ಲೇಖನ: 'ಫ್ಲೋರೈಡ್' ಕರ್ನಾಟಕ..ಕನ್ನಡಿಗರ ಮೇಲೆ 'ಸ್ಲೋರೈಡ್' ಮಾಡುತ್ತಿರುವ 'ಫ್ಲೋರೋಸಿಸ್'!
ಚೆಂಗನ್ನಡ ಛಂದಸ್ - ೨
ಚೆಂಗನ್ನಡ ಛಂದಸ್ - ೨ (ಛಂದೋವತರಣ!)
------------------
ಈ ಬರಹದ ಮೊದಲ ಭಾಗದಲ್ಲಿ ಛಂದೋವೃತ್ತಗಳಲ್ಲಿ ಪ್ರಾಸಕ್ಕೆ ಒತ್ತು ಕೊಟ್ಟು ಮಾಡಿರುವ ಬಗೆಗಳನ್ನು ನೋಡಿದೆವು. ನಾಗವರ್ಮನ ಕೃತಿಯಲ್ಲಿ ಇನ್ನೂ ಸ್ವಲ್ಪ ಮುಂದುವರೆದರೆ, ಲಘು/ಗುರು - ಅಕ್ಷರಗಣಗಳು - ಮಾತ್ರಾಕಾಲಗಳು - ವೃತ್ತಗಳು - ರಗಳೆ - ಕಂದ - ಕನ್ನಡ ವೃತ್ತಗಳು ಇತ್ಯಾದಿಗಳನ್ನು ಕಾಣಬಹುದು. ಆದರೆ, ಪಾದದಲ್ಲಿನ ಅಕ್ಷರಗಳು ಹೆಚ್ಚಾಗುತ್ತಾ ಹೋದಂತೆಲ್ಲಾ, ಛಂದಸ್ಸಿನ ಚೆಂದವನ್ನು ಕಾಪಾಡಿಕೊಳ್ಳುವುದು ಕಷ್ಟಕರವೇ ಆಗಿಹೋಯಿತು. ಇಷ್ಟಕ್ಕೂ ಛಂದಸ್ಸಿನ ಮೂಲ ಉದ್ದೇಶ "ಗೇಯತೆ" ಅಥವಾ ಹಾಡಲು ಆಗುವಂತಿರುವುದು; ಅದಕ್ಕೇ ಕುತ್ತು ಬರತೊಡಗಿದಾಗ, "ಘನಗಂಭೀರ" ಕವಿತ್ವದ ಸಂಕೀರ್ಣ ಪದಗಳನ್ನು ಒಡೆದು, ಉಸಿರು ತೆಗೆದುಕೊಳ್ಳಲಾದರೂ ನಿಲ್ಲಿಸಲೇಬೇಕಾದ ಪರಿಸ್ಥಿತಿ ಬಂತು! ಗಾಯಕರು ಸ್ವಲ್ಪ ಉಸಿರಾಡುವಂತಾದ ಆ "ಉಸಿರ್ದಾಣ"ವೇ 'ಯತಿ'. ಯತಿ ಎಲ್ಲಿ ಯಾವಾಗ, ಎಷ್ಟಕ್ಕರದ ನಂತರ ಬರಬೇಕೆಂಬ ನಿಯಮವೂ ಆರಂಭವಾಯಿತು. ಯತಿಯೇ ಇಲ್ಲದೊಡೆ ಕನ್ನಡ "ಕಾವ್ಯಮೇಂ ಶೋಭಿಪುದೇ?" ಎನ್ನುತ್ತಾನೆ ನಾಗವರ್ಮ. ಈತನದೂ ಪಿಂಗಳನ ಛಂದಶ್ಶಾಸ್ತ್ರವನ್ನೇ ಆಧರಿಸಿದ್ದುದರಿಂದ, ಸಕ್ಕದ ಯತಿಗಳೇ ಕನ್ನಡದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ. ಆದರೆ, ಇವನ ನಂತರದ ನಂದಿ/ನಂದೀಶ ಕವಿಯ ನಂದಿಛಂದಸ್ ಕನ್ನಡಕ್ಕೆ(ಹಾಗೂ ತೆಲುಗಿಗೆ) ಮೀಸಲಾದ ಯತಿಗಳನ್ನು ನೀಡುತ್ತದೆ! ಯತಿಗೆ ಉದಾಹರಣೆ:
ಜೃಂಭಾವಿದಾರಿತಮುಖಾತ್‍ಸ್ಫುರಂತೀಂ, ಕೋ ಹರ್ತುಮಿಚ್ಛತಿ ಹರೇಃ ಪರಿಭೂಯ ದಂಷ್ಟ್ರಾಂ|
("," ಇರುವೆಡೆಯಲ್ಲಿ ಉಸಿರ್ದಾಣ - ಯತಿ ೧೧ನೇ ಅಕ್ಕರದ ನಂತರ)
ಹರಿವರಗಳ ಮಳೆ ಕರೆಯುವನು, ಹರ ಮರೆಯದೆ ತಾ ಪೊರೆಯುವನು
("," ಇರುವೆಡೆಯಲ್ಲಿ ಉಸಿರ್ದಾಣ - ಛಂದೋವೃತ್ತವಲ್ಲವಾದರೂ ಯತಿ ೧೩ನೇ ಅಕ್ಕರದ ನಂತರ ಇದೆ.)
ಈ "ಉಸಿರ್ದಾಣ", ಛಂದಸ್ಸಿನ ಮುಕುಟಕ್ಕಿಟ್ಟ ಗರಿ! ಆದರೂ ಕಷ್ಟಕರವಾದ ಛಂದೋಬದ್ಧ ಕಾವ್ಯಗಳನ್ನು ಬರೆದಂತೆಲ್ಲಾ, ಅದರಲ್ಲಿನ ಕತೆಯೋ ಇತ್ತೀಚಿನ ದೂರದರ್ಶನದ ಧಾರಾವಾಹಿಗಳಂತೆ ಎಳೆಯಹತ್ತಿದ್ದು ಕವಿಗೇ ಬೇಸರ ತರಲು ಶುರುವಾಯಿತು! ಆದ್ದರಿಂದ ಮಧ್ಯೆ ಮಧ್ಯೆ ಗದ್ಯದಲ್ಲಿ ಬರೆಯಲಾರಂಭಿಸಿಯೇ ಬಿಟ್ಟ! ಈ ಗದ್ಯಪದ್ಯಗಳ ಮಿಲನವೇ "ಚಂಪೂ" ಕಾವ್ಯ! ಸ್ವತಃ ನಾಗವರ್ಮನಿಗೇ ಛಂದಸ್ಸು ಬೇಸರವಾಗಿ ಅಲ್ಲಲ್ಲಿ ಗದ್ಯದಲ್ಲಿ ಬರೆದಿರುವುದೇ ಇದಕ್ಕೆ ಸಾಕ್ಷಿ!! ಈ ಬೇಸರ ಕಾವ್ಯದಲ್ಲೇನೋ ಗದ್ಯವಾಯಿತು ಸರಿ, ಸಂಗೀತ-ನಾಟ್ಯದಲ್ಲಿ ಏನು ಮಾಡುವುದೆಂದು ತೋಚದಾದಾಗ
ಛಂದಸ್ಸಿಗೆ ಮತ್ತೊಂದು ಆಯಾಮವನ್ನಿತ್ತು ರಸವನ್ನು ತುಂಬಿದ ಮಹಾನುಭಾವ - ನಮ್ಮ ಕನ್ನಡದ ಮುನಿ ಮತಂಗ ಮಹರ್ಷಿ. ಹೊಸತನವಿಲ್ಲದೆ ತೊಳಲಾಡುತ್ತಿದ್ದ ಛಂದಸ್ಸಿಗೆ "ರಾಗ" ತೊಡಿಸಿ, ಯತಿಗೆ "ತಾಳ" ಉಡಿಸಿ, ಕ್ಲಿಷ್ಟ ಛಂದಸ್ಸರಿಯದ ರಸಿಕರಿಗೂ ದೇಶೀಯ ರಸವನುಣಿಸಲು ಈ ಮಹಾನುಭಾವ ರಚಿಸಿದ ಗ್ರಂಥವೇ "ಬೃಹದ್ದೇಶೀ".
ಭರತನ ನಾಟ್ಯಶಾಸ್ತ್ರದ ಕಾಲ ಪಾಶ್ಚಿಮಾತ್ಯರಂತೆ ಕ್ರಿ.ಶ. ೨ ನೇ ಶತಮಾನ. ಸಂಗೀತಶಾಸ್ತ್ರದ ತಳಹದಿಯೆನಿಸಿದ "ಸಂಗೀತರತ್ನಾಕರ" ಗ್ರಂಥದ ಕಾಲ ಕ್ರಿ.ಶ. ೧೩ನೇ ಶತಮಾನ ಎಂದು ಅಂದಾಜಿದೆ. ಇವೆರಡಕ್ಕೂ ಶತಶತಮಾನಗಳ ಕಾಲ ಸೇತುವೆಯಾದವನೇ ಮತಂಗಮುನಿ; ಈತನ ಕಾಲ ಸುಮಾರು ೮ ನೇ ಶತಮಾನವೆಂದು ಹೇಳುವವರಿದ್ದಾರೆ. ಇವನಿದ್ದ ತಾಣ ಹಂಪೆಯ ಬಳಿಯ ಮತಂಗಪರ್ವತವೆಂದೂ ಪ್ರತೀತಿ. ಅವನಿದ್ದುದು ಹಿಂದೂ ಸಂಸ್ಕೃತಿಯ ಉನ್ನತಿಯ ಉತ್ತುಂಗದ ಶಾತವಾಹನರ ಕಾಲವೆಂದು ತೋರುತ್ತದೆ. ಮತಂಗನ ಬೃಹದ್ದೇಶೀ ಉದ್ದೇಶದಲ್ಲೂ, ವಿಚಾರದಲ್ಲೂ ಬೃಹತ್ ಎಂಬುದರಲ್ಲಿ ಎರಡು ಮಾತಿಲ್ಲ. ಈಗಿರುವ ಈ ಗ್ರಂಥದ ಒಂದೇ ಒಂದು ತಾಳೆಗರಿ ಪ್ರತಿ, ಬನಾರಸ್ ಹಿಂದೂ ವಿವಿಯಲ್ಲಿದ್ದರೂ, ಸಿಕ್ಕಿದ್ದು ಮಾತ್ರ ಕೇರಳದಲ್ಲಿ ಎಂದು ಉಲ್ಲೇಖವಿದೆ. ಏನೇ ಆಗಲಿ, ಅವನ ಕಾಲದಲ್ಲೇ "ಕರ್ನಾಟಕ ಶಾಸ್ತ್ರೀಯ ಸಂಗೀತ" ಇತ್ತೆಂಬುದು ಅವನ ಕೃತಿಯಲ್ಲೇ ವ್ಯಕ್ತವಾಗಿದೆ. ಬೃಹದ್ದೇಶೀಗ್ರಂಥದ ವಿಶೇಷತೆಯೆಂದರೆ "ಪ್ರಬಂಧ" ಎಂಬ ಕಾವ್ಯ-ಗೇಯ ಪ್ರಕಾರವನ್ನು ಮಂದಿಸಿರುವುದು; ಇದಕ್ಕೆ ಆಧಾರ ಮಾತ್ರ ಛಂದಸ್ ಎಂಬುದು ನಿರ್ವಿವಾದ. ಇದೇ ಕಾರಣದಿಂದ ಈ ಲೇಖನದಲ್ಲಿ ಪ್ರಬಂಧವನ್ನೇ ಮುಖ್ಯವಾಗಿ ತೆಗೆದುಕೊಂಡಿದ್ದೇನೆ .
ಛಂದಸ್ಸಿನ ಬುನಾದಿಯ ಮೇಲೆದ್ದ ದೇಶೀ "ಪ್ರಬಂಧ" ಸೌಧದ ನೋಟ ಇಲ್ಲಿದೆ:
೧) ಪ್ರಬಂಧಗಳು ಲೆಕ್ಕವಿಲ್ಲದಷ್ಟು - ಶಿವನ ಮುಖದಿಂದಲೇ ಉದ್ಭವಿಸಿದವೆಂದು ಹೇಳುತ್ತಾರೆ. ಅವುಗಳಲ್ಲಿನ ಪ್ರಭೇದಗಳಿಂತಿವೆ:
೧.ಕಂದ ೨.ವೃತ್ತ ೩.ಗದ್ಯ ೪.ದಂಡಕ
೫.ವರ್ಣ ೬.ಆರ್ಯ ೭.ಗಾಥಾ ೮.ದ್ವಿಪಥಕ
೯.ಪದ್ಧತಿ ೧೦.ಅಡಿಲಾ ೧೧.ಚತುಷ್ಪದೀ ೧೨.ದೋಧಕ
೧೩.ತೋಟಕ ೧೪.ವಸ್ತು ೧೫.ಕ್ರೌಂಚಪಾದ ೧೬.ಹಂಸಪಾದ
೧೭.ಶುಕಶಾರಿಕಾ ೧೮.ಅಶ್ವಲೀಲಾ ೧೯.ಗಜಲೀಲಾ ೨೦.ಸಿಂಹಲೀಲಾ
೨೧.ಶರಭಲೀಲಾ ೨೨.ಶುಕಚಂಚು ೨೩.ವಿಚಿತ್ರ ೨೪.ತ್ರಿಭಂಗಿಕಾ
೨೫.ಚತುರಂಗ ೨೬.ಜಯವರ್ಧನ ೨೭.ಅಂಕಚಾರಿಣೀ ೨೮.ಸಿಂಹವಿಕ್ರಾಂತ ಇತ್ಯಾದಿಗಳು(೪೮ ಸಿಕ್ಕಿವೆ).
ಸಂಗೀತದ ಆರು ಅಂಗಗಳನ್ನು ನಿರ್ದೇಶಿಸುವ ಮೂಲಕ, ಕನ್ನಡ ಛಂದಸ್ಸಿಗೆ ಕರ್ಣಾಟಕ ಸಂಗೀತ ರೂಪವನ್ನು ಎರಕಹೊಯ್ಯುವ ಮಹಾನ್ ಕೆಲಸವನ್ನು ಈ ಗ್ರಂಥ ಮಾಡಿದೆ. ಆ ಆರು ಅಂಗಗಳೆಂದರೆ:
೧. ಪದ -> ಸಾಹಿತ್ಯಭಾಗ
೨. ಪಾಟ/ಠ -> ಮದ್ದಲೆಯ ಹೊಡೆತದಂತಹ ಹಾಡಕ್ಷರಗಳು
೩. ಬಿರುದ/ವಿರುದ -> ಗೀತೆಯ ಮುಖ್ಯ ವಸ್ತುವಿನ ಬಣ್ಣನೆ
೪. ಸ್ವರ -> ಸ,ರಿ,ಗ,ಮ,ಪ,ಧ,ನಿ ಅಕ್ಕರಗಳು ಹಾಗೂ ಅವುಗಳ ಸ್ಥಾಯೀ
೫. ತೇನ/ಕ -> ಅಕ್ಕರಗಳ ಮರುಜೋಡಣೆ {ಬಹುಶಃ 'ತೇನ' ಎಂಬುದರ ಪುನರುಕ್ತಿ}
೬. ತಾಳ -> ಕಾಲಪ್ರಮಾಣ, ಹಾಡಿನ ಗತಿ
ಮತಂಗಮುನಿ ಈ ಆರು ಅಂಗಗಳಿಂದ ಛಂದಸ್ಸನ್ನು ಬಳಸಿ ಸಂಗೀತ ರಚನೆಯನ್ನು ಹೀಗೆ ತೋರುತ್ತಾನೆ:
೧.ಕಂದ = ಪಾಠ ಹಾಗೂ ಬಿರುದ ಇದ್ದು, ತಾಳ ಇಲ್ಲದ್ದು.
೨.ವರ್ಣ = ಬಿರುದ ಹಾಗೂ ತಾಳಗಳಿಂದ ಕೂಡಿ "ಕರ್ನಾಟ"ಭಾಷೆಯಲ್ಲಿ ಹಾಡುವ ವಿಧ! (ನೋಡಿ: ೩೮೭/೮ ನೇ ಪದ್ಯ)
೩.ಪದ್ಧತಿ = ಯಾವುದೇ ಭಾಷೆಯಲ್ಲಿ ಸ್ವರ, ಪಾಠ, ತಾಳಗಳೊಡನೆ ಹಾಡುವ ವಿಧ!
೪.ಕ್ರೌಂಚಪಾದ = ಪದ, ಸ್ವರ ಹಾಗೂ (ಪ್ರತಿ)ತಾಳದಿಂದ ಕೂಡಿದ ಪ್ರಬಂಧ
-> ಜೊತೆಗೆ ೨೫ ಅಕ್ಕರಗಳಿದ್ದು ೫,೫,೮ ಮತ್ತು ೭ ನೇ ಅಕ್ಕರಕ್ಕೆ ಯತಿ ಇರಬೇಕು
-> ಹಾಗೂ ಭಾ ಮಾ ಸ ಭಾ ನ ನ ನ ನ ಗಣಗಳು(೮*೩=೨೪) + ಗ (ಗುರು) = ೨೫ ಮಾತ್ರೆಗಳಿರಬೇಕು
೫.ಹಂಸಪಾದ = ಕ್ರೌಂಚಪಾದದಲ್ಲಿ ಒಂದು ಪಾದ ಸಕ್ಕದದಲ್ಲೂ, ಮತ್ತೊಂದು ದೇಶೀ ಭಾಷೆಯಲ್ಲೂ ಇದ್ದು, ಪ್ರಾಸವಿರಬೇಕು!
-> ಆದರೆ ಭಾ ಮಾ ಸ ಭಾ ನ ನ ನ ಯ ಗಣಗಳಿರುತ್ತವೆ (ಅಥವಾ ತಾ ಯ ಭಾ ಭಾ ನ ನ ನ ನ ಗ ಎಂದೂ ಇದೆ)
೬.ಶುಕಶಾರಿಕಾ = ಹಂಸಪಾದದಲ್ಲಿ ಒಂದು ಸಕ್ಕದ ಪಾದ ಇನ್ನೊಂದು "ಕರ್ನಾಟ"ಭಾಷಾ ಪಾದವಾಗಿದ್ದರೆ ಅದು ಶುಕಶಾರಿಕಾ ಪ್ರಬಂಧ!
-> ಆದರೆ ಇದರಲ್ಲಿ ತಾಳ, ಪದ ಹಾಗೂ ಪಾಠ ಅಷ್ಟೂ ಇರಬೇಕು! (ನೋಡಿ: ಪದ್ಯ ೩೯೭)
೭.ತುರಗಲೀಲಾ = ನಜಭಾಜಭಾಜಜಲಗ + ಬಿರುದ
೮.ಗಜಲೀಲಾ = ತುರಗಲೀಲಾ + ತಾಳ
೯.ಸಿಂಹಲೀಲಾ = ರಾ ಜ ಗ ಗ + ಸ್ವರ + ತೇನಕ + ಬಿರುದ
೧೦.ಶರಭಲೀಲಾ = ಎಂಟು ಪಾದಗಳು ಎಂಟು ರಾಗಗಳಲ್ಲಿ ಹಾಗೂ ಎಂಟು ತಾಳಗಳಲ್ಲಿದ್ದಾಗ ಶರಭಲೀಲೆ!!
೧೧.ಏಲಾ = ಎರಡು ಪಾದಗಳಿಂದ ಮೊದಲಾಗಿ, ಅನುಪ್ರಾಸವಿರಬೇಕು.(ಮೂರು, ನಾಲ್ಕು, ಐದನೆಯ ಪಾದದಲ್ಲೂ)
ಪ್ರತಿಪಾದದಲ್ಲಿ ೪ 'ಗೀತಿ'ಗಳಿರಬೇಕು.
ಅನುಪ್ರಾಸ, ಪ್ರತಿ ಪಾದದ ಕೊನೆಯಲ್ಲಿ ಹಾಡಬೇಕು.
ಬಿರುದವೂ ಅದರಲ್ಲಿರಬೇಕು.
ಮಂಥಾ,ದ್ವಿತ್ಯ,ಕಂಕಾಲ,ಪ್ರತಿತಾಲ ಎಂಬ ನಾಲ್ಕು ತಾಳಗಳಲ್ಲಿ ಹಾಡಲು ಆಗಬೇಕು!!
... ಅಬ್ಬಬ್ಬಾ... ಬೃಹದ್ದೇಶೀ ಎಂಬ ದೊಡ್ಡ ಸಾಗರದ ಪರಿಚಯವಾಯಿತು!! ಛಂದಸ್ಸು ಸಂಗೀತಕ್ಕಿಳಿದುಬಂದ ಛಂದೋವತರಣ ಕನ್ನಡದ ಮುನಿಯ ಕಾಣಿಕೆಯೆನ್ನುತ್ತಲೇ ಮೈ ಜುಮ್ಮೆನ್ನದಿರದು! ಈ ಸಂಗೀತ ಶಾಸ್ತ್ರಸಾಗರದಿಂದ ನನಗೆ ಸಿಕ್ಕ ಬೊಗಸೆ ನೀರನ್ನು ನಿಮಗೆ ಹರಿಸಿದ್ದೇನೆ. ಈ ಕಿರುವರಹ ನಿಮಗೆ ಚೆಂಗನ್ನಡ ಛಂದಸ್ಸು ಹಾಗೂ ಸಂಗೀತಶಾಸ್ತ್ರದಲ್ಲಿ ಆಸಕ್ತಿ ಮೂಡಿಸಿದರೆ ನನ್ನ ಶ್ರಮ ಸಾರ್ಥಕ!
ಮತಂಗಮುನಿಯ ನೆನೆಯಿರೈ!
ಮಥನ ಮನದಿ ನಡೆಸಿರೈ!
ಮೃದಂಗವಾದ್ಯ ನುಡಿಸಿರೈ!
ಮಧುರವದನೆ ಸರಸತಿಯ
ನೆನೆದು ಗೀತೆ ಪಾಡಿರೈ!
ನಿಮ್ಮವ
ಬೆನಕ

- Login or register to post comments
- 532 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಚೆಂಗನ್ನಡ ಛಂದಸ್ - ೨
ಬೆನಕರೆ,
ಧನ್ಯವಾದಗಳು. ಬೃಹದ್ದೇಶಿಯನ್ನು ಚೆನ್ನಾಗಿ ಪರಿಚಯಿಸಿದ್ದೀರಿ.
ಬೃಹದ್ದೇಶಿಯ ಇ-ಪ್ರತಿ ಎಲ್ಲಾದರೂ ಲಭ್ಯವಿದೆಯೇ?
-ಹಂಸಾನಂದಿ
ಉ: ಚೆಂಗನ್ನಡ ಛಂದಸ್ - ೨
ಹಂಸಾನಂದಿಯವರೇ,
ಧನ್ಯವಾದಗಳು. ಇ-ಪ್ರತಿಗಾಗಿ ಹುಡುಕಿ ನೋಡಿದೆ; ಇದುವರೆಗೂ ಸಿಗಲಿಲ್ಲ.
ನನ್ನ ಬರಹಕ್ಕೆ ಆಕರವಾಗಿ ಏಳನೇ ವಿಶ್ವಸಂಸ್ಕೃತಸಮ್ಮೇಳನದ ಪ್ರಬಂಧಸಂಗ್ರಹ (ಸಂಪಾದಕರು: ಜೊನಾಥನ್ ಕಟ್‍ಝ್)ದ ಒಂಭತ್ತನೇ ಸಂಪುಟವನ್ನು (ಭಾರತೀಯ ಸಂಗೀತ ಹಾಗೂ ನೃತ್ಯದ ಪಾರಂಪರಿಕ ಶಾಸ್ತ್ರ ಹಾಗೂ ಪ್ರಯೋಗ) ಬಳಸಿದ್ದೇನೆ. ಆದ್ದರಿಂದ ಸಮಗ್ರ ಮಾಹಿತಿ ನೀಡಿರುವ ತೃಪ್ತಿ ಇನ್ನೂ ನನಗಿಲ್ಲ.
ನನ್ನ ಜಪಾನೀ ಮಿತ್ರರೊಬ್ಬರು ಮದ್ರಾಸ್ ವಿವಿಯ ಸಕ್ಕದ ವಿಭಾಗದ ಡಾ. ಎಸ್. ಎಸ್. ಜಾನಕಿಯವರೊಡಗೂಡಿ "ಜಪಾನೀಯರಿಗಾಗಿ ಸಕ್ಕದ" ಎಂಬರ್ಥದ ಆಂಗ್ಲ-ಸಕ್ಕದ-ಜಪಾನೀ ತ್ರಿಭಾಷಾಹೊತ್ತಗೆ ಹೊರತಂದು, ಅದನ್ನು ಪರಿಷ್ಕರಿಸುವ ಸುಯೋಗ ನನಗೆ ಸಿಕ್ಕಾಗ ನನಗೆ ಡಾ.ಜಾನಕಿಯವರ ಪರಿಚಯವಾಯಿತು. ಅವರು ಮಂಡಿಸಿದ "ನಾಟ್ಯದಲ್ಲಿ ಪತಾಕ ಹಸ್ತ-ಮುದ್ರೆ" ಎಂಬ ಪ್ರಬಂಧವೂ ಈ ಮೇಲಿನ ಸಂಪುಟದಲ್ಲಿ ಸೇರಿದ್ದುದರಿಂದ ಕುತೂಹಲಕ್ಕಾಗಿ ತಿರುವಿಹಾಕುತ್ತಿದ್ದಾಗ, ಲೂಯಿಸ್ ರೋವೆಲ್ ಮಂಡಿಸಿದ "ಮತಂಗನ ಬೃಹದ್ದೇಶೀ ಕೃತಿಯಲ್ಲಿ ಪ್ರಬಂಧಸರ್ಗ" ಎಂಬ ವರ್ಗ ಕಣ್ಣಿಗೆ ಬಿತ್ತು. ಅದೇ ಈ ಬರಹಕ್ಕೆ ಆಕರವಾದದ್ದು.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೨
ಬೆನಕರೆ, ನಿಮ್ಮ ಬರಹಕ್ಕೆ ಹೆನ್ನನ್ನಿ, ಸವಿಯೊದಗು. ಎಂಥ ಮಾಹಿತಿ ನೀಡಿದ್ದೀರಾ ಎಂಬುದನ್ನು ಅಳೆಯಲು ಸಾಧ್ಯವಾಗುತ್ತಿಲ್ಲ. ಸಂಗ್ರಹಯೋಗ್ಯವಾದ ಬರಹ. ಮೇಲಿನ ಬರಹವನ್ನು ಮೂರು-ನಾಲ್ಕು ಬಾರಿ ಓದಿದೆ (ಇನ್ನೂ ಓದುತ್ತಿರುವೆ). ಓದಲು ಶುರುವಿಟ್ಟುಕೊಂಡಂತೆ ತುಂಬಾ ಕುತೂಹಲ, ಪ್ರಶ್ನೆಗಳು ಏಳುತ್ತಿವೆ. ಬೃಹದ್ದೇಶಿಯ ಪ್ರತಿಯನ್ನು ಇಂಟರ್ನೆಟ್ಟಿನಲ್ಲಿ ಹುಡುಕುತ್ತಿದ್ದಾಗ ಒಂದು ಕಡೆ ಸಿಕ್ಕಿತು (ಅದರ ಬಗ್ಗೆ ಬರೆಯುವೆ). ಓದಲು ಶುರುಮಾಡಿದರೆ ಸಮಯ ಹೋಗಿದ್ದೆ ತಿಳಿಯುತ್ತಿಲ್ಲ. ಇಂಥ ಒಂದು ಗ್ರಂಥವನ್ನು ಇಷ್ಟುವರ್ಷ ಓದಿಲ್ಲವಲ್ಲ ಎಂದು ವ್ಯಥೆಯಾಯಿತು. ಇದರಲ್ಲಿ ಗಮನಿಸಿದ ಒಂದು ವಿಷಯವೆಂದರೆ ಗ್ರಂಥದಲ್ಲಿಯೇ ಅಲ್ಲಲ್ಲಿ ಸ್ವರಪ್ರಸ್ತಾರಗಳೂ ಇವೆ. ಬಹುಶಃ ಇದನ್ನು ಮತಂಗಮುನಿಯ ಕೃತಿಯನ್ನು ನಂತರ ಸಂಪಾದಿಸಿಟ್ಟುಕೊಂಡುವರು ಸೇರಿಸಿದ್ದಿರಬಹುದು.
ತಾಲಶೂನ್ಯಾದಿ ತು ಯಃ ಪಾಟೈರ್ವಿರುತೈಶ್ಚ ಸಮನ್ವಿತಾ: |
ಸ ಕಂದ ಇತಿ ಕರ್ಣಾಟಭಾಷಾದಿಪದಮಿಶ್ರಿತ: ||
ಬೃಹದ್ದೇಶೀ ಗ್ರಂಥದಲ್ಲಿ ವರ್ಣಗಳ ಬಗ್ಗೆ ಹೆಚ್ಚು ತಿಳಿಯಲು ಪ್ರಯತ್ನಿಸುತ್ತಿದ್ದಾಗ ಈ ಒಂದು ಪದ್ಯ ಸಿಕ್ಕಿತು.
ತಾಲೇನಾಪಿ ಚ ಯುಕ್ತಃ ಸ್ಯಾದ್ ವರ್ಣಃ ಕರ್ಣಾಟಭಾಷಯಾ |
ಸ್ವರಾವಾಟಸಮಾಯುಕ್ತಾ ತಾಲೇನ ಚ ಸಮನ್ವಿತಾ || ೪೦೩ ||
ಈ ವಿವರಣೆ ನನಗೆ ತುಂಬಾ ಆಶ್ಚರ್ಯ ಉಂಟುಮಾಡಿತು. ನಾನು ಕೇಳಿದ ಹಾಗೆ, "ವರ್ಣ"ಗಳು ಹೆಚ್ಚಾಗಿ ತೆಲಗಿನಲ್ಲಿಯೇ ಇವೆಯಂತೆ. ಹಾಂ! ಕಾಲಚಕ್ರದಲ್ಲಿ "ವರ್ಣ"ದ ಅರ್ಥ ಹೊರಳಿರಲೂ ಬಹುದು. "ವರ್ಣ" ರಚನೆಯ ಬಗ್ಗೆ ಸಂಗೀತ ರತ್ನಾಕರದಲ್ಲಿ ಏನು ಹೇಳಲಾಗಿದೆ ? ಎಂಬುದನ್ನು ಯಾರಾದರೂ ಓದಿದ್ದರೆ ಎಲ್ಲರಿಗೂ ತಿಳಿಸಿಕೊಡಿ.
ಉ: ಚೆಂಗನ್ನಡ ಛಂದಸ್ - ೨
ಮತಂಗಮುನಿಯ ಬೃಹದ್ದೇಶಿಯನ್ನು, ರೇಪಿಡಶೇರಿನಲ್ಲಿ ಏರಿಸಿದ್ದೇನೆ. ಎಲ್ಲರೂ ಉತ್ಸಾಹದಿಂದ ಓದಿ ಆನಂದಿಸಿ.
ಪುಸ್ತಕದ ಕೊಂಡಿ - ಮತಂಗಮುನಿಯ ಬೃಹದ್ದೇಶೀ
ಪ್ರಕಟಣೆ - ತಿರುವನಂತಪುರ ಸಂಸ್ಕೃತ ಮಾಲೆ
ಇಸವಿ - ೧೯೨೮
ಸಂಪಾದಕರು - ಕೆ ಸಾಂಬಶಿವ ಶಾಸ್ತ್ರಿ
ಒಂದು ವೇಳೆ ರೇಪಿಡಶೇರಿನ ಕೊಂಡಿ ಕೆಲಸಗೈಯದಿದ್ದರೆ, ಸಿ-ಡ್ಯಾಕ್ ನೋಯಿಡಾದ ಒಂದು ಕೊಂಡಿಯಿಂದ ಓದಿ. ಎಚ್ಚರಿಕೆ, ಸ್ಕ್ರಾಲಿಂಗ್ ಮಾಡುವಾಗ ಸ್ವಲ್ಪ ತೊಂದರೆಗಳಾಗಬಹುದು.
ಮತಂಗಮುನಿಯ ಬೃಹದ್ದೇಶೀ - ಸಿಡ್ಯಾಕ್ ನೋಯಿಡಾ ಸೈಟಿನಿಂದ
ಉ: ಚೆಂಗನ್ನಡ ಛಂದಸ್ - ೨
ಸುನಿಲರೆ,
ನಿಮ್ಮೀ ಪುಸ್ತಕದ ಕೊಡುಗೆಗೆ ನನ್ನ ಧನ್ಯವಾದಗಳು.
ನಾನು, ಈ ಪುಸ್ತಕದ ಕೊಂಡಿಯನ್ನು ಇತರ ಸಂಗೀತಾಸಕ್ತರಲ್ಲಿ ಹಂಚಿಕೊಳ್ಳುವೆ.
-ಹಂಸಾನಂದಿ
ಉ: ಚೆಂಗನ್ನಡ ಛಂದಸ್ - ೨
http://www.rasikas.org/viewtopic.php?id=4964
-ಹಂಸಾನಂದಿ
ಉ: ಚೆಂಗನ್ನಡ ಛಂದಸ್ - ೨
೧.ಯತಿಗೆ ಉದಾಹರಣೆ ನೀಡುವಲ್ಲಿ ಒಂದು ತಪ್ಪು ನುಸುಳಿದೆ; ಮಾರ್ಪಾಟು ಇಲ್ಲಿದೆ:
ಜೃಂಭಾವಿದಾರಿತಮುಖಸ್ಯಮುಖಾತ್‍ಸ್ಫುರಂತೀಂ, ಕೋ ಹರ್ತುಮಿಚ್ಛತಿ ಹರೇಃ ಪರಿಭೂಯ ದಂಷ್ಟ್ರಾಂ|| (ಮುದ್ರಾರಾಕ್ಷಸಂ)
("," ಇರುವೆಡೆಯಲ್ಲಿ ಉಸಿರ್ದಾಣ - ಯತಿ ೧೪ನೇ ಅಕ್ಕರದ ನಂತರ)
ಇದು ವಸಂತತಿಲಕಾ ವೃತ್ತದಲ್ಲಿದ್ದು, ಪ್ರತಿಪಾದದಲ್ಲಿ ಹದಿನಾಲ್ಕು ಅಕ್ಕರಗಳಿರುತ್ತವೆ. ಯತಿ ಪ್ರತಿಪಾದದ ಕೊನೆಯಲ್ಲಿರುತ್ತದೆ.
ಉಕ್ತಾ ವಸಂತತಿಲಕಾ ತಭಜಾಜಗೌಗಃ -> ತ ಭ ಜ ಜ ಗಣಗಳು (೪ ಗಣಗಳು = ೧೨ ಅಕ್ಕರ) + ಎರಡು ಗುರು.
೨.ಪಾದಮಧ್ಯದಲ್ಲಿರುವ ಯತಿಗೆ ಉದಾಹರಣೆ ಇಲ್ಲಿದೆ:
ಸ್ವಲ್ಪೀಭೂತೇ, ಸುಚರಿತಫಲೇ, ಸ್ವರ್ಗಿಣಾಂ ಗಾಂ ಗತಾನಾಂ
ಶೇಷೈಃಪುಣ್ಯೈ, ರ್ಹೃತಮಿವ ದಿವಃ, ಕಾಂತಿಮತ್ಖಂಡಮೇಕಂ||(ಮೇಘದೂತಂ)
("," ಇರುವೆಡೆಯಲ್ಲಿ ಉಸಿರ್ದಾಣ - ಯತಿ ೪, ೧೦, ೧೭ನೇ ಅಕ್ಕರದ ನಂತರ)
ಇದು ಮಂದಾಕ್ರಾಂತಾ ವೃತ್ತಕ್ಕೆ ಉದಾಹರಣೆ. ಪ್ರತಿಪಾದದಲ್ಲಿ ೧೭ ಅಕ್ಕರಗಳಿದ್ದು, ೪ ಅನಂತರ ೬ ಅನಂತರ ೭ ಅಕ್ಕರಗಳ ಅಂತರದಲ್ಲಿ ಯತಿಯಿರುತ್ತದೆ.
ಮಂದಾಕ್ರಾಂತಾ ಜಲಧಿಷಡಗೈರ್ಮ್ಭೋನತೌ ತಾದ್ಗುರೂ ಚೇತ್ -> ಜಲಧಿ=೪, ಷಟ್ = ೬, ಅಗ = ೭ ; ಮ,ಭ,ನ,ತ,ತ + ಎರಡು ಗುರು
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೨
ಬೆನಕರೆ,
ಹಾಗಾದರೆ, ವಸಂತತಿಲಕಾ, ಮಂದಾಕ್ರಾಂತಾ, ಶಾಲಿನೀ ಮುಂತಾದ ಛಂದಸ್ಸುಗಳ ಸೂತ್ರಗಳು ಲಘುಗುರುಗಳಷ್ಟೇ ಅಲ್ಲದೆ "ಯತಿ"ಗಳ ಬಗ್ಗೆಯೂ ಹೇಳುತ್ತವೆಯೇ. ನಾವುಗಳು ಶಾಲಾಕಾಲೇಜಿನಲ್ಲಿ ಬರೀ ಗುರುಲಘುಗಳ ಸೂತ್ರಗಳನ್ನಷ್ಟೇ ಕಲಿತದ್ದು.
ಈ "ಛಂದಸ್ಸು ಮತ್ತು ಯತಿಗಳ" ನಡುವಿನ ನಂಟನ್ನು ವಿವರಿಸುವ ಮಾಹಿತಿ/ಗ್ರಂಥ ಇದೆಯೇ ?
ಉ: ಚೆಂಗನ್ನಡ ಛಂದಸ್ - ೨
ಸುನಿಲರೇ,
ಬೃಹದ್ದೇಶಿಯ ಪ್ರತಿಗಾಗಿ ಧನ್ಯವಾದಗಳು! ನನ್ನ ಆಕರದ ಶ್ಲೋಕ ಸಂಖ್ಯೆಗಳಿಗೆ ಇಲ್ಲಿನವು ಸ್ವಲ್ಪ ವ್ಯತ್ಯಸ್ತವಾಗಿದ್ದರೂ, ಹುರುಳಲ್ಲಿ ಭೇದವಿಲ್ಲ.
ಛಂದಸ್ಸು ವೇದಗಳಷ್ಟೇ ಅಪಾರವಾದ್ದರಿಂದ, ಅಡಕವಾಗಿರುವ ವಿಷಯಗಳನ್ನು ಹೊರತೆಗೆದಂತೆಲ್ಲ ಇನ್ನೂ ಆಸಕ್ತಿ ಕೆರಳುತ್ತದೆ ಅಲ್ಲವೇ! ಛಂದೋವೃತ್ತಗಳಲ್ಲಿ ಎರಡು ಬಗೆಗಳಿವೆ - ವೈದಿಕವೃತ್ತ ಮತ್ತು ಲೌಕಿಕವೃತ್ತ ಎಂದು. ಸಾಮಾನ್ಯವಾಗಿ ಲೌಕಿಕವೃತ್ತಸೂತ್ರಗಳು ಯತಿಯ ಮಾಹಿತಿಯನ್ನು ಅಡಗಿಸಿಕೊಂಡೇ ಇರುತ್ತವೆ. ವೈದಿಕವೃತ್ತದಲ್ಲಿ ಅಷ್ಟಾಗಿ ಯತಿ ಕಾಣಸಿಗದು. ಛಂದಸ್ಸಿನ ಬಗೆಗಿನ ಎಲ್ಲ ಗ್ರಂಥಗಳೂ ಯತಿಯನ್ನು ತೋರುತ್ತವೆ. ಉದಾ: ಪಿಂಗಳನ ಛಂದಶ್ಶಾಸ್ತ್ರ, ಕೇದಾರಭಟ್ಟನ ವೃತ್ತರತ್ನಾಕರ, ಕಾಳಿದಾಸನ ಶ್ರುತಬೋಧ ಇತ್ಯಾದಿ ಸಕ್ಕದ ಸೂತ್ರಗ್ರಂಥಗಳು.
ಬಹುಶಃ ನೀವು ಓದಿರುವ ಬಹುತೇಕ ಛಂದೋವೃತ್ತಗಳ ಸೂತ್ರಗಳಲ್ಲಿ ಯತಿಯ ವಿಚಾರ ಇದ್ದೇ ಇತ್ತೆನಿಸುತ್ತದೆ.ಉದಾ:
೧. ನನಮಯಯಯುತೇಯಂ ಮಾಲಿನೀ ಭೋಗಿಲೋಕೈಃ -> ೧೫ ಅಕ್ಕರದ ಮಾಲಿನೀ ವೃತ್ತ ಭೋಗಿ(೮) ಹಾಗೂ ಲೋಕ(೭) ಸ್ಥಾನಗಳಲ್ಲಿ ಯತಿಯನ್ನು ಹೊಂದಿದೆ.
೨.ರಸೈರ್‍ರುದ್ರೈಶ್ಛಿನ್ನಾ ಯಮನಸಭಲಾಗಃ ಶಿಖರಿಣೀ -> ರಸ(೬) ಹಾಗೂ ರುದ್ರ(೧೧)ದಲ್ಲಿ ಯತಿಯಿಂದ ಕತ್ತರಿಸಲ್ಪಟ್ಟವಳು ಶಿಖರಿಣೀ ! (೧೭ ಅಕ್ಕರ)
ಆದರೆ, ವೃತ್ತ/ಯತಿಯ ವಿಚಾರದಲ್ಲಿ ಬಹಳ ಭಿನ್ನಾಭಿಪ್ರಾಯಗಳಿವೆ; ಮೇಲಿನ ಗ್ರಂಥಗಳಲ್ಲೇ ಬೇರೆ ಬೇರೆ ಅಭಿಪ್ರಾಯ ಸಿಗುವ ಸಾಧ್ಯತೆಯೂ ಇದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ನಾಗವರ್ಮನ ಕನ್ನಡ ಛಂದಸ್ಸು ಪಿಂಗಳನನ್ನು ಆಧರಿಸಿದ್ದು; ಆದರೆ ತದನಂತರದ ನಂದಿಛಂದಸ್ ನಾಗವರ್ಮನಂತೆ ಸಾಗಿದರೂ, ಭಿನ್ನವಾದ ಯತಿಸೂಚನೆಗಳನ್ನು ನೀಡುತ್ತದೆ.
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ಉ: ಚೆಂಗನ್ನಡ ಛಂದಸ್ - ೨
ಹೀಗೂಊಊಊ ಉಂಟೇ