ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ನೆನಪು: ಎಂ ವ್ಯಾಸ | ಚರ್ಚೆ: ‘ಅನಾಗರಿಕರ ಬಾಂಬ್’ - ಉತ್ತರವೇ? ಪ್ರಶ್ನೆಯೇ?

ಸಂಪದ

ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

April 10, 2008 - 11:54pm — narendra

ಇದ್ದಕ್ಕಿದ್ದ ಹಾಗೆ ಕೊಂಡು ತರುತ್ತಿದ್ದ ಪುಸ್ತಕಗಳ ರಾಶಿ ಹೆಚ್ಚುತ್ತ ಹೋದುದು ಗಮನಕ್ಕೆ ಬಂದು ಗಾಭರಿಯಾಯಿತು. ೨೦೦೬ರಲ್ಲಿ ಒಮ್ಮೆ ಇಡೀ ವರ್ಷ ಓದಿದ ಪುಸ್ತಕಗಳ ಲೆಕ್ಕ ತೆಗೆದಿದ್ದೆ. ಸಾಧಾರಣವಾಗಿ ನನ್ನ ಡೈರಿಯಲ್ಲಿ ನಾನು ಓದಿದ ಒಳ್ಳೆಯ ಪುಸ್ತಕಗಳ ಬಗ್ಗೆ, ನನ್ನ ನಿರೀಕ್ಷೆಯನ್ನು ತೀರ ಸುಳ್ಳಾಗಿಸಿದ ಪುಸ್ತಕಗಳ ಬಗ್ಗೆ ನನ್ನ ಮನಸೋ ಇಚ್ಛೆ ಬರೆದಿಡುತ್ತ ಬಂದಿದ್ದೇನೆ. ಅದರ ಆಧಾರದ ಮೇಲೆ ನೋಡಿದಾಗ ಇಪ್ಪತ್ತನಾಲ್ಕಕ್ಕಿಂತ ಕಡಿಮೆ ಪುಸ್ತಕಗಳನ್ನು ಓದಿದ್ದು ಗಮನಕ್ಕೆ ಬಂದು ಇನ್ನಷ್ಟು ಗಾಭರಿಯಾಗಿತ್ತು. ೨೦೦೭ರಲ್ಲಿ ಇದನ್ನು ಶತಾಯಗತಾಯ ಮುವ್ವತ್ತಾರು, ನಲವತ್ತಕ್ಕೆ ಏರಿಸುವುದಷ್ಟೇ ಸಾಧ್ಯವಾಗಿದ್ದು ನನಗೆ. ಇದು ಇನ್ನು ಹೀಗೇ ಆದರೆ ನನ್ನ ಉಳಿದ ಆಯುಷ್ಯ ಅಂತ ಏನು ತುಂಬ ಆಶಾವಾದಿಯಾಗಿ ನಾನೂ ಬಹುಮಂದಿಯಷ್ಟು ಕಾಲ ಬದುಕೇ ಬದುಕುತ್ತೇನೆಂದುಕೊಳ್ಳುವುದಿದೆ, ಹಾಗೆ ಯೋಚಿಸಿದರೂ ಹೆಚ್ಚೇನೂ ಓದುವುದು ಸಾಧ್ಯವಾಗಲಿಕ್ಕಿಲ್ಲ ಎನಿಸಿತು. ಇಲ್ಲಿ ವಾರಕ್ಕೊಂದು ಪುಸ್ತಕದ ಬಗ್ಗೆ ಬರೆಯುವ ನಿಯಮಕ್ಕೆ ಬದ್ಧನಾಗಿ ಬರೆಯುವುದಾದರೆ ಅದರ ಆಕರ್ಷಣೆಯಿಂದಲಾದರೂ ನನ್ನ ಓದು ಸುಧಾರಿಸಬಹುದು ಎನ್ನುವ ಸ್ವಾರ್ಥದಿಂದ ಅದನ್ನು ಮಾಡಲು ಹೊರಟೆ.

ಇದು ಸ್ವಲ್ಪ ಫಲಿಸಿದಂತಿದೆ. ಹೀಗೆ ಮಾಡಿದರೆ ನೀನು ಕತೆ ಕಾದಂಬರಿ ಬರೆಯುವುದು ಯಾವಾಗ ಮಹರಾಯ, ನಿನ್ನ ಕ್ರಿಯೇಟಿವ್ ರೈಟಿಂಗ್ ಹಾಳಗುವುದಿಲ್ಲವ ಎಂದ ಸ್ನೇಹಿತರಿದ್ದಾರೆ. ನನಗೆ ಅದೆಲ್ಲ ಮುಖ್ಯವೆನಿಸಿಲ್ಲ. ಇಲ್ಲಿ ನನ್ನ ಬದುಕು ನನಗೆ ಮುಖ್ಯ, ಅದಕ್ಕೆ ನನ್ನ ಬರಹಕ್ಕಿಂತ ಓದು ಹೆಚ್ಚು ಪ್ರತಿಫಲ ನೀಡುತ್ತ ಬಂದಿರುವ ಹವ್ಯಾಸವಾಗಿ ಕಂಡಿದೆ. ಕೆಲವೊಮ್ಮೆ ವಾರಕ್ಕೆ ಮೂರು ಪುಟ್ಟ ಪುಟ್ಟ ಪುಸ್ತಕಗಳನ್ನು ಓದಿದ್ದೂ ಇದೆ. ಓದಿದ ಪುಸ್ತಕಗಳ ಬಗ್ಗೆ ಬರೆಯುತ್ತ ಕೂರುವ ವೇಳೆಯಲ್ಲೇ ಇನ್ನೊಂದು ಪುಸ್ತಕ ಸ್ವಲ್ಪ ಓದುವುದು ಒಳ್ಳೆಯದಲ್ಲವ ಅನಿಸಿದ್ದೂ ಇದೆ. ಓದಿದ ಪುಸ್ತಕದ ಬಗ್ಗೆ ಬರೆಯದಿರುವುದೇ ಒಳ್ಳೆಯದು ಅನಿಸಿದ್ದೂ ಇದೆ. ನಾನು ಓದಿದೆ ಎನ್ನುವ ಒಂದೇ ಕಾರಣಕ್ಕೆ ಅದು ಎಲ್ಲರೂ ಓದಬೇಕಾದ ಪುಸ್ತಕ ಆಗಬೇಕಿಲ್ಲವಲ್ಲ.

ಸಾಧಾರಣವಾಗಿ ನಾಲ್ಕು ಮಂದಿ ಒಳ್ಳೆಯದಿದೆ, ಓದಿದ್ರಾ, ಓದಿ ನೋಡಿ ಎಂದೆಲ್ಲ ಹೇಳಿದಂಥ, ಅಥವಾ ನಮಗೆ ಹಿಡಿಸಿದ ಲೇಖಕರು ಬರೆದ ಪುಸ್ತಕಗಳನ್ನಷ್ಟೇ ದುಡ್ಡುಕೊಟ್ಟು ಕೊಳ್ಳುವುದು ಸಾಧ್ಯ, ನನ್ನಂಥವರಿಗೆ. ಹಾಗಾಗಿ ಅವೆಲ್ಲ ಉತ್ತಮ ಪುಸ್ತಕಗಳೇ. ಆದರೂ ಓದಿ ಮುಗಿಸಿದ ಮೇಲೆ ನನಗೂ ಹಾಗನಿಸಬೇಕೆಂದಿಲ್ಲವಲ್ಲ! ಈಗಂತೂ ಅಲ್ಲಿ ಇಲ್ಲಿ ಬರೆದಿದ್ದು, ಅಚ್ಚಾದದ್ದು ಎಲ್ಲವನ್ನೂ ಪುಸ್ತಕಗೊಳಿಸಿ, ಅದ್ದೂರಿ ಬಿಡುಗಡೆ ಸಮಾರಂಭವನ್ನೂ ಹೊರಡಿಸಿ ಅದನ್ನು ದಿಗ್ವಿಜಯಕ್ಕೆ ಬಿಡುವುದು ಸಂಪ್ರದಾಯವೇ ಆಗಿಬಿಟ್ಟಿದೆ. ಓದಲೇಬೇಕಾದ, ಓದಬೇಕಾದ, ಓದಬಹುದಾದ, ಓದದಿದ್ದರೂ ನಷ್ಟವಿಲ್ಲದ, ಓದುವ ಅಗತ್ಯವೇ ಇಲ್ಲದ, ಓದಬಾರದ ಪುಸ್ತಕಗಳೆಲ್ಲಾ ಒಂದೇ ತರ ಕಾಣಿಸಿಕೊಳ್ಳುತ್ತ ಪುಸ್ತಕದ ಹುಚ್ಚು ಇರುವ ಮಂದಿ ಮತ್ತೆ ಮತ್ತೆ ಮೂರ್ಖರಾಗಲು ವಿಪುಲ ಅವಕಾಶಗಳಿರುವ ಈ ದಿನಗಳಲ್ಲಿ ಪುಸ್ತಕಗಳ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಬಲ್ಲವರ ಅಗತ್ಯ ಹೆಚ್ಚಿದೆ. ಸ್ನೇಹಿತರು, ಪರಿಚಯದವರು, ದಾಕ್ಷಿಣ್ಯಕ್ಕೋ ಇನ್ನೊಂದಕ್ಕೋ ಪುಸ್ತಕ ಕಳುಹಿಸಿದರೆ ಅವರ ಸಮಾಧಾನಕ್ಕೆ ಅಂಥ ಪುಸ್ತಕವನ್ನು ಓದಲೇ ಬೇಕಾದ ಒಂದು ಅದ್ವಿತೀಯ ಪುಸ್ತಕ ಎಂದು ಬರೆದು ಋಣಸಂದಾಯ ಮಾಡುವವರ ಬಗ್ಗೆ ಭಯ ಕೂಡ ಪಡಬೇಕಾದ ದಿನಗಳಿವು.

ನಾವೆಲ್ಲ ಯಾಕೆ ಪುಸ್ತಕಗಳನ್ನು ಓದುತ್ತೇವೆ ಮತ್ತು ಯಾಕೆ ಯಾವಾಗಲೂ ಅವರಿವರು ಒಳ್ಳೆಯದಿದೆ ಎಂದ ಪುಸ್ತಕಗಳನ್ನೇ ಓದುತ್ತೇವೆ ಎನ್ನುವ ಬಗ್ಗೆ ಯೋಚಿಸಿದೆ. ಸೀಮಿತ ಸಮಯ, ಸೀಮಿತ ಸಂಪನ್ಮೂಲ ಎರಡರ ಮಧ್ಯೆ ಸಾಧಾರಣವಾಗಿ ನಮಗೆ ಹೊಂದುವ ಅಭಿರುಚಿಯುಳ್ಳವರು ಒಳ್ಳೆಯದಿದೆ ಎಂದ ಸಿನಿಮಾ, ನಾಟಕ, ವಸ್ತು, ವಿಚಾರವನ್ನು ನಾವೂ ಪ್ರಯತ್ನಿಸಬಹುದು ಎನ್ನುವ ಧೈರ್ಯ ಬರುತ್ತದೆ. ಹಾಗೆ ನಾನು ಪುಸ್ತಕಗಳ ಬಗ್ಗೆ ಹುಡುಕುತ್ತ ಕೆಲವರ ಮಾತು ನಂಬಿ ಹೊಂಡಕ್ಕೆ ಬಿದ್ದಿದ್ದೂ ಇದೆ. ಅಂಥ ಸಂದರ್ಭದಲ್ಲಿ ಹಾಗೆ ಒಳ್ಳೆಯದಿದೆ ಎಂದ ಮನುಷ್ಯನ ಬಗ್ಗೆ ಜಾಗ್ರತೆ ವಹಿಸುವುದನ್ನು ಕಲಿತೆ!

ಆದರೂ ಪುಸ್ತಕ ಬರೆಯುವುದೇನೂ ಗುನ್ಹೆಯಲ್ಲ. ಆಫ್ಟರ್ ಆಲ್ ಒಬ್ಬ ಸಾಹಿತಿಯ ಅಪರಾಧವಾದರೂ ಏನು? ಅವನು ಬರೆದದ್ದೇ ಒಂದು ಅಪರಾಧವೆಂಬಂತೆ ಹಿಗ್ಗಾಮುಗ್ಗ ಜಾಡಿಸಿ ಇನ್ನುಮುಂದೆ ಅವನು ತಪ್ಪಿಯೂ ಸಾಹಿತ್ಯ ಸೃಜನಶೀಲತೆ ಎಂದೆಲ್ಲ ಕನಸದಂತೆ ಮಾಡಬೇಕಿಲ್ಲ, ಅಲ್ಲವೆ? ಆಹಾ ಎಂದು ಅದನ್ನು ನಾಲ್ಕು ಮಾತು ಹೆಚ್ಚೇ ಹೊಗಳಿ ಬರೆದರೆ ನಮಗಾಗುವ ನಷ್ಟವಾದರೂ ಏನಂತೆ? ಯಾಕೆ ಏನೋ ಸ್ವಲ್ಪ ಅಪಾಯದ ಸುಳಿವು ಕಂಡಂತೆ ಮುಖ ಮಾಡುತ್ತೀರಿ?

ಒಬ್ಬ ಲೇಖಕನಿಗೆ ತನ್ನ ಪುಸ್ತಕ ಚೆನ್ನಾಗಿಲ್ಲ ಎನ್ನುವ ವಿಮರ್ಶೆಯಾದರೂ ಸಿಕ್ಕಿದರೆ ಅಷ್ಟರಮಟ್ಟಿಗೆ ತಾನು ಗಮನಿಸಲ್ಪಟ್ಟಿದ್ದೇನೆ ಎನ್ನುವ ಸಮಾಧಾನ ಸಿಗುವುದಂತೆ. ಆತನ ಬೆಳವಣಿಗೆಗೂ ಅದು ಸಹಾಯಕವಾದೀತೇನೋ. ಹಾಗೆಯೇ ಒಬ್ಬ ಪುಸ್ತಕಗಳ ಬಗ್ಗೆ ಇತರರಿಗೆ ಹೇಳುವ ಮನುಷ್ಯ ಒಳ್ಳೆಯ ಪುಸ್ತಕಗಳ ಬಗ್ಗೆ ಮಾತ್ರ ಬರೆಯದೆ ಒಳ್ಳೆಯದು ಎಂದು ಬಿಂಬಿಸಲ್ಪಡುತ್ತಿರುವ, ಆದರೆ ತನಗೆ ಕೆಟ್ಟದೆನಿಸಿದ ಪುಸ್ತಕಗಳ ಬಗ್ಗೆ ಕೂಡ ಬರೆಯುವುದು ಒಂದು ರೀತಿಯಲ್ಲಿ ಅಗತ್ಯ ಕೂಡ. ಆದರೆ ಅದನ್ನು ಮಾಡುವುದು ಎಷ್ಟು ಅಪಾಯಕರ ಎನ್ನುವುದನ್ನು ಅನುಭವಿಸಿದವರು ಮುಂದೆ ಸ್ವತಃ ಬರೆಯುವ ಸಾಹಸ ಮಾಡಲಾರರು ಅನಿಸುತ್ತದೆ!

ಕೊನೆಗೂ ಒಂದು ಪುಸ್ತಕವನ್ನು ಕೊಳ್ಳುವ, ಓದುವ ನಮ್ಮ ನಿರ್ಧಾರ ರೂಪುಗೊಳ್ಳುವ ಹಲವಾರು ಅಂಶಗಳಲ್ಲಿ ಈ ರಿವ್ಯೂ, ವಿಮರ್ಶೆ, ಪುಸ್ತಕ ಪರಿಚಯವೂ ಒಂದು. ಕೆಲವೊಮ್ಮೆ ಇಂಥ ಪುಸ್ತಕ ಬಂದಿದೆ ಎನ್ನುವ ಮಾಹಿತಿ ಸಾಕಾಗುತ್ತದೆ. ಕೆಲವೊಮ್ಮೆ ಅದು ಓದಬೇಕಾದದ್ದು ಎನ್ನುವ ವಿಶ್ವಾಸ ಬರಲು ಅದರ ಬಗ್ಗೆ ಸ್ವಲ್ಪ ಹೇಳುವವರು ಬೇಕಾಗುತ್ತಾರೆ. ಇಷ್ಟರ ಮೇಲೆ ಕೊಂಡು ಓದಲು ಮುಹೂರ್ತ, ಕಾಲ ಎಲ್ಲ ಕೂಡಿಬರಬೇಕು ಎನ್ನುವುದಿದ್ದೇ ಇದೆ ಬಿಡಿ. ಆದರೆ ವಿಪರ್ಯಾಸವೆಂದರೆ ಕೆಲವೊಮ್ಮೆ ಈ ರಿವ್ಯೂ ಓದಿ, ಇಷ್ಟು ಗೊತ್ತಾಯಿತಲ್ಲ, ಸಾಕು, ಇನ್ನು ಖುದ್ದು ಪುಸ್ತಕವನ್ನೇ ಓದಿ ಏನೂ ಆಗಬೇಕಾದ್ದಿಲ್ಲ ಎನ್ನುವ ತೀರ್ಮಾನಕ್ಕೆ ಬರುವವರೂ ಇಲ್ಲವೆ? ಇದಾದರೆ ಆ ಸಾಹಿತಿಗೂ ಪ್ರಕಾಶಕನಿಗೂ ಮಾಡುವ ದ್ರೋಹವೆ ಸರಿ!

ವಾರವಾರವೂ ಒಂದು ಪುಸ್ತಕದ ಬಗ್ಗೆ ಬರೆದೇ ಬರೆಯಬೇಕು ಎನ್ನುವ ಹಠ ಒಳ್ಳೆಯದಲ್ಲ ಅಂತ ಗೊತ್ತಾಗಿದೆ. ಹಾಗೆ ಓದಿದ ನಾಲ್ಕು (ಒಳ್ಳೆಯ) ಪುಸ್ತಕಗಳ ಬಗ್ಗೆ ಬಯಸಿದರೂ ಬರೆಯುವುದಾಗಲಿಲ್ಲ. ಎರಡು ಪುಸ್ತಕಗಳ ಬಗ್ಗೆ ಬರೆದಿದ್ದು (ನಾನು ಓದಿ ಸಮಯ ಹಾಳುಮಾಡಿದ ಹಾಗೆ ನಿಮಗೂ ಆಗಬೇಕು ಅನಿಸುವುದನ್ನು ಬಿಟ್ಟರೆ!) ನೀವು ಓದಲೇ ಬೇಕಾದ ಪುಸ್ತಕ ಅಂತ ನನಗೇ ಅನಿಸಿಲ್ಲ. ಆದರೂ ಪುಸ್ತಕಗಳ ಬಗ್ಗೆ ಬರೆಯುವುದು ಅಂಥ ಕೆಟ್ಟಕೆಲಸವೇನಲ್ಲ, ಅಲ್ಲವೆ?

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 855 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 11, 2008 - 4:55am — hamsanandi

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

hamsanandi's picture

ನರೇಂದ್ರ ಅವರೆ,

ನೀವೇನೋ ನಿಮ್ಮ ಬರಹವನ್ನು ಲಲಿತ ಪ್ರಬಂಧವೆಂಬ ಗುಂಪಿಗೆ ಸೇರಿಸಿಬಿಟ್ಟಿರಿ - ನನಗೇನೋ ಅದು ಗಂಭೀರ ಪ್ರಬಂಧವೆಂದೇ ಅನ್ನಿಸಿತು. ನಿಮ್ಮ ವಿಚಾರಸರಣಿ ಇಷ್ಟವಾಯಿತು. ಸೀಮಿತ ಸಮಯವಿರುವ ನಮ್ಗೆ, ಪುಸ್ತಕ ಓದುವುದು ನಮಗೆ ನಾವೇ ಕೊಟ್ಟುಕೊಳ್ಳುವ ಒಂದು ಬಹುಮಾನ - ಅಂತಹದ್ದರಲ್ಲಿ ಬೇರೆಯವರ ಅಭಿಪ್ರಾಯ ಕೇಳಿ ಓದುವಾಗ ಜೋಪಾನವಾಗಿರಬೇಕೆಂಬುದು ಒಂದು ಒಳ್ಳೇ ಸಲಹೆಯೇ!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2008 - 10:57am — agilenag

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

agilenag's picture

ಲೇಖನ ಚೆನ್ನಾಗಿದೆ. ಅದರಲ್ಲಿ ಹಾಸ್ಯಕ್ಕಿಂತಲೂ ಗಂಭೀರ ವಿಚಾರವೇ ಹೆಚ್ಚಾಗಿದೆ. ಇನ್ನು, ಪುಸ್ತಕದ ಬಗ್ಗೆ ಶಿಫಾರಸು ತೆಗೆದುಕೊಂಡರೆ, ಅದೊಂದು ಕುರುಡರು ಆನೆಯನ್ನು ವಿವರಿಸಿದಂತೆ. ಅವರವರಿಗೆ ತೋಚಿದಂತೆ, ಅವರವರ ವಿಚಾರಗಳ ಮಟ್ಟಕ್ಕೆ ತಕ್ಕಂತೆ ಅವರವರು ತಮ್ಮ ಅನಿಸಿಕೆಗಳನ್ನು ಹೇಳುತ್ತಾರೆ. ಹಾಗೆಂದು ಇನ್ನೊಬ್ಬ ಓದುಗರ ವಿಚಾರವನ್ನು ಬದಿಗಿರಿಸಬೇಕೆಂದೇನೂ ಅಲ್ಲ. ಅತ್ಯಂತ ಉತ್ತಮವೆಂದು ಪ್ರಶಸ್ತಿ ಬಂದಿರುವ ಪುಸ್ತಕಗಳೂ ಓದುಗರಿಲ್ಲದೆ ಮೂಲೆಗುಂಪಾಗಿರುವ ಉದಾಹರಣೆಗಳು ಬೇಕಾದಷ್ಟು ದೊರೆಯುತ್ತವೆ. ಹಾಗೆಯೇ ಪ್ರಶಸ್ತಿಯ ವಾಸನೆಯನ್ನೂ ಕುಡಿಯದ ಪುಸ್ತಕಗಳು ಓದುಗರನ್ನು ಸಂಪಾದಿಸಿರುವ ಸಂದರ್ಭಗಳೂ ಉಂಟು. ಇತ್ತೀಚೆಗೆ ಬೇರೆಲ್ಲ ವಿಚಾರಗಳಲ್ಲಿಯೂ ಇರುವಂತೆ ಕನ್ನಡದಲ್ಲಿಯೂ ಅಮೆರಿಕೆ ಇಂಗ್ಲೆಂಡಿನ ಪುಸ್ತಕಗಳ ಬಗ್ಗೆಯೇ ನಮ್ಮವರಿಗೆ ಹೆಚ್ಚು ಹೆಚ್ಚಿನ ಆಸಕ್ತಿ ಮೂಡುತ್ತಿರುವಂತಿದೆ. ಹ್ಯಾರಿ ಪಾಟರ್ ಇದಕ್ಕೊಂದು ಉತ್ತಮ ಉಧಾಹರಣೆ. ಅಂದರೆ ಆ ಪುಸ್ತಕ ಚೆನ್ನಿಲ್ಲವೆಂದಲ್ಲ, ಅಂತಹ ಪ್ರೋತ್ಸಾಹ ನಮ್ಮವರ ಪುಸ್ತಕಗಳಿಗೆ ದೊರಕುತ್ತಿಲ್ಲವೆಂಬುದು ನನ್ನ ಅನಿಸಿಕೆ. ಹಾಗೆಂದು ನಮ್ಮವರು ಬರೆಯುವುದರಲ್ಲೇನೂ ಹಿಂದೆ ಬಿದ್ದಿಲ್ಲ. ಪ್ರತಿದಿನವೂ ಎರಡು-ಮೂರು ಪುಸ್ತಕಗಳು ಲೋಕಾರ್ಪಣೆಯಾಗುತ್ತಿರುವುದನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿರುತ್ತೇವೆ. ಲೇಖಕರು ಹಾಗು ಪ್ರಕಾಶಕರಿಗೇ ಗೊತ್ತು ಅವುಗಳಲ್ಲಿ ಯಾವುದು ಎಷ್ಟರಮಟ್ಟಿಗೆ ಗಲ್ಲಾ ಪೆಟ್ಟಿಗೆ ತುಂಬುತ್ತಿವೆ ಎಂಬುದು. ಹಣಕ್ಕಾಗಿ ಬರೆಯದೆ ಮನಸ್ಸಂತೋಷಕ್ಕಾಗಿ ಬರೆದಿದ್ದರೆ ಅದರ ವಿಷಯವೇ ಬೇರೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2008 - 4:08pm — anivaasi

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

anivaasi's picture

Quote:
ಓದಲೇಬೇಕಾದ, ಓದಬೇಕಾದ, ಓದಬಹುದಾದ, ಓದದಿದ್ದರೂ ನಷ್ಟವಿಲ್ಲದ, ಓದುವ ಅಗತ್ಯವೇ ಇಲ್ಲದ, ಓದಬಾರದ ಪುಸ್ತಕಗಳೆಲ್ಲಾ ಒಂದೇ ತರ ಕಾಣಿಸಿಕೊಳ್ಳುತ್ತ ಪುಸ್ತಕದ ಹುಚ್ಚು ಇರುವ ಮಂದಿ ಮತ್ತೆ ಮತ್ತೆ ಮೂರ್ಖರಾಗಲು ವಿಪುಲ ಅವಕಾಶಗಳಿರುವ ಈ ದಿನಗಳಲ್ಲಿ

ಹ ಹ ಹ - ಇದನ್ನು ಓದಿ ತುಂಬಾ ನಗು ಬಂತು. ಪುಸ್ತಕದ ಮಳಿಗೆಗಳಲ್ಲಿ ಅಲೆಯುವಾಗ ಈ ವಿಂಗಡನೆ ತಲೆಯಲ್ಲಿ ಸದಾ ಜಾಗೃತವಾಗಿರುತ್ತದೆ Smiling ಇಲ್ಲದಿದ್ದರೆ ತಲೆ ಕೆಡುವುದು ಖಂಡಿತ.
Quote:
ಹಾಗೆ ನಾನು ಪುಸ್ತಕಗಳ ಬಗ್ಗೆ ಹುಡುಕುತ್ತ ಕೆಲವರ ಮಾತು ನಂಬಿ ಹೊಂಡಕ್ಕೆ ಬಿದ್ದಿದ್ದೂ ಇದೆ. ಅಂಥ ಸಂದರ್ಭದಲ್ಲಿ ಹಾಗೆ ಒಳ್ಳೆಯದಿದೆ ಎಂದ ಮನುಷ್ಯನ ಬಗ್ಗೆ ಜಾಗ್ರತೆ ವಹಿಸುವುದನ್ನು ಕಲಿತೆ!

ನನ್ನ ಬಳಿ ಅಂಥ ಕೆಲವು ಪುಸ್ತಕಗಳು ಇವೆ. ಅವನ್ನು ಎರಡು ಪುಟ ತಿರುವಿ ಹಾಕಿ ಎಚ್ಚರದಿಂದ ಮೂಲೆಯಲ್ಲಿ ಇಟ್ಟಿದ್ದೇನೆ. ಕೊಟ್ಟವರನ್ನು ಆಗಾಗ ಅದು ನೆನಪಿಸುತ್ತಲೇ ಇರುತ್ತದೆ. Smiling

ನರೇಂದ್ರರೆ, ನಿಮ್ಮ ಬರಹ ತುಂಬಾ ಖುಷಿಕೊಟ್ಟಿತು. ಇದರಲ್ಲಿರುವ ಒಳ/ತಿಳಿ ಹಾಸ್ಯ ತುಂಬಾ gentle ಆದದ್ದು.
ಬರಹಕ್ಕಾಗಿ ತುಂಬಾ ಥ್ಯಾಂಕ್ಸ್...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2008 - 5:01pm — Sunil Jayaprakash

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

Sunil Jayaprakash's picture

ಆದರೂ ಪುಸ್ತಕಗಳ ಬಗ್ಗೆ ಬರೆಯುವುದು ಅಂಥ ಕೆಟ್ಟಕೆಲಸವೇನಲ್ಲ, ಅಲ್ಲವೆ?

ಇದನ್ನು ಒಂದು ಕ್ಷಣ, "ಆದರೂ ಪುಸ್ತಕಗಳನ್ನು ಬರೆಯುವುದು ಅಂಥ ಕೆಟ್ಟಕೆಲಸವೇನಲ್ಲ, ಅಲ್ಲವೆ?" ಅಂತ ಓದಿದ ಹಾಗಾಗಿ ಸಿಕ್ಕಾಪಟ್ಟೆ ನಗು ಬಂತು Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 11, 2008 - 5:03pm — Sunil Jayaprakash

ಉ: ಬೇರೆಯವರು ಬರೆದ ಪುಸ್ತಕಗಳ ಬಗ್ಗೆಯೇ ಬರೆಯುವುದರ ಬಗ್ಗೆ ಬರೆಯುತ್ತ...

Sunil Jayaprakash's picture

ನರೇಂದ್ರರೆ ಮರೆತಿದ್ದೆ, ಅಚ್ಚುಕಟ್ಟಾದ ಬರಹ. :ಚಪ್ಪಾಳೆ:

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇತಿಹಾಸದ ಪುಸ್ತಕಗಳು
  • ಓದದ ಪುಸ್ತಕಗಳು?
  • ಪುಸ್ತಕಗಳನ್ನು ಯಾಕೆ ಇಟ್ಟುಕೊಳ್ಳಬೇಕು?
  • ಪುಸ್ತಕಗಳನ್ನು ಓದುವ/ ಇಟ್ಟುಕೊಳ್ಳುವ ಕುರಿತು
  • ನಾನು, ನನ್ನ ಓದು ಮತ್ತು ಸಂಪದ .
Syndicate content

ಲೇಖಕರು

narendra's picture

ಪರಿಚಯ

ಕನ್ನಡ ಸಾಹಿತ್ಯದಲ್ಲಿ ಆಸಕ್ತ. ಸುಮಾರು ಮುವ್ವತ್ತು ಕಥೆಗಳನ್ನು ಬರೆದಿದ್ದೇನೆ. ಉತ್ತಮ ಅಭಿರುಚಿಯ ನಾಟಕ, ಸಿನಿಮಾ, ಕಲೆ ಮುಂತಾಗಿ ಇಲ್ಲಿನ ಬದುಕನ್ನು ಸಂಪನ್ನಗೊಳಿಸಬಲ್ಲ ಎಲ್ಲದರಲ್ಲೂ ಆಸಕ್ತಿ ಇದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮಿಂಚಿನ ಸುದ್ದಿ : ಬೆಂಗಳೂರಿನಲ್ಲಿ 3 ಕಡೆ ನಿಗೂಢ ಸ್ಫೋಟ. ಬೆಂಗಳೂರಿನ ನಾಗರಿಕರೆ, ಸಾವಧಾನರಾಗಿರಿ .
  • ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
  • ’ಸ್ಪೇಸ್ ಮೌಂಟೆನ್”, ’ಡಿಸ್ನಿ ಲ್ಯಾಂಡ್” ನ ಮತ್ತೊಂದು ರೋಮಾಂಚಕ ತಾಣ ; ’ರೋಲರ್ ಕೋಸ್ಟರ್,’ ನಲ್ಲಿ ರಮಿಸುವುದೇ ಇಲ್ಲಿನ ವಿಶೇಷತೆ !
  • ಪರಿಧಿಯಿಂದ ಹೊರಗೆ ಹೋದ ವ್ಯಾಸ
  • ನೂರು ವರ್ಷ ಕವನಗಳನ್ನು ಬ್ಯಾನ್ ಮಾಡ
  • ಬನ್ನಿ..ಇಂದು ಕೆಲಗೇರಿ ಕೆರೆಯ ಶ್ರಾದ್ಧ, ಶ್ರದ್ಧೆಯಿಂದ ಮಾಡೋಣ!
  • ’ಎಂ.ಪಿ.ಶಂಕರ್’, ಒಬ್ಬ ಅದ್ವಿತೀಯ ಕಲಾಕಾರ ; ಕನ್ನಡ ಚಿತ್ರರಂಗದ, ನಿರ್ಮಾಪಕ, ನಿರ್ದೇಶಕ, ವಿತರಕ, ಹಾಗೂ ಅಭಿನಯಕಾರ, ಶಿವೈಕ್ಯರಾದರು !

ಇತ್ತೀಚಿನ ಪ್ರತಿಕ್ರಿಯೆಗಳು

  • kannadakanda
    ಉ: Sex - ಕಾಮ; ಅದರ ಮಹತ್ವ !
    July 26, 2008 - 5:21am
  • venkatesh
    ಉ: ಒಂದು ಜೋಕ್ಸ (??????)
    July 26, 2008 - 4:16am
  • venkatesh
    ಉ: ವಿಘ್ನಸಂತೋಷಿಗಳ ವಿಕೃತಿಗೆ ಪ್ರಾಣತೆತ್ತ ನಿರುಪದ್ರವಿ ಪ್ಯಾಂಗೋಲಿನ್.
    July 26, 2008 - 4:11am
  • shaamala
    ಉ: ಸೂಳೆಕೆರೆ, (ಶಾಂತಸಾಗರ) ಒಂದು ಸುಪ್ರಸಿದ್ಧ ಪರ್ಯಟಕ- ತಾಣವಾಗಬಹುದು. ಕರ್ನಾಟಕ ಸರ್ಕಾರ ಗಮನಹರಿಸಬೇಕು ಅಷ್ಟೆ !
    July 25, 2008 - 11:36pm
  • Jayalaxmi.Patil
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 9:39pm
  • Jayalaxmi.Patil
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 9:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:35pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:33pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:18pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 8:13pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು.

— ಮನುಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator