು ಐಕ್ಯತೆಯನ್ನು ಕಟ್ಟುವ ಕಡೆಗೆ ಮುಖಮಾಡಿರುವಂತೆ ತೋರುತ್ತವೆಯೇ ಹೊರತು, ಜಾತಿ ವ್ಯವಸ್ಥೆಯನ್ನು ಇಡಿಯಾಗಿ ಮುಖಾಮುಖಿಯಾಗಿಸಿಕೊಳ್ಳುವ ಪ್ರಯತ್ನಗಳು ಕಾಣುವುದಿಲ್ಲ. `ಕೆಳ' ಮತ್ತು `ಕೀಳು' ಎಂದು ಹೇಳಲಾಗುವ ಜಾತಿ ಮತ್ತು ವೃತ್ತಿಗಳ ವಚನಕಾರರೂ ತಮ್ಮ ವಚನಗಳಲ್ಲಿ ಮೇಲ್ಜಾತಿಗಳ (ವಿಶೇಷವಾಗಿ ವೈದಿಕರ) ಆಚರಣೆಗಳು ಮತ್ತು ಅವರ ವೃತ್ತಿ - ವ್ಯವಹಾರಗಳ ಬಗ್ಗೆ ಖಂಡನೆ - ವಿಡಂಬನೆ ಮಾಡುವರಾದರೂ, ಅದು ತಮ್ಮ `ಶರಣಕುಲ'ದ ಹಿರಿಮೆಯನ್ನು ಸ್ಥಾಪಿಸುವ ಉದ್ದೇಶವನ್ನಷ್ಟೇ ಹೊಂದಿದಂತೆ ತೋರುತ್ತದೆ. ಜಾತಿ ಕುರಿತ ಬಸವಣ್ಣನ ನಿಲುವು ಅತ್ಯಂತ ತೀವ್ರವಾಗಿ ವ್ಯಕ್ತವಾಗುವ
ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ `ಅಯ್ಯ' `ಅಯ್ಯ' ಎನಲಾರೆನಯ್ಯ
ಚೆನ್ನಯ್ಯನೆಮ್ಮಯ್ಯನು
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!
ಎಂಬ ವಚನದಲ್ಲೂ ಎದ್ದು ಕಾಣುವುದು ಶರಣ ಸಂಸ್ಕೃತಿಯ ಆಶಯದಂತೆ ಕೆಳ ಜಾತಿಗಳೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಹಂಬಲವೇ ಹೊರತು, ಜಾತಿ ವಿರೋಧಿ ಧೋರಣೆಯಲ್ಲ ಅನ್ನಿಸುತ್ತದೆ.
ನನ್ನ ಅಧ್ಯಾಪಕ ಮಿತ್ರರ ವಾದದ ಕಣ್ಣಿನಲ್ಲಿ ಕಾಣುವಂತಹ ಇಂತಹ ನೋಟದ ಹಿಂದೆ ಒಂದು ತಾತ್ವಿಕತೆ ಇದೆ. ಅದು ಇತ್ತೀಚೆಗೆ ಕೆಲವು ಸಮಾಜ ಶಾಸ್ತ್ರಜ್ಞರು, ರಾಜಕೀಯ ಶಾಸ್ತ್ರಜ್ಞರು, ಇತಿಹಾಸಜ್ಞರು ಮತ್ತು ಸಂಸ್ಕೃತಿ ಚಿಂತಕರ ವಿಶೇಷ ಗಮನ ಸೆಳೆಯುತ್ತಿರುವ (ಕನ್ನಡಿಗರೇ ಆದ) ಬೆಲ್ಜಿಯಂ ನಿವಾಸಿ ಭಾರತೀಯ ಶಾಸ್ತ್ರಜ್ಞರಾದ ಬಾಲಗಂಗಾಧರರ ಸಾಮಾಜಿಕ ಚಿಂತನೆ. ಅವರ ಪ್ರಕಾರ, `ಹಿಂದೂ ಧರ್ಮ'ವೆಂಬುದೇ ಒಂದು ಕೃತಕ ರಾಜಕೀಯ ರಚನೆ. ವಿಶೇಷವಾಗಿ ಪಾಶ್ಚಾತ್ಯರು ತಮ್ಮ `ಕ್ರಿಶ್ಚಿಯನ್' ಧರ್ಮದ ಎರಕದಲ್ಲಿ ರೂಪಿಸಿದ ಹಿಂದೂ ಧರ್ಮವದು. ಹಾಗೆ ನೋಡಿದರೆ, ಹಿಂದೂ ಧರ್ಮವೆಂಬುದೇ ಇಲ್ಲ. ಅದೊಂದು ಸಂಪ್ರದಾಯಗಳ ಪರಂಪರೆ ಅಷ್ಟೆ. ಅದಕ್ಕೆ ಕ್ರಿಶ್ಚಿಯಾನಿಟಿ ಅಥವಾ ಇಸ್ಲಾಂನಂತೆ (ಅಥವಾ ಇನ್ನಾವುದೇ ಮಧ್ವಪ್ರಾಚ್ಯ ಮೂಲವಾದ `ರಿಲಿಜನ್'ನಂತೆ) ಸಾಮಾನ್ಯವಾದ ಒಂದು ಅನನ್ಯ ದೈವವಾಗಲಿ, `ದೈವದತ್ತ' ಧರ್ಮಗ್ರಂಥವಾಗಲೀ. ತಾತ್ವಿಕತೆಯಾಗಲೀ ಅಥವಾ ಧಾರ್ಮಿಕ ಸಂಸ್ಥೆಯಾಗಲೀ ಇಲ್ಲ. ಹಾಗಾಗಿ ಅದು ಅವರ `ರಿಲಿಜನ್'ನಂತಹ ರಿಲಿಜನ್ ಅಲ್ಲ. ಹಾಗಾಗಿ ಭಾರತದ 'ಧರ್ಮ' ಎಂಬ ಸಾರ್ವತ್ರಿಕ ಶಬ್ದ ನಮ್ಮ ಆಧುನಿಕ ಚರ್ಚೆ ವ್ಯವಹಾರಗಳಲ್ಲಿ `ರಿಲಿಜನ್' ಎಂಬ ನಿರ್ದಿಷ್ಟ ಅರ್ಥ ಪಡೆದು ತರ್ಜುಮೆಯಾದುದರಿಂದ ಅನೇಕ ಅನಾಹುತಗಳಾಗಿವೆ. ಜಾತಿ ವ್ಯವಸ್ಥೆ ಕುರಿತಂತೆ ನಾವು ಕಟ್ಟಿಕೊಂಡಿರುವ ಚರಿತ್ರೆಯೂ ಇಂತಹ ಅನಾಹುತಗಳಲ್ಲೊಂದು. ಹಾಗಾಗಿ ವಚನ ಚಳುವಳಿಯನ್ನು ಜಾತಿ ವಿರೋಧಿ ಚಳುವಳಿಯನ್ನಾಗಿ ನೋಡುವ ನಮ್ಮ ಕ್ರಮವೇ ತಪ್ಪಾಗಿದ್ದು, ಅದರ ಸಾಮಾಜಿಕ ಚಲನಶೀಲತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಎಡವುತ್ತಿದ್ದೇವೆ.
ಈ ವಾದ, ಶರಣರನ್ನು ಒಂದು ಜಾತಿಯಾಗಿ (ಮತ್ತು ಅದರೊಳಗೆ ಹಲವು ಉಪಜಾತಿಗಳನ್ನಾಗಿ) ಜಡಗೊಳಿಸಿ `ಕಾಪಾಡು'ತ್ತಿರುವ ನಮ್ಮ ಮಠಾಧೀಶರಿಗೆ ಪ್ರಿಯವಾಗಬಹುದು. ಆದರೆ ವಚನ ಚಳುವಳಿ ನಿಜವಾಗಿ ಜಾತಿ ವ್ಯವಸ್ಥೆ ವಿರುದ್ಧ ದಂಗೆಯೇಳಲಿಲ್ಲವೇ? ಹಾಗಿಲ್ಲದಿದ್ದರೆ, ಬಿಜ್ಜಳನಿಗೇಕೆ ಕಷ್ಟವೊದಗಿ ಆತ ತನ್ನ ಪ್ರಿಯ ಮಿತ್ರನೇ ಆಗಿದ್ದ ಬಸವಣ್ಣನ ಕಾರ್ಯಾಚರಣೆಗಳ ವಿರುದ್ಧ ತಿರುಗಿ ಬೀಳುತ್ತಿದ್ದ? ಇಂತಹ ಬರೀ ಚೂಪಾದ ಪ್ರಶ್ನೆಗಳಿಗೆ ಅವಕಾಶ ಒದಗಿಬರುವುದು, ನಾವು ಬಸವಣ್ಣನ ಕ್ರಾಂತಿಯನ್ನು ಆಧುನಿಕ ಕಾಲದ ಕ್ರಾಂತಿಗಳ ಕಲ್ಪನೆಯ ಚೌಕಟ್ಟಿನಲ್ಲಿಟ್ಟು ಅರ್ಥ ಮಾಡಿಕೊಳ್ಳಲೆತ್ನಿಸುವುದರಿಂದ. ಹಾಗಾಗಿಯೇ ನಾವು (ಮತ್ತು ಹಲವು ಸಾರ್ವಜನಿಕ ಭಾಷಣಕಾರರು) ಸುಲಭವಾಗಿ ಬಸವಣ್ಣನೇ ಜಗತ್ತಿನ ಮೊದಲ ಸಮಾಜವಾದಿ, ಕಮ್ಯೂನಿಸ್ಟ್ ಎಂದೆಲ್ಲ ಹೆಮ್ಮೆಯಿಂದ ಘೋಷಿಸತೊಡಗುತ್ತೇವೆ. ಇದೆಲ್ಲ ಸಮಾಜವಾದವೆಂದರೇನು, ಕಮ್ಯೂನಿಸಂ ಎಂದರೇನು ಎಂದು ನಿಜವಾಗಿ ತಿಳಿಯದವರ ಮಾತು. ಬಸವಣ್ಣ ತನ್ನ ಕಾಲ - ದೇಶಗಳ ಕೂಸು. ಅವನಿಗೆ ಅವನದೇ ಆದ - ರೂಪಿಸಿಕೊಂಡ - ರಾಜಕೀಯ ಪರಿಭಾಷೆ ಇದೆ. ಆ ಮೂಲಕ - ಅದರ ಮಾತೃಕೆಗಳಲ್ಲಿ - ಅವನ ಕ್ರಾಂತಿ ಸಂಭವಿಸಿದೆ. ಆ ರಾಜಕೀಯ ಪರಿಭಾಷೆಯನ್ನು ಅರಿಯದ ಹೊರತು ನಾವು ಆ ಕ್ರಾಂತಿಯನ್ನು, ಅದರ ವೈಫಲ್ಯವನ್ನು, ಅದರ ಹಿಂದಿನ ಕಾರಣಗಳನ್ನು ಮತ್ತು ಅದರ ಇಂದಿನ ಅವಶೇಷ ರೂಪಗಳನ್ನು ಅರ್ಥಮಾಡಿಕೊಳ್ಳಲಾರೆವು.
ಆದರೆ ದುರದೃಷ್ಟಕರ ಸಂಗತಿಯೆಂದರೆ, ವಚನ ಸಾಹಿತ್ಯದ ಹೊರತಾಗಿ ಈ ಸಾಹಸವನ್ನರಿಯಲು ಇನ್ನಾವ ಆಕರಗಳು ನಮಗೆ ಸಿಗುತ್ತಿಲ್ಲ. ಲಭ್ಯ ಶಾಸನಗಳು ಹಾಗೂ ಜಾನಪದ ಐತಿಹ್ಯಗಳನ್ನು ಸಾಹಿತ್ಯದ ಜೊತೆ ಸಮನ್ವಯಿಸಿ ಹೊಸ ಆಕರ ಆಧಾರಗಳನ್ನು ನಿರ್ಮಿಸಿಕೊಳ್ಳ ಹೊರಟರೆ, ಆ ಆಧಾರಗಳು ಸೂಚಿಸುವ ತೀರ್ಮಾನಗಳು ಇಂದಿನ ಬಸವವಾದಿಗಳಿಗೆ ಪಥ್ಯವಾಗುವುದಿಲ್ಲ. ಉದಾಹರಣೆಗೆ ಇತ್ತೀಚೆಗೆ ಬಂಜಗೆರೆ ಜಯಪ್ರಕಾಶರು `ಅನುಮಾನಿತ ಸತ್ಯ'ವೆಂದು ಪ್ರಸ್ತುತ ಪಡಿಸಿದ ಬಸವಣ್ಣನ ಜಾತಿ ಮೂಲ ಕುರಿತ ಚರ್ಚೆಯನ್ನು ಅದು ಬಸವಣ್ಣನ ತಾಯಿಯ ಶೀಲವನ್ನೇ ಪ್ರಶ್ನಿಸುವಂತಿದೆ ಎಂಬ ಅಶಿಕ್ಷಿತ ನೆಪವೊಡ್ಡಿ, ಅದಕ್ಕೆ ಅಧಿಕೃತ ಬಹಿಷ್ಕಾರವನ್ನೇ ಹಾಕಿಸಲಾಯಿತು. ಆದರೆ ಬಸವಣ್ಣನ ಹೆಸರಿನಲ್ಲೇ ಇರುವ ಮತ್ತು ಅನೇಕ ಕಟ್ಟಾ ವೀರಶೈವ ಸಂಶೋಧಕರ ಮತ್ತು ವಿದ್ವಾಂಸರ ಸಂಪಾದಕತ್ವದಲ್ಲೇ ಹಲವು ಕಡೆ ದಾಖಲಾಗಿರುವ ಈ ವಚನ ಸೂಚಿಸುವ ಶೀಲ ಸಂಸ್ಕೃತಿಯಾದರೂ ಎಂತಹುದು? ಅದು ಇಂದಿನ ಈ `ಶೀಲವಾದಿ'ಗಳ ಶೀಲ ಕಲ್ಪನೆಯನ್ನೇ ಒಡೆದು ಹಾಕುವಂತಿದೆಯಲ್ಲಾ?:
... ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನ್ನು ಸಂಗಮದೇವಾ, ನೀ ಜಂಗಮ ರೂಪವಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ಮಾಯಕ್ಕೆ ಮರುಗಿನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಗೆ ಮನದೊಡೆಯ...
ಹಾಗೇ, ಈ ವಚನ ಭಾಗದೊಂದಿಗೇ ಇನ್ನೊಂದಿಷ್ಟು ವಚನಗಳನ್ನು ಉದ್ಧರಿಸುತ್ತಾ ಖ್ಯಾತ ಸ್ತ್ರೀವಾದಿ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಅವರು ಹೆಣ್ಣನ್ನು ಕುರಿತ ಬಸವಣ್ಣನ `ಊಳಿಗಮಾನ್ಯಶಾಹಿ' ನಿಲುವನ್ನು ವಿಷದೀಕರಿಸಿದ್ದಾರಲ್ಲಾ? (ಹಾಗಾದರೆ ಬಸವಣ್ಣ ಎಂತಹ ಸಮಾಜವಾದಿ?) ಆಶಾದೇವಿಯವರು ಮುಂದುವರಿದು, ಬಸವಣ್ಣನ ಕ್ರಾಂತಿ, ಕೆಳ - ದಲಿತ ಜಾತಿಗಳ ವಿಷಯದಲ್ಲಿ ನಿಜವಾದಷ್ಟು ಹೆಣ್ಣಿನ ವಿಷಯದಲ್ಲಿ ಆಗಿಲ್ಲ ಎಂದೂ ಹೇಳುವರಲ್ಲಾ? (ಅವರ 'ಸ್ತ್ರೀಮತವನ್ನುತ್ತರಿಸಲಾಗದೆ' ನೋಡಿ)
ಬಸವಣ್ಣನ ಕ್ರಾಂತಿಯನ್ನು ನಮ್ಮ ಪ್ರಜ್ಞೆಯಾಳದ ನೋವಿನ ಹಲ್ಲಿನಂತೆ ಸಂವೇದಿಸದೆ, ನಮ್ಮೆಲ್ಲ ಆಧುನಿಕ ನಿರೀಕ್ಷೆಗಳನ್ನು ಅದರಲ್ಲಿ ಕಂಡು ನಲಿಯಲು ಅಥವಾ ನುಲಿಯಲೆತ್ನಿಸುವ ಪ್ರವೃತ್ತಿಯೇ ಇಷ್ಟೆಲ್ಲ ತಾತ್ವಿಕ, ಭಾವನಾತ್ಮಕ ಪಡಿಪಾಟಲುಗಳಿಗೆ ಕಾರಣವಾಗಿದೆಯೆಂದು ನನಗನ್ನಿಸುತ್ತದೆ. ವರ್ತಮಾನವನ್ನು ಚರಿತ್ರೆಯ ಮುಂದುವರಿದ ರೂಪವಾಗಿಯಷ್ಟೇ ನೋಡುವ ಸರಳ ಚಾರಿತ್ರಿಕ ದೃಷ್ಟಿಯೇ ಇದಕ್ಕೆ ಕಾರಣವಾಗಿದೆ. ಇದು ಕಲ್ಯಾಣ ಕ್ರಾಂತಿಯ ಹಿಂದೆ ಯಾವೆಲ್ಲ ಕಾಲ, ದೇಶ ವಿಶಿಷ್ಟ ಚಾರಿತ್ರಿಕ ಒತ್ತಡಗಳು ಕೆಲಸ ಮಾಡಿವೆ ಎಂಬುದರ ಕಡೆ ಗಮನವನ್ನೇ ಹರಿಸದ ನಮ್ಮ ನೋಟದಲ್ಲಿನ, ವರ್ತಮಾನ ಸ್ಥಿತವಾದ `ತುಂಬು' ಸಾಮಾಜಿಕ - ಸಾಹಿತ್ಯಕ - ಸಾಂಸ್ಕೃತಿಕ ಸ್ಥೂಲತೆಯೇ ಆಗಿದೆ. ಕಲ್ಯಾಣ ಕ್ರಾಂತಿಗೆ ಜಾತಿ - ಧರ್ಮಗಳಲ್ಲದೇ ಆ ಕಾಲಕ್ಕೆ ವಿಶಿಷ್ಟವಾದ ರಾಜಕೀಯ ಅರ್ಥಶಾಸ್ತ್ರದ ಆಯಾಮಗಳೂ ಇರಬಹುದಲ್ಲವೇ? ಜಾತಿ ವ್ಯವಸ್ಥೆಯ `ಬಂಧನ'ಗಳೇ ಅವುಗಳೊಳಗಿನ ಜಾತಿಗಳ `ಬಿಡುಗಡೆ'ಯ ಶಕ್ತಿಗಳನ್ನು ಉತ್ಪಾದಿಸುತ್ತಿದ್ದು; 12ನೇ ಶತಮಾನದ ಹೊತ್ತಿಗೆ ಜಾತಿ ವ್ಯವಸ್ಥೆಯೊಳಗಿನ ಈ ರಾಜಕಾರಣ ಯಾವ ಹಂತ ತುಲುಪಿತ್ತು ಎಂಬುದನ್ನು ಪರಿಶೀಲಿಸಬೇಕಲ್ಲವೇ? ಈ ಕಾಲಾವಧಿಯಲ್ಲಿನ ಆರ್ಥಿಕ ಚಟುವಟಿಕೆಗಳು ವಿನ್ಯಾಸಗೊಳ್ಳುತ್ತಿದ್ದ ರೀತಿ, ಅವು ರೂಪಿಸುತ್ತಿದ್ದ ಹೊಸ ಹಿತಾಸಕ್ತಿಗಳು ಮತ್ತು ಆ ಮೂಲಕ ಸೃಷ್ಟಿಯಾಗುತ್ತಿದ್ದ ಸಾಮಾಜಿಕ ವೈರುಧ್ಯಗಳು ಹಾಗೂ ಅವು ಮತ್ತೆ ಧಾರ್ಮಿಕ ನೆಲೆಯಲ್ಲಿ ಉಂಟುಮಾಡುತ್ತಿದ್ದ ಪರಿಣಾಮಗಳ ಅಧ್ಯಯನವನ್ನು ನಮ್ಮ ಸಾಮಾಜಿಕ - ಸಾಂಸ್ಕೃತಿಕ - ಸಾಹಿತ್ಯಕ ಅಧ್ಯಯನದ ಜೊತೆಗೆ ಜೋಡಿಸಿ ನೋಡಬೇಕಲ್ಲವೆ?
ಬಂಜಗೆರೆ ಜಯಪ್ರಕಾಶರ `ಕನ್ನಡ ರಾಷ್ಟ್ರೀಯತೆ' ಸಂಪ್ರಬಂಧದಲ್ಲಿ ಕಾಣುವ ಇಂತಹದೊಂದು ಬಹುಶಿಸ್ತೀಯ ಅಧ್ಯಯನದ ಪ್ರಯತ್ನದ ಹೊರತಾಗಿ ನಮ್ಮ ಇತಿಹಾಸಕಾರರಾಗಲಿ, ಸಮಾಜಶಾಸ್ತ್ರಜ್ಞರಾಗಲಿ ಈ ದಿಕ್ಕಿನಲ್ಲಿ ಯಾವುದೇ ಗಮನಾರ್ಹ ಕೆಲಸ ಮಾಡಿರುವುದು ನನ್ನ ಗಮನಕ್ಕಂತೂ ಬಂದಿಲ್ಲ. ಹಾಗಾಗಿಯೇ ಕಲ್ಯಾಣ ಕ್ರಾಂತಿ ಎಂಬುದು ಸಾಹಿತ್ಯ ವಿಮರ್ಶಕರ, ಸಂಸ್ಕೃತಿ ಚಿಂತಕರ, ರಾಜಕಾರಣಿಗಳ ಮತ್ತು ಮಠಾಧಿಪತಿಗಳ `ಕಲ್ಪನಾಶೀಲ' ಚಟುವಟಿಕೆಗಳ ಆಡೊಂಬಲವಾಗಿದೆ! ಹನ್ನೆರಡನೇ ಶತಮಾನದ ಹೊತ್ತಿಗೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಯಗಾರ - ಶೂದ್ರ - ವರ್ಗವೇ ವ್ಯಾಪಾರೀ - ವೈಶ್ಯ - ವರ್ಗವಾಗಿ ಬೆಳೆದು, ಜಾತಿ ನೆಲೆಯ ಸಂಬಂಧಗಳನ್ನು ತಲೆಕೆಳಗು ಮಾಡತೊಡಗಿತ್ತು. ಮತ್ತು ಈ ಸಾಮಾಜಿಕ ಸ್ಥಿತ್ಯಂತರದ ಸಂದರ್ಭವನ್ನು ನಿಭಾಯಿಸುವ ಜವಾಬ್ದಾರಿ ಮಂತ್ರಿಯಾಗಿದ್ದ ಬಸವಣ್ಣನದಾಗಿತ್ತು; ಈ ನಿಭಾವಣೆಯ ಕಥೆಯೇ ಕಲ್ಯಾಣ ಕ್ರಾಂತಿಯ ಕಥೆ ಎಂದು ಬಂಜಗೆರೆಯವರು, ಆರ್.ಎನ್.ನಂದಿಯವರ ಸಂಶೋಧನೆಗಳನ್ನು - ಇದು ಬಲವಂತದ ಮಾರ್ಕ್ಸವಾದಿ ವ್ಯಾಖ್ಯಾನ ಎಂದು ಹೇಳಲಾಗುವುದಾದರೂ - ಉಲ್ಲೇಖಿಸಿ ಆಡಿರುವ ಮಾತುಗಳಿಗೆ ಇನ್ನಷ್ಟು ಆಧಾರಗಳೂ, ಬೆಂಬಲವೂ ಬೇಕಿದೆ, ನಿಜ. ಆದರೆ ನಮ್ಮ ಹೆಮ್ಮೆಯಾಗಿರುವ ಕಲ್ಯಾಣ ಕ್ರಾಂತಿಯನ್ನು ಇಂದಿನ ಸಂದರ್ಭಕ್ಕೆ ಪ್ರಸ್ತುತಪಡಿಸಿಕೊಂಡು ಅರ್ಥಮಾಡಿಕೊಳ್ಳಬೇಕಾದರೆ, ಈ ಒಂದು `ಲೌಕಿಕ' ದೃಷ್ಟಿಯೂ ಅವಶ್ಯಕ. ಆಗ ಬಸವಣ್ಣ, ಸ್ಥಿತ್ಯಂತರದಲ್ಲಿರುವ ವರ್ಗವೊಂದರ ಲೌಕಿಕ ನಾಯಕನಾಗಿಯೇ ಕಾಣತೊಡಗಿ; ಕಲ್ಯಾಣ ಕ್ರಾಂತಿಯ ರೋಮಾಂಚನದ ಹಲವು ಆಯಾಮಗಳು ತುಸು ಮಸುಕಾಗ ತೊಡಗಿ, ಚಾರಿತ್ರಿಕ ವಾಸ್ತವದ ನೆಲೆಗಳು ಮುನ್ನೆಲೆಗೆ ಬರತೊಡಗುತ್ತವೆ. ಮತ್ತೂ ಮುಖ್ಯವಾಗಿ, ಈ `ಕ್ರಾಂತಿ' ಎಲ್ಲರಿಗೂ ಎಲ್ಲ ಕನಸುಗಳನ್ನೂ ಒದಗಿಸುವ ಇಕ್ಕಟ್ಟಿನಿಂದ ಪಾರಾಗುತ್ತದೆ. ಬಸವಣ್ಣ ತನ್ನ ಕಾಲ ದೇಶಗಳ ಮಿತಿಗಳೊಳಗೆ ಒಬ್ಬ ಮನುಷ್ಯ ಮಾತ್ರನಾಗಿ ಏನೆಲ್ಲ ಎತ್ತರಗಳನ್ನು ಏರಬಲ್ಲವನಾಗಿದ್ದನೋ ಅಷ್ಟು ಎತ್ತರಗಳನ್ನು ಮಾತ್ರ ಏರಿದ, ಕಟು `ಚಾರಿತ್ರಿಕ ವಾಸ್ತವ'ದ ಚಿತ್ರ ದೊರಕುತ್ತದೆ.
ಹಾಗೇ ಈ ಕ್ರಾಂತಿ 15 - 16ನೇ ಶತಮಾನದ ಹೊತ್ತಿಗೆ ಸೃಷ್ಟಿಸಿದ್ದ ಪ್ರತಿ ಕ್ರಾಂತಿಯ ಪರಿಣಾಮಗಳ - ಹಲವು ಶೂನ್ಯ ಸಂಪಾದನೆಗಳೂ ಸೇರಿದಂತೆ, ಕಲ್ಲುಮಠದ ಪ್ರಭುದೇವರ 'ಲಿಂಗಲೀಲಾ ವಿಲಾಸ ಚಾರಿತ್ರ'ದಿಂದ ಹಿಡಿದು ವಿರೂಪಾಕ್ಷ ಪಂಡಿತನ `ಚೆನ್ನಬಸವ ಪುರಾಣ'ದವರೆಗಿನ ವೀರಶೈವ ಧರ್ಮದ ಸಂಸ್ಥೀಕರಣ ಮತ್ತು ಸಂಸ್ಕೃತೀಕರಣದ ಪ್ರಯತ್ನಗಳು - ಒಡಲಿನಿಂದಲೇ ಏಕೆ ಮತ್ತು ಹೇಗೆ ಕರ್ನಾಟಕದ ತತ್ವಪದಗಳ ಮತ್ತು ಮಲೆಮಾದೇಶ್ವರ, ಮಂಟೇಸ್ವಾಮಿ ಇತ್ಯಾದಿ ಜನಪದ ಮಹಾಕಾವ್ಯಗಳ ವಿಶಿಷ್ಟ ಸಾಮಾಜಿಕ (ಬರೀ ಸಾಹಿತ್ಯಕವಲ್ಲ ಎನ್ನುವ ಅರ್ಥದಲ್ಲಿ) ಪ್ರತಿಭಟನೆಗಳು ಪರಂಪರೆ ಆರಂಭವಾಯಿತು ಎಂಬುದು ಗೊತ್ತಾಗುತ್ತದೆ. ಆ ಮೂಲಕವೇ ನಿಜವಾದ ಬಸವ ಪರಂಪರೆ ಎಲ್ಲಿ, ಯಾವ ನೆಲೆಯಲ್ಲಿ ಹೇಗೆ ಮುಂದುವರಿದಿದೆ ಎಂಬುದೂ ಅರಿವಿಗೆ ಬರುತ್ತದೆ. ಆಗ ಕಲ್ಯಾಣ ಕ್ರಾಂತಿ ಕನ್ನಡ ಪ್ರಜ್ಞೆಯ ಪಾಲಿಗೆ ಏಕೆ ಮತ್ತು ಹೇಗೆ ನೋವಿನ ಹಲ್ಲಾಗಿದೆ ಎಂಬುದೂ ಗೊತ್ತಾಗುತ್ತದೆ. ಜೊತೆಗೇ ಬಾಲಗಂಗಾಧರರ ಶಿಷ್ಯರಿಗೂ, ಸ್ತ್ರೀವಾದಿ ಅಥವಾ ಇನ್ನಾವದೇ ವಾದಿಗಳಾದ ವಿಮರ್ಶಕರಿಗೂ ತಮ್ಮ ನೋಟಗಳು ಹೇಗೆ ಕೇವಲ ಶಿಕ್ಷಿತ ನೋಟಗಳಾಗಿ - ಅಧ್ಯಯನಗಳಿಂದ ತಮಗೆ ಬೇಕಾದ್ದನ್ನಷ್ಟೇ ಪಡೆಯುವ - ಆಧುನಿಕ ಅಧ್ಯಯನಗಳ `ಸ್ವಾರ್ಥಪರತೆ'ಯ ಪ್ರತೀಕಗಳಾಗಿವೆ ಎಂಬುದೂ ತಿಳಿಯುತ್ತದೆ.
ಇನ್ನೂ ಮುಂದುವರಿದು ಹೇಳುವುದಾದರೆ, ಇದು ನಮ್ಮ ವೀರಶೈವ ಮಠಾಧಿಪತಿಗಳ ಆತ್ಮ ಸಾಕ್ಷಿಯನ್ನೂ ಕೆಣಕಿ, ಬಸವ ಪರಂಪರೆಯ ನಿಜವಾದ ವಾರಸುದಾರಿಕೆ ಎಂದರೆ ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲಿಗೆ ನೋವು ನಿವಾರಕಗಳ ಚಿಕಿತ್ಸೆಗೆ ಬದಲಾಗಿ ಬೇರು ಮುಟ್ಟದ(Root canal?) ಚಿಕಿತ್ಸೆ ನೀಡುವುದೇ ಆಗಿದೆ ಎಂಬ ಅರಿವನ್ನೂ ಹುಟ್ಟಿಸಬಹುದಾಗಿದೆ. ಅದಕ್ಕಾಗಿ ಅವರು ಬಸವ ಪರಂಪರೆಯ ನಿಜವಾದ ಬೇರು ಈಗ ಎಲ್ಲಿದೆ ಎಂಬುದರ ಕಡೆಗೆ ಗಮನ ಹರಿಸಬೇಕಾಗಿದೆ.

- Login or register to post comments
- 1174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಪ್ರತಿಕ್ರಿಯೆಗಳು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
"... ಆತ ಶರಣರಾದವರಿಗೆ ಜಾತಿ ಇಲ್ಲವೆಂದನೇ ಹೊರತು, ಜಾತಿ ವ್ಯವಸ್ಥೆಯ ತಾತ್ವಿಕತೆ ಮತ್ತು ರಾಜಕಾರಣದ ವಿರುದ್ಧ ಮಾತನಾಡಲಿಲ್ಲ.."
ಬಸವಣ್ಣನ ಜಾತಿ ವೆವಸ್ತೆ ಎದುರು ಮಾತನಾಡಿದ ಅನ್ನುವುದಕ್ಕೆ:-
೧. ದಲಿತನ ಜೊತೆ ಹಾರುವ ಹೆಣ್ನನ್ನು ಮದುವೆ ಮಾಡಿಸಿದ್ದು .ಇದರಿಂದನೆ ಕಲ್ಯಾಣ ಸಿಡಿದೇಳುವಿಕೆ/ಕ್ರಾಂತಿ ಯಾಗಿದ್ದು
೨. ಇವನಾರವ ಇವನಾರವ ಎನ್ನಬೇಡಿರಯ್ಯ, ಇವ ನಮ್ಮವ ಇವ ನಮ್ಮವ ಎನ್ನಿರಯ್ಯ ಎನ್ನುವ ವಚನ
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ನೀವು ಒಟ್ಟಾರೆಯಾಗಿ ಏನ್ ಹೇಳಬೇಕು ಅಂತಿದಿರಾ ಅನ್ನೋದೇ ಗೋಜಲು ಗೋಜಲಾಗಿದೆ.
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಅವರು ಸಿಪಿ ಅಯ್ ತತ್ವಗಳನ್ನು ಬಸವಣ್ಣನಲ್ಲಿ ನೋಡಲು ಮೊಗಸುತ್ತಿದ್ದಾರೆ.
-
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ನಾಗಭೂಷಣರೆ,
ಬಸವಣ್ಣನ ಕಾಲವನ್ನು ಮೀರಿ ಅವನನ್ನು ಗ್ರಹಿಸ ಹೊರಡುವ ನಮ್ಮ ಕಾಲದ ತುಡಿತದ ಬಗ್ಗೆ ಹೊಸ ಎಚ್ಚರ ಮೂಡುವಂತೆ ಬರೆದಿದ್ದೀರ. ಜಾತಿಯ ಬಗೆಗಿನ ಶರಣರ ನಿಲುವನ್ನು ಮತ್ತೊಮ್ಮೆ ನೋಡುವ ಅಗತ್ಯವೂ ತಿಳಿಯಿತು. ಥ್ಯಾಂಕ್ಸ್.
ವೈಭವರೆ - ತಲೆದಂಡ ನಾಟಕದಲ್ಲಿ ಬಸವಣ್ಣ ಆ ಮದುವೆಯ ಬಗ್ಗೆ ತಳಮಳ ವ್ಯಕ್ತಪಡಿಸಿರಬಹುದಾದಂತೆ ಚಿತ್ರಿಸಿದೆ. ಅಲ್ಲದೆ, ಅದು ಲೇಖನದಲ್ಲಿ ಹೇಳಿದಂತೆ ಶರಣರ ನಡುವಿನ ಮದುವೆ ಎಂಬುದೇ ಮುಖ್ಯವಿರಬೇಕು. ಇನ್ನು ನೀವು ಕೊಟ್ಟ ವಚನದ ಸಾಲು - ಕಲ್ಯಾಣದ ರಕ್ತ ಕ್ರಾಂತಿಯಾದ ಮೇಲೆ ಬಸವಣ್ಣ ಅನುಭವಿಸಿರಬಹುದಾದ ಅನಾಥ ಪ್ರಜ್ಞೆಯ ಸೂಚನೆ ಕೊಡುವ ವಚನವಿರಬಹುದು ಎಂಬ ಊಹೆ ಇದೆ. ಇದನ್ನು ಡಾ|| ಎಂ.ಎಂ.ಕಲಬುರ್ಗಿಯವರು ವಚನಕಾರರ ಬಗ್ಗೆ ಮಾತುಕತೆಯಲ್ಲಿ ಹೇಳಿದ್ದು.
ಸಂಗನಗೌಡರೆ, ನನಗೆ ಇಲ್ಲಿ ವಚನಕಾರರ ಹೆಸರಲ್ಲಿ ನಮ್ಮ ಪ್ರಸಕ್ತ ಸಾಹಿತ್ಯ, ಸಂಸ್ಕೃತಿಯ ಚೈತನ್ಯದ ಬಗ್ಗೆ ಚಿಂತನೆ ಮಾಡಿದ್ದಾರೆ ಅನಿಸಿತು.
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಅನಿವಾಸಿ,
ನೀವು ತಲೆದಂಡ ಅಂದರೆ ನಾನು 'ಜಗಜೋತಿ ಬಸವೇಶ್ವರ' ಸಿನಿಮಾ ನೋಡಿ ಅದು ನೀವು ಹೇಳಿದಂತೆ ಇಲ್ಲ ಅನ್ನುತ್ತೇನೆ.
ತಲೆದಂಡ ಅತವ ಜಗಜೋತಿ ಬಸವೇಶ್ವರ ಈ ನಾಟಕ/ಸಿನಿಮಾಗಳಲ್ಲಿ ಇರುವುದೆ ದಿಟವೆ.
ಈ ಬರಹ ಬರೆದಿರುವವರು ೧೨ನೆ ಶತಮಾನದಲ್ಲಿದ್ದ ಬಸವಣ್ಣನಲ್ಲಿ ಸಿಪಿಅಯ್ ತತ್ವಗಳನ್ನು ಹುಡುಕಲು ಮೊಗಸುತ್ತಿದ್ದಾರೆ. ಇದು ನಗೆಪಾಟಲು.
ಬರೀ ಬಸವಣ್ಣ ಅಲ್ಲ, ಶರಣರೆಲ್ಲರು ಜಾತಿಯಿಲ್ಲದ ಸಮಾಜವನ್ನು ಕಟ್ಟಲ್ಲು ಮೊಗಸಿದರು ಎನ್ನುವುದು ದಿಟ. ಹಾಗೆ ಶರಣರಿಗೆ ತಮ್ಮದೇ ಆದ ತತ್ವಗಳನ್ನು ಕಟ್ಟಿಕೊಂಡರು(ಕಾಯಕ, ದಾಸೋಹ), ಈ ಎಲ್ಲ ತತ್ವಗಳು ಜಾತಿಗಳ ಎಲ್ಲೆಗಳನ್ನು ಮೀರಿತ್ತು. ಆದರೆ ಇವರು(ನಾಗಬೂಶಣರವರು) ಹೇಳುತ್ತಿರುವುದು ಶರಣರು ಬೇರೆ ಜಾತಿ ಕಟ್ಟಿದರು ಅತವ ಜಾತಿ ಕಟ್ಟುವ ಹವಣಿಕೆಯಲ್ಲಿದ್ದರು ಅಂತ. ಇದನ್ನು ನಾನು ಒಪ್ಪುವುದಿಲ್ಲ. ಆದರೂ ಕಲ್ಯಾಣ ಸಿಡಿದೇಳುವಿಕೆಯಾದ ಮೇಲೆ ಶರಣರು ದಾರಿ ತಪ್ಪಿದರು ಅನ್ನುವುದು ಕೂಡ ದಿಟವೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ವೈಭವರೆ,
ತಲೆದಂಡದ ಮಾತು ಎತ್ತಿದ್ದು ಅದು ಸತ್ಯ ಎಂಬುದಕ್ಕಲ್ಲ. ಆದರೆ, ಹಾಗೂ ನೋಡಿದ್ದಾರೆ ಎಂಬ ಕಾರಣಕ್ಕೆ. ಬಸವಣ್ಣನ ಬಗ್ಗೆಗಿನ "ಜನಪ್ರಿಯ" ಚಿತ್ರಿಕೆಗಳನ್ನೇ ನೀವು ಸರಿ ಅನ್ನುತ್ತಿದ್ದೀರ. ಅದು ನಿಮಗೆ ಬಿಟ್ಟದ್ದು. ನನಗೆ ಅನಿಸಿದಂತೆ, ಈ ಬರಹದ ಉದ್ದೇಶ ಬಸವಣ್ಣ/ಕ್ರಾಂತಿ ನಮ್ಮ ಸಾಂಸ್ಕೃತಿಕ ಚಿಂತನೆಯಲ್ಲಿ ಹೇಗೆ ತೋರುತ್ತಿದೆ ಎಂಬ ಬಗ್ಗೆ ಒಂದು ಚಿಂತನೆ.
ನೀವು ಬರಹವನ್ನು ಪೂರ್ತಿಯಾಗಿ ಓದಿದಿರಾ? ಓದಿದ್ದರೆ ಹೀಗೆ ಹೇಳುತ್ತಿರಲಿಲ್ಲ ಅನಿಸುತ್ತದೆ. ದಯವಿಟ್ಟು ಬರಹದಲ್ಲಿರುವ ಈ ಸಾಲುಗಳನ್ನು ಗಮನಿಸಿ:
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
"...ಬಸವಣ್ಣನ ಬಗ್ಗೆಗಿನ "ಜನಪ್ರಿಯ" ಚಿತ್ರಿಕೆಗಳನ್ನೇ ನೀವು ಸರಿ ಅನ್ನುತ್ತಿದ್ದೀರ.."
ಇಲ್ಲ. ನಾನು ಹಾಗೆ ಹೇಳುತ್ತಿಲ್ಲ. ತಲೆದಂಡ ಯಾಕೆ ಸಾರ್, ೧೬-೧೭ನೆ ಶತಮಾನದ ಕೆಲವು ಜಿನ ಗ್ರಂತಗಳಲ್ಲಿ ಬಸವಣ್ಣನನ್ನು 'ದಂಗೆಕೋರ', ಜಿನ ದರುಮದನಾಶಕ ಎಂದು ಹೇಳಲಾಗಿದೆ. ಇದು ಸರಿ/ತಪ್ಪು ಅಂತ ನಾನು ಈಗ ಹೇಳಲಾಗುತ್ತದಯೆ?
"...ಸುಲಭವಾಗಿ ಬಸವಣ್ಣನೇ ಜಗತ್ತಿನ ಮೊದಲ ಸಮಾಜವಾದಿ, ಕಮ್ಯೂನಿಸ್ಟ್ ಎಂದೆಲ್ಲ ಹೆಮ್ಮೆಯಿಂದ ಘೋಷಿಸತೊಡಗುತ್ತೇವೆ..."
ಇದನ್ನು ಯಾರು ಹೇಳಿದ್ದು. ಬಸವಣ್ಣ ಕಮುನಿಸ್ಟ್ ಅಲ್ಲ ಅಂತಾನೆ ನಾನು ಹೇಳುತ್ತಿರುವುದು. ನಾನು ಬರೆದಿರುವುದು ನೀವು ಸರಿಯಾಗಿ ಓದಲಿಲ್ಲ ಅನ್ಸುತ್ತೆ. ೧೯-೨೦ನೇ ಶತಮಾನದ ಕಮುನಿಸ್ಟ್ ವಾದದ ಮೂಲಕ ಬಸವಣ್ಣನನ್ನು ಯಾಕೆ ನೋಡಬೇಕು ಅನ್ನುವುದು ನನಗೆ ಅರ್ತವಾಗಲಿಲ್ಲ. ಬಸವಣ್ಣ ಶರಣ, ವಚನಕಾರ ಮತ್ತು ಸಮಾಜದ ಓರೆಕೋರೆಗಳನ್ನು ಸರಿಪಡಿಸಲು ಮೊಗಸಿದನು ಅಂದಶ್ಟೆ ಹೇಳಿದರೆ ಸಾಲದೆ. ಈ ಕಮುನಿಸ್ಟ್ ಬಣ್ಣ ಯಾಕೆ?
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ವೈಭವರೆ,
ಏನು ಹೇಳಲಿ? ನಾನು ಕೊಟ್ಟ ಎರಡನೇ ಕೋಟ್ ಮೇಲಿನ ಬರಹದಲ್ಲೇ ಇದೆ. ಅದನ್ನು ನಾಗಭೂಷಣರೇ ಹೇಳಿರೋದು.
ನೀವು ನಾಗಭೂಷಣರವರು ಬಸವಣ್ಣನಲ್ಲಿ ಸಿಪಿಅಯ್ ತತ್ವಗಳನ್ನು ನೋಡ್ತಿದ್ದಾರೆ ಅಂದದ್ದಕ್ಕೆ ಬರಹದಲ್ಲೇ ಈ ಬಗೆಯ ಮಾತಿದೆ ಅಂತ ತೋರಿಸಿದೆ ಅಷ್ಟೆ. ಅದನ್ನು ನೀವು ಹೇಗೆ ಬೇಕಾದರೂ ಅರ್ಥಮಾಡಿಕೊಳ್ಳಿ. ಆದರೆ ಕಮ್ಯುನಿಸ್ಟ್ ಬಣ್ಣ ನನಗಂತೂ ಕಾಣುತ್ತಿಲ್ಲ.
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>ನೋಯುವ ಹಲ್ಲಿನ ಕಡೆ ನಾಲಗೆ ಪದೇ ಪದೇ ಹೊರಳುವಂತೆ ಕನ್ನಡ ಪ್ರಜ್ಞೆ ಪದೇ ಪದೇ 12ನೇ ಶತಮಾನದ ಕಲ್ಯಾಣ ಕ್ರಾಂತಿಯ ಕಡೆ ಹೊರಳುವ ಕಡೆಗೆ ನಮ್ಮ ಗಮನ ಸೆಳೆದಿದ್ದಾರೆ.
ನನ್ನ ಮನಸ್ಸು / ಪ್ರಜ್ಞೆ ೧೨ ನೆ ಶತಮಾನಕ್ಕೆ ಹೋಗುವುದು ಅಲ್ಲಿ ವೈಚಾರಿಕತೆ ಇದೆ, ಹೃದಯ ವೈಶಾಲ್ಯತೆ ಇದೆ, ಸಿಹಿ ಇದೆ ಅಂತ. ನಿಮ್ಮ ಪ್ರಜ್ಞೆ ಅಲ್ಲಿ ನೋವು ಹುಡುಕ್ತಾ ಇದ್ರೆ ಅದಕ್ಕೆ ನಿಮ್ಮ ಮನದಲ್ಲಿನ ದೋಷವೇ ಕಾರಣ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>ಇಡೀ ವಚನ ಸಾಹಿತ್ಯವನ್ನು ಹುಡುಕಿದರೂ ಜಾತಿ ವಿರೋಧಿಯಾದ ಒಂದು ವಚನವೂ ಸಿಕ್ಕಲಾರದು ಎಂದು ಹೇಳಿ ನನ್ನನ್ನು ದಂಗುಬಡಿಸಿದಾಗ!
ಇದರಲ್ಲಿ ತಮ್ಮ ಅನಿಸಿಕೆ ಏನು ಅಂತ ನೇರವಾಗಿ ಬರೆಯಿರಿ. ನಿಮ್ಮ ಆ ಅಧ್ಯಾಪಕರಿಗೆ ಕನ್ನಡ ಬರುತ್ತಾ? ಅವರು ವಚನಗಳನ್ನು ನಿಜವಾಗಿಯೂ ಓದಿದ್ದಾರ? ಅಂತ ಕೇಳಿ. ಹಾಗೆ ಓದಿದ್ದರೆ ತಮ್ಮ ಹಳದಿ ಕನ್ನಡಕವನ್ನು ತೆಗೆದು ಮತ್ತೊಮ್ಮೆ ಓದಲು ಹೇಳಿ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>>. ಹಾಗಾಗಿ ಭಾರತದ 'ಧರ್ಮ' ಎಂಬ ಸಾರ್ವತ್ರಿಕ ಶಬ್ದ ನಮ್ಮ ಆಧುನಿಕ ಚರ್ಚೆ ವ್ಯವಹಾರಗಳಲ್ಲಿ `ರಿಲಿಜನ್' ಎಂಬ ನಿರ್ದಿಷ್ಟ ಅರ್ಥ ಪಡೆದು ತರ್ಜುಮೆಯಾದುದರಿಂದ ಅನೇಕ ಅನಾಹುತಗಳಾಗಿವೆ. ಜಾತಿ ವ್ಯವಸ್ಥೆ ಕುರಿತಂತೆ ನಾವು ಕಟ್ಟಿಕೊಂಡಿರುವ ಚರಿತ್ರೆಯೂ ಇಂತಹ ಅನಾಹುತಗಳಲ್ಲೊಂದು. ಹಾಗಾಗಿ ವಚನ ಚಳುವಳಿಯನ್ನು ಜಾತಿ ವಿರೋಧಿ ಚಳುವಳಿಯನ್ನಾಗಿ ನೋಡುವ ನಮ್ಮ ಕ್ರಮವೇ ತಪ್ಪಾಗಿದ್ದು, ಅದರ ಸಾಮಾಜಿಕ ಚಲನಶೀಲತೆಯನ್ನು ಅರ್ಥ ಮಾಡಿಕೊಳ್ಳುವುದರಲ್ಲೇ ಎಡವುತ್ತಿದ್ದೇವೆ.
ಗುರುಗಳೇ ...ಇದರ ಅರ್ಥ ೧೨ ನೆ ಶತಮಾನದಲ್ಲಿ ಜಾತಿ ವ್ಯವಸ್ಥೆಯೇ ಇರಲಿಲ್ಲ ಅಂತಾನೆ? ಛೆ ಛೆ... ಬ್ರಿಟೀಷರು ಬಂದ್ರೂ ನಮ್ಮಲ್ಲಿ ಜಾತಿ ಸೃಷ್ಟಿ ಮಾಡಿ ಹೋದರು...ಇಲ್ಲಿನ ಜಾತಿ ವ್ಯವಸ್ಥೆಯ ಸೃಷ್ಟಿ , ಜಾತಿ ಆದ್ಗಾರದಲ್ಲಿ ತಾರತಮ್ಯ, ಅಸ್ಪೃಷ್ಯತೆ ಯಾ ಆಚರಣೆ .. ಇವೆಲ್ಲ ಇರಲಿಲ್ಲ.. ಇವೆಲ್ಲ ಪಡುವಣದ ಚಿಂತಕರ ಚಿತಾವಣೆ ಅಲ್ವ.... ಸಾರ್ ದಯವಿಟ್ಟು ಹಲವು ಪುಸ್ತಕಗಳನ್ನು ಓದಿ , ಚಿಂತನೆ ಮಾಡಿ ಬರೆಯಿರಿ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>>... ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನ್ನು ಸಂಗಮದೇವಾ, ನೀ ಜಂಗಮ ರೂಪವಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ಮಾಯಕ್ಕೆ ಮರುಗಿನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಗೆ ಮನದೊಡೆಯ...
ಹಾಗೇ, ಈ ವಚನ ಭಾಗದೊಂದಿಗೇ ಇನ್ನೊಂದಿಷ್ಟು ವಚನಗಳನ್ನು ಉದ್ಧರಿಸುತ್ತಾ ಖ್ಯಾತ ಸ್ತ್ರೀವಾದಿ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಅವರು ಹೆಣ್ಣನ್ನು ಕುರಿತ ಬಸವಣ್ಣನ `ಊಳಿಗಮಾನ್ಯಶಾಹಿ' ನಿಲುವನ್ನು ವಿಷದೀಕರಿಸಿದ್ದಾರಲ್ಲಾ? (ಹಾಗಾದರೆ ಬಸವಣ್ಣ ಎಂತಹ ಸಮಾಜವಾದಿ?) ಆಶಾದೇವಿಯವರು ಮುಂದುವರಿದು, ಬಸವಣ್ಣನ ಕ್ರಾಂತಿ, ಕೆಳ - ದಲಿತ ಜಾತಿಗಳ ವಿಷಯದಲ್ಲಿ ನಿಜವಾದಷ್ಟು ಹೆಣ್ಣಿನ ವಿಷಯದಲ್ಲಿ ಆಗಿಲ್ಲ ಎಂದೂ ಹೇಳುವರಲ್ಲಾ? (ಅವರ 'ಸ್ತ್ರೀಮತವನ್ನುತ್ತರಿಸಲಾಗದೆ' ನೋಡಿ)
ಎಲ್ಲ ಕಡೆ ಯಾಕ್ರಣ್ಣ / ಅಮ್ಮ ಹೊಲಸನ್ನೇ ನೋಡ್ತೀರಿ. ಈ ವಚನದಲ್ಲಿ ಏನೋ ತಪ್ಪಿದೆ ಅನ್ನಿಸುತ್ತೆ. ದಯವಿಟ್ಟು ಯಾರದ್ರೂ ಪೂರ್ಣ ವಚನವನ್ನು ಇಲ್ಲಿ ಬರೆಯಿರಿ. ಬಸವಣ್ಣನಂತ ಪ್ರಭುದ್ದ ವೈಚಾರಿಕ ಮನಸ್ಸಲ್ಲಿ ಉಳಿಗಮಾನ್ಯಶಹಿತನವನ್ನು ಕಂಡ ಆಶಾದೇವಿಯವ್ರೆ .. ನಿಮಗೆ ಏನು ಹೇಳಲಿ... ನಾನು ನಿಮ್ಮ ಆ ಪುಸ್ತಕವನ್ನು ಓದಿಲ್ಲ. ನಿಮ್ಮ ಚಿಂತನೆಯಲ್ಲಿಯೇ ಏನೋ ಹುಲಿಕಿದೆ ಅಂತ ಮಾತ್ರ ಹೇಳಬಲ್ಲೆ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಅಂದಹಾಗೆ ..ಬಸವಣ್ಣನಿಗೆ ತನ್ನ ಹೆಂಡತಿಯ ಹೆಸರೂ ನೆನಪಿರದಷ್ಟು, ಅವನು ಮರೆಗುಳಿಯೇ?
ಯಾರೀಕೆ ನೀಲ ಲೋಚನೆ ? ಬಸವಣ್ಣನ ಹೆಂಡತಿಯ ಹೆಸರೇ ತಪ್ಪಿರುವ ಈ ವಚನ ಬಸವಣ್ಣ ನದೇ ಅಂತ ಹೆಂಗೆ ನಂಬೋಣ?
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಶರಣರಲ್ಲಿ ಜೀವ-ಶಿವ ರ ಸಂಬಂದ "ಶರಣ ಸತಿ- ಲಿಂಗ ಪತಿ" ರೂಪದಲ್ಲಿ ಇದೆ.
ಇಲ್ಲಿ ಶಿವ ಅಂದರೆ ಒಬ್ಬ ಗಂಡಸು / ವ್ಯಕ್ತಿ ಅಂತ ತೆಗೆದುಕೊಳ್ಳದೆ ಒಂದು ಪರಾಮತ್ಮ ನಾಗಿ ತೆಗೆದುಕೊಂಡು ಈ ವಚನವನ್ನು ಅರ್ಥ ಮಾಡಿಕೊಳಲಾಗುತ್ತತೆದೆಯೇ ಚಿಂತಿಸಿ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಸವಿತ್ರು, ಆ ವಚನದಲ್ಲಿಯೇ ನನಗೇನೋ ಎಡರು ಕಾಣುತ್ತಿದೆ. ಅದು typical ಬಸವಣ್ಣನವರ ವಚನದಂತೆ ಇಲ್ಲ. ಅವರ ವಚನದಲ್ಲಿ "ಕೂಡಲ ಸಂಗಮದೇವಾ" ಅಂತನೇ ಬರುತ್ತೆ. ಇದ್ಯಾರೋ ಈ ಮೇಲಿನ ಅತೀ ಬುದ್ದಿವಂತ ಲೇ(ಕಕ್ಕ)ರಂತವರು ಬರೆದದ್ದಿರಬೇಕು.
ಅಯ್ಯ, ಈ ಬರಹ ಬರೆದ ಮಹಾನುಭಾವರೇ, ಬಸವಣ್ಣ ಮತ್ತು ಇತರ ವಚನಕಾರರು ಜಾತಿಯತೆಯನ್ನು ಕಳೆದು ಮಾತಾಡಿಲ್ಲ ಅನ್ನುವ ನಿಮ್ಮ ಮಾತಲ್ಲಿ ಯಾವುದೇ ಹುರುಳಿಲ್ಲ.
ಮಾದರಿಗೆ ನಿಮಗೆ ನೂರಾರು ವಚನಗಳನ್ನು ಹೇಳಬಹುದು, ದೂರ ಹೋಗೋದು ಬೇಡ, ಸಂಪದದಲ್ಲೇ ಸುಶೀಲ್ ಬರೆದಿರುವ "ಶ್ರೀ ಬಸವೇಶ್‍ವರರ ವಚನಗಳು" ಎಳೆಯಲ್ಲಿರು ಈ ವಚನ ನೋಡಿ,
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ಕೂಡಲಸಂಗಮದೇವಾ ನಿಮ್ಮನರಿದವಂಗೆ !!
ನಿಮ್ಮ ಈ ಬರಹದ ಆಶಯ ಏನು ಸಾರ್? ಒಂದು ಸಮುದಾಯದ ನಂಬುಗೆಗಳನ್ನು dilute ಮಾಡುವ ಕುಯುಕ್ತ ಬುದ್ದಿಯಿಂದ ಹೊಮ್ಮಿದ ಸೇಡಿನ ಮಾತುಗಳಿಗೆ, ನಯ-ವಿನಯದ ರೇಸಿಮೆ ಬಟ್ಟೆ ಸುತ್ತಿ ಬರೆದಂತಿದೆ. ಅದನ್ನು ಮಾಡುವ ಭರದಲ್ಲಿ ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ, ಕನ್ನಡತನಕ್ಕೆ ನೀವು ದೊಡ್ಡ ಕೆಡಕು ಎಸಗುತ್ತಿದ್ದೀರಿ. ಸಕ್ಕದವನ್ನು ಎತ್ತಿ ಹಿಡಿಯುವ ಭರದಲ್ಲಿ ಕನ್ನಡವನ್ನೇ ಹೀಗಳೆಯುವ ಮಂದಿಯಂತೆ ಇನ್ನೊಂದು ಬಗೆಯವರು ತಾವು.
ಬಸವಣ್ಣ ಮತ್ತು ವಚನಕಾರರನ್ನು ಇಂತ ಜಾತಿಗೇ ಅಂತ ಸೀಮಿತಗೊಳಿಸಿ ನೊಡುತ್ತಿರುವದು ಬಹಳ ನೋವಿನ ಸಂಗತಿ. ಅವರನ್ನು basic human values ಆದ ಸತ್ಯ, ಪ್ರಾಮಾಣಿಕತೆ, ಮುಂತಾದವನ್ನು ಎತ್ತಿ ಹಿಡಿದ ದಾರ್ಶನಿಕರಂತೆ ನೋಡಿದರೆ ಸಾಕಲ್ಲವೇ?
ನಿಮ್ಮ ಮಿತ್ರರು ’ವಚನಕಾರರು ಜಾತೀಯತೆಯ ವಿರುದ್ದ ಮಾತಾಡಿಲ್ಲ’ ಅಂತ ದಂಗು ಬಡಿಸಿದಾಗ, ನೀವು ಹಲವು ವಚನಗಳನ್ನು ಉದ್ದರಿಸಿ, ಅಲ್ಲಿಯೇ ಅವರ ಬಾಯಿ ಮುಚ್ಚಿಸಬಹುದಿತ್ತು, ಬಹುಶ ನಿಮಗೇ ಅವರ ಮಾತು ಬಹಳ ಪ್ರಿಯವಾಗಿ ಕಂಡಿದ್ದಿರಬೇಕಲ್ಲವೇ? ಅಸ್ಟೊಂದು ಜಾತೀಯತೆಯ ಒಲವು ಯಾಕೆ ಸರ್??
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
"...ಈ ವಚನ ಭಾಗದೊಂದಿಗೇ ಇನ್ನೊಂದಿಷ್ಟು ವಚನಗಳನ್ನು ಉದ್ಧರಿಸುತ್ತಾ ಖ್ಯಾತ ಸ್ತ್ರೀವಾದಿ ವಿಮರ್ಶಕಿ ಡಾ. ಎಂ.ಎಸ್.ಆಶಾದೇವಿ ಅವರು ಹೆಣ್ಣನ್ನು ಕುರಿತ ಬಸವಣ್ಣನ `ಊಳಿಗಮಾನ್ಯಶಾಹಿ' ನಿಲುವನ್ನು ವಿಷದೀಕರಿಸಿದ್ದಾರಲ್ಲಾ? ..."
ನಾಗಬೂಶಣರವರೆ, ಇದರ ಬಗ್ಗೆ ನಿಮ್ಮ ನಿಲುವೇನು??
ಈ ಬಸವಣ್ಣನೆ ಅಲ್ವ ತನ್ನ ಅಕ್ಕನಿಗೆ(ಅಕ್ಕ ನಾಗಮ್ಮನಿಗೆ) ಮಾಡದ ಮುಂಜಿ ತನಗೂ ಬೇಡ ಅಂತ ತೊರೆದು ಹೋದದ್ದು. ಇದು 'ಸ್ತ್ರೀಪರ' ನಿಲುವಲ್ಲವೆ? ಹೀಗೆ ಇವರು ಹೇಳಿದ್ದಕ್ಕೆಲ್ಲ ಒಂದು ಇದುರಾದ ಸಂಗತಿಯನ್ನು ಹೇಳಬಹುದು.
ಈ ಬಸವಣ್ಣನೆ ನಡೆಸುತ್ತಿದ್ದ ಅನುಬವ ಮಂಟಪದಲ್ಲಿ ಹಲವು ವಚನಕಾರ್ತಿಯರಿರಲಿಲ್ಲವೆ? ಅವರ ಮಾತಿಗೂ ಬೆಲೆಯಿತ್ತಲ್ಲಾ?(ಮಾದರಿ: ಅಕ್ಕ ಮಹಾದೇವಿ) ಇದು 'ಸ್ತ್ರೀ' ಎದುರಾದ ನಿಲುವೆ?
ನಾಗಬೂಶಣರವರು ಪಿ.ವಿ.ನಾರಾಯಣರವರ 'ವಚನ ಸಮಗ್ರ' ವನ್ನು ಓದುವುದು ಒಳಿತು. ಬಸವಣ್ಣ ಪವಾಡ ಹಯ್ದ ಅಂತ ನಾನು ಒಪ್ಪುವುದಿಲ್ಲ. ಒಬ್ಬ ಸಾಮಾನಿಯ ಮನ್ಸನಾಗಿ ಏನು ಮಾಡಬಹುದು ಅದನ್ನ ಅವನು ಮಾಡಿದ. ಅವನ ಕಾಲದಲ್ಲಿದ್ದ ಅತ್ವ ಅವನಿಗೆ ಅವನದೇ ಆದ ಮೊಟಕು(limitations)ಗಳಿದ್ದೂ ಕೂಡ ಅವನು ಕೆಲವಾದರೂ ಓರೆಕೋರೆಗಳನ್ನು ತಿದ್ದಲು ಮೊಗಸಿದ ಅಶ್ಟೇ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಬಸವಣ್ಣ ಅವರ ಒಬ್ಬ ಹೆಂಡತಿ ಗಂಗಾಂಬಿಕೆ, ಇನ್ನೊಬ್ಬರು ನೀಲಾಂಬಿಕೆ ಅಲ್ಲವೆ? ನೀಲಾಂಬಿಕೆ ವಚನಕಾರ್ತಿ ಕೂಡ.
-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/
ನನ್ನ ಪಾಡ್ ಕಾಸ್ಟ್ ಗಳು :- http://hamsanandi.mypodcast.com/
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ನಿಜ ಹಂಸನಂದಿಯವ್ರೆ...
ಮೊದಲ ಹೆಂಡತಿ ನೀಲಾಂಬಿಕೆ .. ಮಾವನ ಮಗಳು.
ಎರಡನೆ ಹೆಂಡತಿ ಗಂಗಾಮ್ಬಿಕೆ.. ಬಿಜ್ಜಳನ ತಂಗಿ. ನೀಲಾಂಬಿಕೆಯ ಹಲವಾರು ವಚನಗಳು ಸಿಕ್ಕಿವೆ.
ಈ ವಚನದಲ್ಲಿ ಬಳಕೆಯಾಗಿರುವ ಪದ 'ನೀಲ ಲೋಚನೆ' . ಈ ಪದ ಬಳಕೆ 'ನೀಲಿ ಕಣ್ಣವಳು' ಅಂತ ವರ್ಣನೆ ಅಂತ ನನಗೆ ಅನ್ನಿಸುವುದಿಲ್ಲ. ನನಗೆ ಅನ್ನಿಸುವ ಮಟ್ಟಿಗೆ ತುಂಬ ಆತ್ಮೀಯಳಾದ ಹೆಂಡತಿಯನ್ನು ಬಸವಣ್ಣ ನೀಲ ಅಂತ ಕರೀಬಹುದು ಅತ್ವ ಪೂರ್ತಿ ಹೆಸರಿಂದ ನೀಲಾಂಬಿಕೆ ಅನ್ನಬಹುದು. ನೀಲ ಲೋಚನೆ ಅನ್ನೋ ಪದ ಬಳಕೆ ಈ ವಚನದ ಕರ್ತು ಬಗ್ಗೆ ಅನುಮಾನ ಹುಟ್ಟಿಸುವಂತಿದೆ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
dear hariprasad,
ಈ ಎಳೆ ಒಂದು ಸಮುದಾಯದವರವನ್ನು ಕೆಣಕಿ, ಕಿಡಿ ಎಬ್ಬಿಸುವ ಹುನ್ನಾರದಿಂದ ಬರೆದಿರುವದಾಗಿದೆ. ದಯವಿಟ್ಟು ಇದನ್ನು ಅಳಿಸಿ ಹಾಕಿ.ಬರಹದ ಹಲಾವರು ಕಡೆ offensive ಅನಿಸುವ ಮಾತುಗಳಿವೆ. ಇದರಲ್ಲಿ ಸಂಪದದಲ್ಲಿ ಬರೆಯಬೇಕಾದರೆ ಪಾಲಿಸಬೇಕಾದ ಕಟ್ಟಳೆ(ನಿಯಮ)ಗಳ ಕಡೆಗಣನೆ ಆಗಿದೆ.
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
'ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು' ಲೇಖನಕ್ಕೆ ಬಂದಿರುವ ಪ್ರತಿಕ್ರಿಯಗಳನ್ನು ಕುರಿತಂತೆ....
'ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು' ಎಂಬ ನನ್ನ ಲೇಖನಕ್ಕೆ ಬಂದಿರುವ ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಗಮನಿಸಿರುವೆ. ನನ್ನ ವಿಚಾರಗಳನ್ನು ಸಹಾನುಭೂತಿಯಿಂದ ಅರ್ಥ ಮಾಡಿಕೊಳ್ಳುವ ಪ್ರಯತ್ನಗಳಿಂದ ಹಿಡಿದು, ನನ್ನ ಲೇಖನ ದುರುದ್ದೇಶಪೂರಿತವಾದದ್ದು ಎಂದು ಹೇಳುವವರೆಗೆ ಈ ಪ್ರತಿಕ್ರಿಯೆಗಳು ಹರಡಿವೆ. ಈ ಪ್ರತಿಕ್ರಿಯೆಗಳೇನೇ ಇರಲಿ, ನನ್ನ ಲೇಖನವನ್ನು ಆಸಕ್ತಿಯಿಂದ ಓದಿದ ಈ ಎಲ್ಲ ಓದುಗರಿಗೂ ನನ್ನ ಧನ್ಯವಾದಗಳು. ಆದರೆ ಅದೇ ವೇಳೆಗೆ, ಲೇಖನದಲ್ಲಿ ತಾವು ಒಪ್ಪದ ಅಥವಾ ತಮಗೆ ಪಥ್ಯವಾಗದ ಒಂದು ಸಂಗತಿ ಕಂಡೊಡನೆ, ಇಡೀ ಲೇಖನವನ್ನು ಅನುಮಾನದಿಂದ ನೋಡುವ; ಅದಕ್ಕಿಂತ ಹೆಚ್ಚಾಗಿ, ಅದರ ಬಗ್ಗೆ ಗಂಭೀರ ಚರ್ಚೆಗೆ ಆಸ್ಪದವನ್ನೇ ನೀಡದಂತಹ ಉಡಾಫೆಯ ಮಾತುಗಳನ್ನಾಡುವ ಕೆಲವು ಓದುಗರ ಪ್ರವೃತ್ತಿಯನ್ನು ಕಂಡು ವಿಷಾದವೂ ಉಂಟಾಗಿದೆ ಎಂದೂ ಇಲ್ಲಿ ಹೇಳಬಯಸುವೆ.
ನನ್ನ ಲೇಖನದಲ್ಲಿ ಉಲ್ಲೇಖಿಸಲಾಗಿರುವ ನನ್ನ ಅಧ್ಯಾಪಕ ಗೆಳೆಯರೊಬ್ಬರ ಒಂದು ಅಭಿಪ್ರಾಯ ಮತ್ತು ಒಂದು ವಚನದ ಬಗ್ಗೆ ಕೆಲವು ಓದುಗರು ಪ್ರಶ್ನೆಗಳನ್ನೆತ್ತಿದ್ದಾರೆ. ನಿಮ್ಮ ಆ ಗೆಳೆಯರ ಅಭಿಪ್ರಾಯವನ್ನು ನೀವು ಒಪ್ಪುವಿರೋ ಎಂಬುದನ್ನು ತಿಳಿಸಿ ಎಂದು ಒಬ್ಬ ಓದುಗರು ಆಗ್ರಹಿಸಿದ್ದಾರೆ. ನಾನು ಈ ಅಧ್ಯಾಪಕ ಮಿತ್ರರ ಅಭಿಪ್ರಾಯವನ್ನು ಮಾತ್ರವಲ್ಲ, ಇತರ ವಚನಗಳೊಂದಿಗೆ ಈ ಉಲ್ಲೇಖಿತ ವಚನ ಬಳಸಿ, ಬಸವಣ್ಣ ಹೆಣ್ಣಿನ ಬಗ್ಗೆ ಊಳಿಗಮಾನ್ಯಶಾಹಿ ಧೋರಣೆಯನ್ನು ಹೊಂದಿದ್ದಾನೆ ಎಂದು ವಾದಿಸುವ ಶ್ರೀಮತಿ ಆಶಾದೇವಿಯವರ 'ಸ್ತ್ರೀವಾದಿ' ವಿಮರ್ಶೆಯನ್ನೂ ನಾನು ಪೂರ್ಣವಾಗಿ ಒಪ್ಪುವುದಿಲ್ಲವೆಂದು - ಅವು ತಮಗೆ ಬೇಕಾದ ತೀರ್ಮಾನಗಳನ್ನಷ್ಟೇ ಹುಡುಕಿಕೊಳ್ಳುವ ಸೀಮಿತ ಉದ್ದೇಶಗಳುಳ್ಳ 'ಶಿಕ್ಷಿತ' ಅಧ್ಯಯನ ಮಾದರಿಗಳೆಂದು - ನಾನು ನನ್ನ ಲೇಖನದ ಉಪಸಂಹಾರದಲ್ಲ್ಲಿ ಸ್ಪಷ್ಟವಾಗಿಯೇ ಸೂಚಿಸಿದ್ದೇನೆ. ನನ್ನ ಲೇಖನವೂ ಅದೇ ಮಾದರಿಯದ್ದಾಗಿದ್ದರೆ, ಆಧಾರ ಸಹಿತವಾಗಿ ಯಾರಾದರೂ ಅದನ್ನು ಹೇಳಿದರೆ ನಾನು ಸ್ವಾಗತಿಸುತ್ತೇನೆ. ಇಲ್ಲಿ ನಾನು ಸ್ಪಷ್ಟಪಡಿಸ ಬಯಸುವ ಇನ್ನೊಂದು ವಿಷಯವೆಂದರೆ, ರಾಜ್ಯಶಾಸ್ತ್ರ ವಿಷಯದಲ್ಲಿ ಘನ ವಿದ್ವಾಂಸರಾದ ನನ್ನ ಅಧ್ಯಾಪಕ ಮಿತ್ರರು ಹಿಂದೂ ಧರ್ಮದ ಜಾತಿಪದ್ಧತಿ ಕುರಿತು ತಾವು ಕೈಗೊಂಡಿರುವ ಸಂಶೋಧನಾ ಯೋಜನೆಯ ಅಂಗವಾಗಿ ನೂರಾರು ವಚನಗಳನ್ನು ವಿಶ್ಲೇಷಿಸಿ ತಮ್ಮ ಆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆಯೇ ಹೊರತು, ಕೇವಲ ಅನ್ನಿಸಿಕೆಯ ಆಧಾರದ ಮೇಲಲ್ಲ. ಹಾಗಾಗಿ, ಅವರ ಅಭಿಪ್ರಾಯದ ಬಗ್ಗೆ ಭಿನ್ನಮತ ವ್ಯಕ್ತ ಮಡಿಸುವ ಭರದಲ್ಲಿ, ಅವರಿಗೆ ವಚನಗಳ ಜ್ಞಾನವೇ ಇಲ್ಲವೆಂಬ ಅರ್ಥದಲ್ಲಿ ಪ್ರತಿಕ್ರಿಯಿಸುವುದು ಉಚಿತವೆನಿಸುವುದಿಲ್ಲ.
ಇನ್ನೊಬ್ಬ ಓದುಗರು, ಉಲ್ಲೇಖಿತ ವಚನದಲ್ಲಿ ನೀಲಾಂಬಿಕೆಯ ಹೆಸರು ನೀಲಲೋಚನೆ ಎಂದಾಗಿರುವುದರ ಬಗ್ಗೆ ತಕರಾರು ಎತ್ತಿ ಈ ವಚನವೇ ಅನುಮಾನಾಸ್ಪದ ಎಂದಿದ್ದಾರೆ. ವಚನ ಸಾಹಿತ್ಯವನ್ನು ಸ್ವಲ್ಪ ವಿವರವಾಗಿ ಅಧ್ಯಯನ ಮಾಡಿದ ಯಾರಿಗಾದರೂ, ಈ ಎರಡೂ ಬಸವಣ್ಣನವರ ಪತ್ನಿಯ ಪರ್ಯಾಯ ಹೆಸರುಗಳಾಗಿ ಸಾಹಿತ್ಯಿಕವಾಗಿ ಬಳಕೆಯಾಗಿರುವುದು ತಿಳಿಯುತ್ತದೆ. ಆದೇನೇ ಇರಲಿ, ಇವರು ಮತ್ತು ಈ ವಚನದ ನಿಜತ್ವವನ್ನು ಇತರ ಆಧಾರಗಳ ಮೇಲೆ ಅನುಮಾನಿಸಿರುವವರು ವಚನ ಸಾಹಿತ್ಯವನ್ನು ನಮಗೆ ಸಂಪಾದಿಸಿ ಕೊಟ್ಟಿರುವ ವಿದ್ವಾಂಸರೆಲ್ಲರ ವಿದ್ವತ್ತು ಮತ್ತು ಪ್ರಾಮಾಣಿಕತೆಗಳನ್ನೇ ಅನುಮಾನಿಸುತ್ತಿದ್ದಾರೆ ಎಂದು ಹೇಳಬೇಕಾಗುತ್ತದೆ. ಇವರು, ನಮ್ಮ ನಡುವೆ ಈಗಲೂ ಇರುವ ವಚನ ಚಳುವಳಿಯ ನಿಜತ್ವವನ್ನೇ ಅನುಮಾನಿಸುವವರಿಗೆ (ಇವರ ಪ್ರಕಾರ ಶರಣ ಚಳುವಳಿ - ವಚನ ಸಾಹಿತ್ಯಗಳೆಂಬುವವೇ ಶೂನ್ಯ ಸಂಪಾದನಾಕಾರರ ಸೃಷ್ಟಿ!) ಜೊತೆಯಾಗಬಲ್ಲರೆಂದು ಕಾಣಿಸುತ್ತದೆ! ತಮ್ಮ ಅಭಿಪ್ರಾಯ ಅಥವಾ ನಂಬಿಕೆಗೆ ಪಥ್ಯವಾಗದ್ದರ ಮೇಲೆಲ್ಲ ದುರುದ್ದೇಶವನ್ನು ಆರೋಪಿಸಿ, ಅದನ್ನು ಅಳಿಸಹಾಕಬೇಕೆಂದು ಆಗ್ರಹಿಸುವ ಇಂತಹವರಿಗೆ ಬೇಕಾಗಿರುವುದು ಧರ್ಮವಲ್ಲವೆಂದು ಎಂಬುದು ಸ್ಪಷ್ಟ. ಏಕೆಂದರೆ, ಧರ್ಮ ಎಂದರೆ ಮೂಲತಃ ಆತ್ಯಂತಿಕ ಸತ್ಯದ ಹುಡುಕಾಟ. ಅದು ಬೆಳೆಯುವುದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದಂತಹ ಧ್ಯಾನ - ಅಧ್ಯಯನ -ಬಿಚ್ಚು ಮನಸ್ಸಿನ ಚರ್ಚೆಗಳಿಂದಲೇ ಹೊರತು, ತಮ್ಮ ನಂಬಿಕೆಗಳ ಆಭದ್ರತೆಯ ಆತಂಕದಲ್ಲಿ ಶತ್ರು ಪಾಳೆಯವೊಂದನ್ನು ಕಲ್ಪಿಸಿಕೊಂಡು ಅಶಾಂತರಾಗುವುದರಿಂದಲ್ಲ. ಇರಲಿ, ಇವರು ಅನುಮಾನಿಸಿರುವ ವಚನ ಭಾಗ ಹಲವು ವಚನ ಸಂಪುಟಗಳಲ್ಲಿ ಲಭ್ಯವಿದ್ದು, ಅದನ್ನು ಉದಾಹರಣೆಗೆ ನಮ್ಮ ಕಾಲದ ಶ್ರೇಷ್ಠ ವೀರಶೈವ ವಿದ್ವಾಂಸರೆನಿಸಿರುವ ಡಾ||ಎಲ್.ಬಸವರಾಜು ಅವರು ಸಂಪಾದಿಸಿ ಬಹು ಜನಪ್ರಿಯವೂ ಆಗಿರುವ 'ಬಸವಣ್ಣನ ವಚನಗಳು' ಕ್ರತಿಯ 'ಮಾಹೇಶ್ವರ ಸ್ಥಲ' ಅಧ್ಯಾಯದ 391ನೇ ವಚನದಲ್ಲಿ ಓದಿ, ತಮಗಿಷ್ಟ ಬಂದಂತೆ ಅರ್ಥೈಸಿಕೊಂಡು ಸಮಾಧಾನಪಟ್ಟುಕೊಳ್ಳಬಹುದು ಎಂದು ತಿಳಿಸಬಯಸುತ್ತೇನೆ.
ಕಲ್ಯಾಣ ಕ್ರಾಂತಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗ್ಗೆ ನಮ್ಮಲ್ಲಿ ಹೆಮ್ಮೆ ಮೂಡಿಸುವಂತಹ ಮಹಾ ಘಟನೆ, ನಿಜ. ಹಾಗೇ ಇದರ ನಾಯಕತ್ವವನ್ನು ವಹಿಸಿದ್ದ ಬಸವಣ್ಣ ಕನ್ನಡ ಸಮಾಜಕ್ಕೆ ನಿರಂತರ ಸ್ಫೂರ್ತಿಕೇಂದ್ರವಾಗಬಲ್ಲವನೆಂಬುದೂ ನಿಜ. ಆದರೆ ಈ ಮಹಾಘಟನೆ ತನ್ನ ಉತ್ತುಂಗ ಸ್ಥಿತಿಯಲ್ಲಿ ಒಂದು ದೊಡ್ಡ ಸಂಚಿಗೆ ಒಳಗಾಗಿ ಸೋಲನ್ನು ಕಂಡಿತು ಎಂಬುದನ್ನೂ ನಾವು ನೆನಪಿನಲ್ಲಿಡಬೇಕು. ನಂತರ ಅದು ಜೀವವಿರಿಸಿಕೊಳ್ಳುವುದಿರಲಿ; ವ್ಯವಸ್ಥೆಯಲ್ಲಿ ಲೀನವಾಗಿ ಹೋಗಿ, ಈಗ ಒಂದು ವ್ಯವಸ್ಥಿತ ಜಾತಿಯ ರೂಪ ಪಡೆದು ಈ ಸೋಲನ್ನು ಶಾಶ್ವತಗೊಳಿಸಿಕೊಂಡಿದೆ ಎಂಬುದನ್ನೂ ಗಮನಿಸಬೇಕು. ಇದರ ಪರಿಣಾಮಗಳನ್ನು ಈ ಲೇಖನಕ್ಕೆ ಬಂದ ಪ್ರತಿಕ್ರಿಯೆಗಳ ರೀತಿ - ನೀತಿಗಳಲ್ಲೂ ಗಮನಿಸಬಹುದಾಗಿದೆ. ಇದಕ್ಕೆ ಕಾರಣ, ಈ ಮಹಾಘಟನೆಯ ಸೋಲಿನ ಬಗ್ಗೆ ವಿಷಾದವೇ ಹುಟ್ಟದಂತಹ - ಆ ಮೂಲಕ ಯಾವುದೇ ರಚನಾತ್ಮಕ ಸಂಚಲನವೂ ಸಾಧ್ಯವಾಗದಂತಹ - ಒಂದು ಒಣ ಹೆಮ್ಮೆಯ ವಾತಾವರಣವನ್ನು ಸೃಷ್ಟಿಸುವ ಪಟ್ಟಭದ್ರ ಜಾತಿ ರಾಜಕಾರಣವನ್ನು, ಕಾಲಾನುಕಾಲದಿಂದ ಪೋಷಿಸಲಾಗುತ್ತಿರುವುದೇ ಆಗಿದೆ. ಇದನ್ನೇ ನಾನು ವೀರಶೈವ ಚಳುವಳಿಯ ಸಂಸ್ಥೀಕರಣ ಎಂದು ಕರೆದಿರುವುದು. ಇದರ ಪರಿಣಾಮವಾಗಿ ನಮ್ಮೆಲ್ಲರ ಹೆಮ್ಮೆಯ ಶರಣ ಚಳುವಳಿ ಒಂದು ಜಾತಿಯಾಗಿ ಅವನತಿಗೊಂಡು ನಮ್ಮ ಕಣ್ಮುಂದೆಯೇ ಪಡೆದುಕೊಳ್ಳುತ್ತಿರುವ ಆತಂಕಕಾರಿ ನೆಲೆಗಳನ್ನು ಸಂಕೇತಿಸುವಂತಿರುವ ಬಸವಣ್ಣನ ಇಂದಿನ ಮೂರ್ತೀಕರಣದ ವೈಖರಿಯ ಪ್ರಸ್ತಾಪ ಮಾಡಿರುವುದು. ಇದನ್ನು ಹೇಳಿದೊಡನೆ, ಇದನ್ನು ಕೆಟ್ಟದ್ದನ್ನೇ ಕಾಣುವ ಮನಸ್ಸಿನ ದೋಷವೆಂದೋ, ಸಿ.ಪಿ.ಐ. ತತ್ವವೆಂದೋ (ಹಾಗೆಂದರೇನೆಂದು ನನಗೆ ತಿಳಿಯದು!) ಬರೀ ಟೀಕಿಸಿದರೆ ಏನು ಉತ್ತರ ಕೊಡಲಾದೀತು? ನನ್ನ ಇಡೀ ಲೇಖನವೇ ಇಂತಹ ಸುಲಭ ತೀರ್ಮಾನಗಳಿಗೆ ಬರುವ ಪ್ರವೃತ್ತಿಯ ಅಪಾಯಗಳ ಬಗ್ಗೆಯೇ ಇರುವುದು ಎಂಬುದನ್ನು ಓದುಗರು ಗಮನಿಸುತ್ತಾರೆ ಎಂದು ಭಾವಿಸುತ್ತೇನೆ.
-ಡಿ.ಎಸ್.ನಾಗಭೂಷಣ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ನಾಗಭೂಷಣರೇ ಮುಂಚಿನ ನನ್ನ ತುಸು ಬಿರುಮಾರುಲಿಗಳಿಗೆ ಬೇಸರಪಡದಿರಿ. ನನಗೆ ಎಡರು ಕಂಡಿದ್ದು ಈ ಬರಹದ ’ಪ್ರಸ್ತುತತೆ’ಯ ಬಗ್ಗೆ. ಇದರಲ್ಲಿ ಕನ್ನಡ ಮಂದಿಗೆ ಒಳ್ಳೇದು ಆಗಲಿ ಅನ್ನುವ ಉದ್ದೇಶ ಏನಿದೆ ಹೇಳಿ? ಕಲ್ಯಾಣ ಕ್ರಾಂತಿಯಲ್ಲಿ ಏನು ನಡೆಯಿತು ಅಂಬುದನ್ನು ಕೆಣಕಿ ಕೆಣಕಿ ನೋಡುವದರಲ್ಲೇನಿದೆ? ಬಸವಣ್ಣನ ಸಾವಿರಾರು ಒಳ್ಳೇದು ಹೇಳುವ ವಚನವನ್ನು ಬಿಟ್ಟು, ಆಗಿನ ಸಾಮಾಜಿಕ ಪರಿಸ್ತಿತಿಗೆ ತಕ್ಕುದಾಗಿದ್ದು, ಈಗ ಒಪ್ಪಲಾಗದೇ ಇರಬಹುದಾದ ಒಂದೆರಡು ವಚನಗಳನ್ನೇ ಹಿಡಿದು, ಬೆಟ್ಟು ಮಾಡಿ ತೋರುತ್ತ ಕೂಡುವದು ಎಸ್ಟು ಸಮಂಜಸ?
ನೀವೇ ವಿಚಾರ ಮಾಡಿ.
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ತಮ್ಮ ಅಭಿಪ್ರಾಯ ಅಥವಾ ನಂಬಿಕೆಗೆ ಪಥ್ಯವಾಗದ್ದರ ಮೇಲೆಲ್ಲ ದುರುದ್ದೇಶವನ್ನು ಆರೋಪಿಸಿ, ಅದನ್ನು ಅಳಿಸಹಾಕಬೇಕೆಂದು ಆಗ್ರಹಿಸುವ ಇಂತಹವರಿಗೆ ಬೇಕಾಗಿರುವುದು ಧರ್ಮವಲ್ಲವೆಂದು ಎಂಬುದು ಸ್ಪಷ್ಟ. ಏಕೆಂದರೆ, ಧರ್ಮ ಎಂದರೆ ಮೂಲತಃ [b]ಆತ್ಯಂತಿಕ ಸತ್ಯ[/b]ದ ಹುಡುಕಾಟ. ಅದು ಬೆಳೆಯುವುದು ಅನುಭವ ಮಂಟಪದಲ್ಲಿ ನಡೆಯುತ್ತಿದ್ದಂತಹ ಧ್ಯಾನ - ಅಧ್ಯಯನ -ಬಿಚ್ಚು ಮನಸ್ಸಿನ ಚರ್ಚೆಗಳಿಂದಲೇ ಹೊರತು, ತಮ್ಮ ನಂಬಿಕೆಗಳ ಆಭದ್ರತೆಯ ಆತಂಕದಲ್ಲಿ ಶತ್ರು ಪಾಳೆಯವೊಂದನ್ನು ಕಲ್ಪಿಸಿಕೊಂಡು ಅಶಾಂತರಾಗುವುದರಿಂದಲ್ಲ.
dear nagabhushan,
ನನಗೆ ಆಟೊಂದು ಸಂಕ್ರುತ ಎಲ್ಲ ಬರಲ್ಲ. ದಯವಿಟ್ಟು ಈ ’ಆತ್ಯಂತಿಕ ಸತ್ಯ’ ಅಂದರೆ ಏನು ಅಂತ ತಿಳಿಸಿ ಕೊಡಿ. ನಾನು ಇದನ್ನು ಅಳಿಸಿ ಹಾಕಲು ಹೆಳಿದ್ದು ನನ್ನ ಸೊಂತ ಅಭಿಪ್ರಾಯ, ನಂಬಿಕೆಗೆ ಪತ್ಯವಾಗದ್ದು ಅಂತ ಅಲ್ಲ. ದಿಟವಾಗಲು ಈ ಬರಹದಲ್ಲಿ ದುರುದ್ದೇಶ ಕಂಡಿದ್ದರಿಂದ. ನಿಮ್ಮ ಬರಹದಲ್ಲಿ ಸದುದ್ದೇಶ ಏನಿದೆ ನೀವೇ ಹೇಳಿ? darkness is nothing but no presence of light ಅತವಾ ಕೆಟ್ಟದ್ದು ಅಂದರೆ ಒಳ್ಳೆಯದರ ಗೈರು ಹಾಜರಿ ಅನ್ನುವಂತೆ, ನಿಮ್ಮ ಬರಹದಲ್ಲಿ ಒಬ್ಬರ ಬಗ್ಗೆ ಒಳ್ಳೆ ಮಾತಾಡಿ ಬರೆದ ಮಾತುಗಳೇನು ಕಾಣುತ್ತಿಲ್ಲ.
ಆಯಿತು, ಅನುಭವ ಮಂಟಪದಲ್ಲಿ ನಡೆಯುತ್ತಿದ್ದುದು ಧರ್ಮ ವಿಚಾರ ಆದರೆ, ಬರೀ ನೀವು ಈ ಬರಹದಲ್ಲಿ ಹೇಳುವ ವಿಚಾರಗಳನ್ನೇ ಮನನ ಮಾಡ್ತಾ, ಜಾತೀಯತೆ ಬೇಕು, ನಮ್ ಜಾತಿನ ಬೆಳಸೋದು ಹೇಗೆ?,ಸ್ತ್ರಿಯರಿಗೆ ಮುಕ್ಕಾಸು ಬೆಲೆ ಕೊಡೋದು ಬೇಡ, ಇತ್ಯಾದಿ ಇತ್ಯಾದಿ ಮಾತಾಡ್ತಾ ಕೂಡುತ್ತಿದ್ದರೆ?
ನಿಮ್ಮ ಬರಹ ಓದಿದರೆ ನೀವು ಹಂಗೆ ಅಂದುಕೊಂಡಿದಿರೇನೋ ಅನಿಸುತ್ತೆ. ಜಾತೀಯತೆಯನ್ನೇ ನೀವು ದರ್ಮ ಅಂತ ಕರೆಯುತ್ತಿದ್ದೀರಾ ಅಂತ ಆದರೆ, ಒಪ್ಪಿದೆವು, ನಾವು ಅಧರ್ಮಿಗಳೇ!!
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ನಾಗಬೂಶಣರೆ,
ನಿಮ್ಮ ಮರುಲಿ/ಪ್ರತಿಕ್ರಿಯೆ ನಿಮ್ಮ ಬೇರು/ಮೂಲ ಬರಹಕ್ಕಿಂತ ಹೆಚ್ಚು ತಿಳಿಯಾಗಿದೆ/ಸ್ಪಶ್ಟವಾಗಿದೆ. ನೀವು ಬಿಡಿಯಾಗಿ ಎರಡು ವಚನಗಳನ್ನು ಇಲ್ಲಿ ಕೋಟ್ ಮಾಡಿ ಅದರ ಮೇಲೆ ಓದುಗರನ್ನು ದಾರಿ ತಪ್ಪಿಸಿದ್ದೀರಿ ಎಂದು ಅನ್ನಿಸಿತು ನನಗೆ. ಹೀಗೆ ಬಿಡಿಯಾಗಿ ನೋಡುವ ಬದಲು ಇಡಿಯಾಗಿ ಓದಿ ಅದರ ಮೇಲೆ ಚರ್ಚೆಗಯ್ಯುವುದು ಒಳಿತು. ನೀವು ಬಿಡಿಯಾಗಿ ಹೀಗೆ ವಚನಗಳನ್ನು ಹಾಕಿದ್ದಕ್ಕೆ ನಾವು ಬಿಡಿಯಾಗಿ ಮರುಲಿಯಬೇಕಾಯಿತು.
ಹಾಗೆಯೆ, ನಮ್ಮ 'ದೇಸಿ' ಚಿಂತನೆಗಳಲ್ಲಿ ಮುಕ್ಯವಾದ
೧. ಕವಿರಾಜಮಾರ್ಗ
೨. ವಚನಗಳು/ ಶರಣರ ಸಿಡಿದೇಳುವಿಕೆ
೩. ದಾಸರ ಪದಗಳು
...
...
ಹೀಗೆ ಇನ್ನು ಹಲವು, ಇವುಗಳು ಕನ್ನಡದ ಹೆಮ್ಮೆ. ಈಗಾಗಲೆ ನಾವು ಕನ್ನಡಿಗರು ಕೆಚ್ಚು/ಅಬಿಮಾನವಿಲ್ಲದೆ ಸೊರಗುತ್ತಿದ್ದೇವೆ. ನೀವು ಈ ತರ ಬರೆದರೆ ಕನ್ನಡದ/ಕನ್ನಡಿಗರ ಯಾವ ಏಳಿಗೆ ಆಗುತ್ತೆ. ನಮ್ಮ ಮುಕಕ್ಕೆ ನಾವೇ ಮಸಿ ಬಳಿದಕೊಂಡಹಾಗೆ.
ಶರಣರು ಅಂದ್ರೆ ಬಸವಣ್ಣ ಒಬ್ಬನೇ. ಇನ್ನು ಹತ್ತು ಹಲವು ಮಂದಿ ಕಲ್ಯಾಣಕ್ರಾಂತಿಯಲ್ಲಿ ತೊಡಗಿದ್ದರು. ಎಶ್ಟೊ ವಚನಗಳು ನಮಗೆ ಸಿಕ್ಕೇ ಇಲ್ಲ. ಹೀಗೆಲ್ಲ ಇರುವಾಗ ನಿಮ್ಮ ಬರಹ ದಾರಿ ತಪ್ಪಿಸುತ್ತದೆ ಅಂತ ನನ್ನ ಅನಿಸಿಕೆ.
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>ವಚನ ಬಳಸಿ, ಬಸವಣ್ಣ ಹೆಣ್ಣಿನ ಬಗ್ಗೆ ಊಳಿಗಮಾನ್ಯಶಾಹಿ ಧೋರಣೆಯನ್ನು ಹೊಂದಿದ್ದಾನೆ ಎಂದು ವಾದಿಸುವ ಶ್ರೀಮತಿ ಆಶಾದೇವಿಯವರ 'ಸ್ತ್ರೀವಾದಿ' ವಿಮರ್ಶೆಯನ್ನೂ ನಾನು ಪೂರ್ಣವಾಗಿ ಒಪ್ಪುವುದಿಲ್ಲವೆಂದು - ಅವು ತಮಗೆ ಬೇಕಾದ ತೀರ್ಮಾನಗಳನ್ನಷ್ಟೇ ಹುಡುಕಿಕೊಳ್ಳುವ ಸೀಮಿತ ಉದ್ದೇಶಗಳುಳ್ಳ 'ಶಿಕ್ಷಿತ' ಅಧ್ಯಯನ ಮಾದರಿಗಳೆಂದು - ನಾನು ನನ್ನ ಲೇಖನದ ಉಪಸಂಹಾರದಲ್ಲ್ಲಿ ಸ್ಪಷ್ಟವಾಗಿಯೇ ಸೂಚಿಸಿದ್ದೇನೆ.
ತಿಳಿಯಾಗಿ ಹೇಳಿದ್ದಕೆ ನನ್ನೀ. ನಿಮ್ಮ ಮೂಲ ಲೇಖನದಲ್ಲಿನ ಈ ವಿಚಾರಗಳು ಜಾಹೀರಾತುಗಳಲ್ಲಿ ದೊಡ್ಡ ದೊಡ್ದಕ್ಕೆ ಏನೇನೋ ಬರೆದು ಅಲ್ಲಿ ಚುಕ್ಕಿ ಇಟ್ಟು
ಕೆಳಗೆ ಎಲ್ಲೋ ಮೂಲೆಯಲ್ಲಿ ಸಣ್ಣಗೆ conditions apply ಅಂತ ಬರೀತಾರಲ್ಲ ಹಾಗೆ ಕಾಣ್ತು ನಂಗೆ. ಮೇಲೆ ಕೆಲವು ಧೋರಣೆಗಳನ್ನು ನೀವು ಒಪ್ಪುತ್ತೀರಿ ಅನ್ನೋ ರೀತಿ ಕಂಡು ಬಂತು. ಕೆಳಗೆ ನೋಡಿದರೆ ಅದಕ್ಕೆ ವಿರುದ್ಧ! ಈಗಲಾದರೂ ನೇರವಾಗಿ ನಿಮ್ಮ ಯೋಚನೆಗಳನ್ನು ಹೇಳಿದ್ದಕ್ಕೆ ನನ್ನೀ.
>ರಾಜ್ಯಶಾಸ್ತ್ರ ವಿಷಯದಲ್ಲಿ ಘನ ವಿದ್ವಾಂಸರಾದ ನನ್ನ ಅಧ್ಯಾಪಕ ಮಿತ್ರರು ಹಿಂದೂ ಧರ್ಮದ ಜಾತಿಪದ್ಧತಿ ಕುರಿತು ತಾವು ಕೈಗೊಂಡಿರುವ ಸಂಶೋಧನಾ ಯೋಜನೆಯ ಅಂಗವಾಗಿ ನೂರಾರು ವಚನಗಳನ್ನು ವಿಶ್ಲೇಷಿಸಿ ....
ನಿಮ್ಮ ಬರವಣಿಗೆಗಳಿಂದ ... ನಾನು ಈ ಲೇಖಕರು ಕೇವಲ ಒಂದು ದೃಷ್ಟಿಕೋನದಲ್ಲಿ ಮಾತ್ರ ನಮ್ಮ ಸಮಾಜವನ್ನು ನೋಡಿದ್ದಾರೆ ..ಅದೂ ವೈದಿಕ ದೃಷ್ಟಿಕೋನದಿಂದ ಮಾತ್ರ ಅಂತ ಹೇಳಬಲ್ಲೆ.
ಇದಕ್ಕೆ ಒಂದು ಸಣ್ಣ ಉದಾಹರಣೆ ಅಂದ್ರೆ.. ವೇದಗಳಲ್ಲಿ ಜಾತಿ ಪ್ರಸ್ತಾಪ ಬರೋಲ್ಲ. ಆದ್ದರಿಂದ ೧೨ ನೆ ಶತಮಾನದಲ್ಲೂ ಜಾತಿ ಇರಲಿಲ್ಲ ಅನ್ನೋ ರೀತಿಯ ವರ್ತನೆ. ವೇದಕಾಲದ ವರ್ಣಗಳೇ ನಂತರ ( ಕೃಷ್ಣನ ಕಾಲದ ನಂತರ) ಜಾತಿಗಳಾಗಿ ಬದಲಾದವು. ಬರು ಬರುತ್ತಾ ವ್ಯವಸ್ಥೆ ಜಡವಾಗಿ ಅಸ್ಪೃಷ್ಯತೆ , ಜಾತೀಯತೆ ಹುಟ್ಟಿಕೊಂಡವು ಅನ್ನೋ ಸಾಮಾನ್ಯ ತಿಳುವಳಿಕೆಯೂ ಇಲ್ಲದಂತೆ ನೀವು ನಿಮ್ಮ ವಾದವನ್ನು ಮಂಡಿಸಿದ್ದೀರಿ. ( ದಯವಿಟ್ಟು ಬೇಜಾರು ಮಾಡ್ಕೋ ಬೇಡಿ .. ಇದು ನನಗೆ ನಿಮ್ಮ ಲೇಖನ ಓದಿದ ನಂತ ಬಂದ ಅನಿಸಿಕೆ.)
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
>>ಇನ್ನೊಬ್ಬ ಓದುಗರು, ಉಲ್ಲೇಖಿತ ವಚನದಲ್ಲಿ ನೀಲಾಂಬಿಕೆಯ ಹೆಸರು ನೀಲಲೋಚನೆ ಎಂದಾಗಿರುವುದರ ಬಗ್ಗೆ ತಕರಾರು ಎತ್ತಿ ಈ ವಚನವೇ ಅನುಮಾನಾಸ್ಪದ ಎಂದಿದ್ದಾರೆ.....ಓದಿ, ತಮಗಿಷ್ಟ ಬಂದಂತೆ ಅರ್ಥೈಸಿಕೊಂಡು ಸಮಾಧಾನಪಟ್ಟುಕೊಳ್ಳಬಹುದು ಎಂದು ತಿಳಿಸಬಯಸುತ್ತೇನೆ.
ಹ ಹ.. ನಮ್ಮ ಬುಡಕ್ಕೆ ತಂದು ಇಟ್ಟು ಬಿಟ್ರಾ?!
ಇರಲಿ.. ನನಗೆ ಈ ವಚನದಲ್ಲಿ ಎಳ್ಳಷ್ಟೂ ಅಶ್ಲೀಲ ಕಾಣಲಿಲ್ಲ. ಆದ್ರೆ ನಾನು ಹೆದರಿದ್ದು ನಿಮ್ಮಂತವರು (or ಒಂದು ಸೀಮಿತ ಅರ್ಥವನ್ನು ಅಷ್ಟೆ ಹುಡುಕಲು ಹೊರಟವರು... ಉದಾ. ಆಶಾದೇವಿ) ಹೇಗೆ ಈ ವಚನವನ್ನು ಅರ್ಥೈಸುವಿರೋ ಎಂದು. ನಾನಾಗಲೇ ಒಂದು ಪ್ರತಿಕ್ರಿಯೆಯಲ್ಲಿ ಬರೆದಿದ್ದೇನೆ. ಶರಣರ "ಶರಣ ಸತಿ- ಲಿಂಗ ಪತಿ" ಕಲ್ಪನೆಗೆ ಈ ವಚನ ಪೂರಕಾವಗಿದೆ ಎಂದು. ಈ ವಚನದಲ್ಲಿ ಮಾಯೆಯ ಬಗ್ಗೆ ಬಸವಣ್ಣ ಬರೆದಿದ್ದನ್ನು ವಚನಗಳ ಹಿನ್ನಲೆಯಿಲ್ಲದೆ ಓದಿದವರು ಹೇಗೆ ಅರ್ಥೈಸಿಕೊಲ್ಲುವರೋ ಎಂಬ ಯೋಚನೆ ನನಗಿತ್ತು. ಆದಕ್ಕೆ ನಾನು ಹೇಳ್ತಾ ಇರೋದು .. 'ಇಲ್ಲಿ' ಈ ವಚನದ ಬಳಕೆಯ ಉದ್ದೇಶ ನೇರವಾದುದಲ್ಲ ಅಂತ.
ಅದರಲ್ಲೂ ವಚನಗಳ ಮೂಲಗಳು ನಮಗೆ ತಿಳಿಯದ ಕಾರಣ, ಕೆಲ ಜನರು ಕೇವಲ ಒಂದು ಸೀಮಿತ ಉದ್ದೆಶವನ್ನಷ್ಟೇ ಇಟ್ಟುಕೊಂಡು ಬರೆಯವುದನ್ನು ನೋಡಿರುವ ನನಗೆ ಇದು ಕೆಲ 'ಇತರರ' ಬರವಣಿಗೆ ಅನ್ನಿಸಿತು.
ವಚನದ ಆಕರವನ್ನು ಹೇಳಿದ್ದಕ್ಕೆ ನನ್ನೀ. ಒಮ್ಮೆ ಎಲ್ಲಾದರೂ ಸಿಕ್ಕರೆ ಓದಲು ಯತ್ನಿಸುವೆ.
ಸವಿತೃ
ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
ಇನ್ನು ನೀಲಾಂಬಿಕೆ-ನೀಲಲೋಚನೆ ವಿಷಯದ ಬಗ್ಗೆ...
ನಾನು ಎಲ್ಲ ವಚನಗಳನ್ನು ಓದಿಲ್ಲ. ಆದರೆ ನಾನು ಇದುವರೆಗೆ ಎಲ್ಲೂ ನೀಲಲೋಚನೆ ಎಂಬ ಪದ ಬಳಕೆಯನ್ನು ಕಂಡಿಲ್ಲ. ಅದೂ ಬಸವಣ್ಣನ ಬಾಯಲ್ಲಿ.
ನೋಡುವ ...ಸಮಯ ಸಿಕ್ಕರೆ ಒಮ್ಮೆ ಇತ್ತ ಗಮನ ಹರಿಸುತ್ತೇನೆ. ಆದ್ರೆ ವಿದ್ವಾಂಸರು ತಪ್ಪೇ ಮಾಡಲ್ಲ ಅಂತ ನಾನು ನಂಬೋಲ್ಲ. ( ಅವರ ಮೇಲೆ ನನಗೆ ಗೌರವವಿದೆ .ಅ