ಮುಂಗಾರು ಮಳೆ ನೋಡಿದ ಮೇಲೆ
-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್ ಎನಿಸುತ್ತದೆ.
ಸುಂದರ ಸ್ಥಳಗಳು, ಧಾರ್ಮಿಕ ಕೋನದ ಸೀನು, ಸರ್ಕಾರಿ ನೌಕರರನ್ನು ತಮಾಷೆ ಮಾಡುವ ಸೀನು ಇವೆಲ್ಲಾ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಅಂಶಗಳು. ಅವುಗಳನ್ನು ತಪ್ಪದೆ ಎಚ್ಚರಿಕೆಯಿಂದ ಸೇರಿಸಿಕೊಂಡಿದ್ದಾರೆ. ಎಲ್ಲ ರೀತಿಯ ನೋಟಗರನ್ನು ತೆಕ್ಕೆಗೆ ತೆಗೆದುಕೊಳ್ಳುವ ಜರೂರು ಇಂಥ ಚಿತ್ರಗಳಿಗೆ ಇರುತ್ತವೆ.
ಸುಂದರ ಛಾಯಾಗ್ರಹಣ ಅನ್ನುವುದೇನೋ ನಿಜ. ಆದರೆ ಅದು ಕ್ಯಾಲೆಂಡರ್ ಚಿತ್ರಗಳ ಹಾಗೆ ಸುಂದರವಷ್ಟೆ. ಚಿತ್ರದಲ್ಲಿನ ಸಂದರ್ಭಗಳ ಮೂಡನ್ನು ಸ್ಥಾಪಿಸುತ್ತದೆ ಅನ್ನುವುದು ನಿಜ. ಆದರೆ ಅದನ್ನು ಏರಿಸುವ, ತೀವ್ರಗೊಳಿಸುವ ಕೆಲಸ ನನಗೆ ಕಾಣಲಿಲ್ಲ. ಎಲ್ಲರೂ ಮೆಚ್ಚುವ ಜೋಗದ ಶಾಟ್‌ಗಳನ್ನೇ ತೆಗೆದುಕೊಂಡರೂ, ಪ್ರೀತಿಸುವಾಗ ಮತ್ತು ಹಳಹಳಿಸುವ ಎರಡು ಸಂದರ್ಭದಲ್ಲೂ ಒಂದೇ ಬಗೆಯ ಕ್ಯಾಮೆರಾ ಚಲನೆಯಿದೆ. ಎರಡನೇ ಸಲ ಬಣ್ಣದ ತೀವ್ರತೆ ಸ್ವಲ್ಪ ಕಡಿಮೆ ಮಾಡಿ, ನೀಲಿಯಾಗಿಸಿದ್ದು ಮಾತ್ರ ಕಾಣುತ್ತದೆ. ಇನ್ನು ಆಗಾಗ ಕ್ಯಾಮೆರಾವನ್ನು ಸೊಟ್ಟಗಿಡುವ ಖಯಾಲಿ-ಖುಷಿ ನನಗೆ ಅರ್ಥವಾಗಲಿಲ್ಲ.
ಇನ್ನು ಸಂಗೀತ ಮತ್ತು ನೃತ್ಯ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. mtv ಮಾದರಿಯ ಹಾಡಿನ ಕಟಿಂಗಗಳು (ಮತ್ತು ಮೇಲೆ ಹೇಳಿದ ಸೊಟ್ಟ ಕ್ಯಾಮೆರಾ) ಕನ್ನಡದ ಕಮರ್ಷಿಯಲ್ ಜಗತ್ತಿಗೆ ಹೊಸದೇನೋ ನನಗೆ ಗೊತ್ತಿಲ್ಲ. ಆದರೆ ನನ್ನ ಮನೋಭಾವಕ್ಕೆ ಅದು ಸ್ವಲ್ಪ ಕಿರಿಕಿರಿಯೇ ಅನ್ನಬಹುದು. ಆದರೆ ಎಲ್ಲರೂ ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ ಅನಿಸುತ್ತದೆ. ನನಗೇನಾಗಿದೆ ಅಂದುಕೊಳ್ಳುತ್ತೇನೆ!
ಕತೆಯನ್ನು ಗಂಭೀರವಾಗಗೊಡದೆ, ಒಂದೇ ಸ್ತರದಲ್ಲಿ ನಡೆಯುವುದು ಕೂಡ ಸ್ವಲ್ಪ ಪಿಚ್ ಎನಿಸಿತು. ಯಾಕೆಂದರೆ ಕತೆಯನ್ನು ಹಲವು ಸ್ತರಗಳಲ್ಲಿ ಹೇಳುವ ಉದಾಹರಣೆಗಳನ್ನು ಕನ್ನಡದ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಈ ಹಿಂದೆ ನೋಡಿದ್ದೇವೆ. ಇಲ್ಲಿ ಮಾತ್ರ, ಪ್ರೀತಿಸುವುದು, ಪ್ರೀತಿಸುವ ಹುಡುಗಿ ತನಗೆ ಬೇಕೆನಿಸುವುದು, ಅದಕ್ಕಾಗಿ ಹಾತೊರೆಯುತ್ತಾ ಅವಳ ಹಿಂದೆ ಓಡುವುದು ಅದೇ ಕತೆ, ಕತೆಯೆಲ್ಲಾ ಅದೆ! ಮೊದಲೆರಡು ಭಾಗ ಚುರುಕಾಗಿರುವ ನಿರೂಪಣೆ ಮೂರನೇ ಭಾಗದಲ್ಲಿ ಕಾಲು ಮುರಿದು ಬಿದ್ದಂತೆ ಅನಿಸುತ್ತದೆ. ಯಾವ ದಿಕ್ಕಲ್ಲಿ ಚಿತ್ರಕ್ಕೆ ಮೋಕ್ಷವಿದೆ ಎಂದು ತಡಕಾಡುತ್ತಿರುವಂತೆ ಕಾಣುತ್ತದೆ.
-೨-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಇಷ್ಟೆಲ್ಲಾ ಕಮರ್ಷಿಯಲ್ ಚಿತ್ರಗಳ ಗುಣಗಳಿರುವುದು ಕಂಡೂ ಕೂಡ ನಾನು ಮೊದಲು ಎತ್ತಿದ ಪ್ರಶ್ನೆ ಇನ್ನೂ ಕಾಡುತ್ತದೆ.
ಅದಕ್ಕೆ ಸ್ವಲ್ಪ ಕೆದಕಿ ನೋಡಿದಾಗ ಒಂದೆರಡು ಗಂಭೀರವಾದ ಪ್ರಶ್ನೆಗಳು ಎದ್ದವು. ಬರೇ ಶ್ರೀಮಂತರ ಮನೆಯ ಕತೆ ಹೇಳುವ ಚಾಳಿ ಇತ್ತೀಚೆಗೆ ನಮ್ಮ ಚಿತ್ರಗಳಲ್ಲಿ ಇರುವುದು ಹೆಚ್ಚೇನೋ. ಇದು ತನ್ನಷ್ಟಕ್ಕೆ ಏನೂ ತೊಂದರೆಯಿಲ್ಲದ ವಿಷಯ. ಆದರೆ ಅದಕ್ಕೊಂದು ಕೌಂಟರ್ ಪಾಯಿಂಟಿಲ್ಲದೆ ಇರುವುದು ಸ್ವಲ್ಪ ಅಪಾಯ. ಕೌಂಟರ್‍ಪಾಯಿಂಟ್ ಬಡತನವೇ ಆಗಬೇಕಾಗಿಲ್ಲ ಮತ್ತು ಕತೆಯ ಹೊರಗಿನಿಂದ ಬರಬೇಕಾಗಿಲ್ಲ. ಅದು ಕತೆಯ ಒಳಗೇ ಇರಬಹುದು, ಈಗಿರುವ ಪಾತ್ರಗಳೇ ಆಗಿರಬಹುದು. ಅದು ವಿವೇಚನೆ, ವಿವೇಕವನ್ನು ಮೆರೆಯುವ ಪಾತ್ರವಾಗಬಹುದು. ಇದೂ ಕೂಡ ಕಮರ್ಷಿಯಲ್ ಚಿತ್ರಗಳಿಗೆ ಹೊಸದೇನೂ ಅಲ್ಲ. ಮತ್ತು ಈ ಹಿಂದೆ ಕಮರ್ಷಿಯಲ್ ಚಿತ್ರಗಳಲ್ಲೇ ಇವನ್ನು ಚೆನ್ನಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾವಾಬ್ದಾರಿಯನ್ನು ಕಮರ್ಷಿಯಲ್ ಚಿತ್ರಕಾರರಲ್ಲಿ ಅಪೇಕ್ಷಿಸಕೂಡದು ಎಂಬ ಮಾತು ಯಾಕೋ ಸ್ವಲ್ಪ ಹಳಸಲು ಎನಿಸುತ್ತದೆ.
ಮತ್ತೊಂದು ಗಂಭೀರವಾದ ಪ್ರಶ್ನೆ ಮತ್ತು ನನ್ನನ್ನು ತುಂಬಾ ಚಿಂತೆಗೀಡು ಮಾಡಿದ್ದು ನಂದಿನಿಯ ಪಾತ್ರ ಚಿತ್ರಣದ ಕುರಿತು. ಒಂದು ಆಟದ ಗೊಂಬೆಯಾಗಿ (ಐಟಂ ಸಾಂಗಿಂನಿಂದ ಹಿಡಿದು) ಕಡೆಯವರೆಗೂ ತನ್ನ ಒಂದೇ ಒಂದು ಇಚ್ಛೆಯನ್ನು ಪೂರೈಸಲು ಕಿರು ಬೆರಳೂ ಎತ್ತದ ಹುಡುಗಿಯಾಗಿ ಚಿತ್ರಿತವಾಗಿರುವುದು. ಪ್ರೀತಂನನ್ನು ಒಂದು ಸಾರೆ ಕಪಾಳಕ್ಕೆ ಬಿಗಿಯುತ್ತಾಳೆ ಅಷ್ಟೆ. ಅದೂ ತನಗೋಸ್ಕರವಾಗಿಯೇ! ಪ್ರೀತಂ ಅಷ್ಟೆಲ್ಲಾ ತಿಣಕಲಾಡುತ್ತಿರುವಾಗ ಕೂಡ ಅವನ ಪ್ಲಾನಿನ ಕೈಗೊಂಬೆಯಾಗಿ ಮಾತ್ರ ನಂದಿನಿ ಚಿತ್ರಿತವಾಗಿದ್ದಾಳೆ. ಅವಳ ಸ್ವಭಾವದ ಬಗ್ಗೆ ಯಾವುದೇ ಇಣುಕು ನೋಟವೂ ಚಿತ್ರದಲ್ಲಿ ಇಲ್ಲ. ಪ್ರೀತಂನನ್ನು ಅಷ್ಟೊಂದು ರಂಗಾಗಿ ಚಿತ್ರಿಸಿ ನಂದಿನಿಯನ್ನು ಒಂದು ಬೋರಿಂಗ್ ಪಾತ್ರವಾಗಿ ಮಾಡುವುದರ ಹಿಂದಿನ ಉದ್ದೇಶವೇನಿರಬಹುದು ಎಂದು ಯೋಚಿಸುತ್ತೇನೆ. ಇನ್ನೂ ಕೂಡ ನಮ್ಮ ಹೆಣ್ಣುಮಕ್ಕಳನ್ನು ಗೊಂಬೆಗಳ ಹಾಗೆ ಮಾತ್ರ ಚಿತ್ರಿಸಿ ನಮ್ಮ ಚಿತ್ರಗಳು ಜಯಭೇರಿ ಹೊಡೆಯಬಲ್ಲವಲ್ಲ ಎಂದು ಅಚ್ಚರಿಪಡುತ್ತೇನೆ. ಈ ಹಿಂದಿನ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಕೂಡ ನಂದಿನಿಗಿಂತ ಗಟ್ಟಿಯಾದ, ರಂಗುರಂಗು ಸ್ವಭಾವದ ಹೆಣ್ಣು ಪಾತ್ರಗಳು ನಮಗೆ ಸಿಗುತ್ತವೆ! ಇಲ್ಲಿ ಏಕೆ ಹೀಗಾಗಿದೆ? ಗಂಡು ಕೇಂದ್ರಿತ ಕತೆಯಾದ್ದರಿಂದ ಏನಾದರೂ ಲಾಭವಿದೆಯೆ? ಲಾಭವಿಲ್ಲದ ಹಾಗೆ ಕಮರ್ಷಿಯಲ್ ಚಿತ್ರಗಳು ಮಾಡಲ್ಪಡುತ್ತವೆಯೆ? ಹೆಣ್ಣು ಕೇಂದ್ರಿತ ಆಗಬೇಕೆಂದೇನೂ ಇಲ್ಲ, ಆದರೆ ಸಹಜವಾಗಿ ಇರಬೇಕಾದ ಒತ್ತು ಕೂಡ ಈ ಚಿತ್ರದ ಹೆಣ್ಣು ಪಾತ್ರಕ್ಕೆ ಇಲ್ಲವಲ್ಲ! ನಮ್ಮ ನೋಟಗರು ಹೀಗೇ ಇಷ್ಟಪಡುತ್ತಾರೆಯೆ?
-೩-
ಈ ಎಲ್ಲಾ ಯೋಚನೆಗಳೂ ನಾನು ಮೊದಲು ಎತ್ತಿದ ಪ್ರಶ್ನೆಗೆ ಪರಿಪೂರ್ಣ ಉತ್ತರ ಕೊಡುವುದಿಲ್ಲ. ಹಾಗೊಂದು ನಿಚ್ಚಳವಾದ ಉತ್ತರವೇ ಇಲ್ಲದಿರಬಹುದು! ಆದರೂ ಅದೊಂದು ಮುಖ್ಯವಾದ ಪ್ರಶ್ನೆ ಎಂದು ಎಣಿಸುತ್ತೇನೆ. ಯಾಕೆಂದರೆ, ಮುಂದೆ ಬರುವ ಚಿತ್ರಗಳಿಗೆ ಜಯಭೇರಿ ಹೊಡೆದ ಮುಂಗಾರು ಮಳೆಯಂಥ ಚಿತ್ರಗಳು ಮಾದರಿಯಾಗುವ ಸಾಧ್ಯತೆಗಳಿದೆ. ಎರಡನೇ ಭಾಗದಲ್ಲಿ ಎತ್ತಿದ ಪ್ರಶ್ನೆಗಳು ಚಿತ್ರದಲ್ಲಿ ಪಡೆದ ಒತ್ತಿನಿಂದಾಗಿ ಈ ಚಿತ್ರ ಜಯಭೇರಿ ಹೊಡೆಯಿತೇ? ಅಥವಾ ಮೊದಲನೇ ಭಾಗದಲ್ಲಿ ಹೇಳಿದ ಗುಣಗಳಿಂದಾಗಿ ಚಿತ್ರ ಜಯಭೇರಿ ಹೊಡೆಯಿತೇ?
ಯೋಚಿಸಬೇಕಾದ ಸಂಗತಿಗಳು.

- Login or register to post comments
- 2400 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




ಪ್ರತಿಕ್ರಿಯೆಗಳು
ಉ: ಮುಂಗಾರು ಮಳೆ ನೋಡಿದ ಮೇಲೆ
ಅನಿವಾಸಿಗಳು ಸಿನಿಮವನ್ನ ಬಹಳ ಸೀರಿಯಸ್ಸಾಗಿ ನೋಡುವವರು ಅಂತ ತಿಳಿಯಿತು.
'ಮುಂಗಾರು ಮಳೆ'ಯನ್ನು ಮೆಚ್ಚದ ಮಂದಿ ಬೆಂಗಳೂರಲ್ಲಂತೂ ಬಲು ಕಡಮೆ. ನಮ್ಮ ಕಂಪೆನಿಯ ಕನ್ನಡದವರಲ್ಲದ ಮಂದಿಯೂ ನೋಡಿ ಬಂದು 'ಸೂಪರ್' ಅಂದ್ರು. ಟ್ರಾಪಿಕ್ ಸಿಗ್ನಲ್ಲಲ್ಲಿ ನಿಂತಿದ್ರೆ, ಈ BPO cabಗಳಿಂದ ಮುಂಗಾರು ಮಳೆಯ ಹಾಡು ಕೇಳಿಸುತ್ತೆ.
ಅದೇಕೆ ಅಂತ ನನ್ನನ್ನು ಕೇಳಬೇಡಿ. ಬೆಂಗಳೂರು PVRಅಲ್ಲಿ ದಿನಕ್ಕೆ ಐದಾಟದ ತುಂಬುಮನೆ ನಡೇತಾ ಇದೆ.
ಉ: ಮುಂಗಾರು ಮಳೆ ನೋಡಿದ ಮೇಲೆ
ಬೆಂಗಳೂರಿನಲ್ಲಿರುವ ನಿಮಗೆ ಇದರ ಬಗ್ಗೆ ನಿಮ್ಮದೇ ಒಂದು ಸರ್ವೇ ಮಾಡುವುದು ಸುಲಭ ಅಲ್ಲವೆ?
ಸಿಡ್ನಿಯಲ್ಲೂ ಬರುವ ವಾರದ ಕೊನೆಗೆ ಒಂದಷ್ಟು ಜನರನ್ನು ನಮ್ಮ ನಾಟಕ ತಾಲೀಮಿನ ಸಮಯದಲ್ಲಿ ಕೇಳಬೇಕು ಅಂತಿದೀನಿ. ನೋಡೋಣ.
ಉ: ಮುಂಗಾರು ಮಳೆ ನೋಡಿದ ಮೇಲೆ
ಧನ್ಯವಾದ ಈ ವಿಮರ್ಶೆಗೆ .. ಕಾರಣ ನನಗೆ ಆತನ ತ್ಯಾಗ .. ತ್ಯಾಗವೇ ಅನ್ನಿಸಿಲ್ಲ.
ಅವರ ಅಮ್ಮ ಕೂಡ ಅವನಿಗೆ ಕಪಾಳಕ್ಕೆ ಹೊಡೆದು "ಎಲ್ಲದಿಕ್ಕಿ೦ತಲೂ ಮನೆ , ಮನೆತನದ ಗೌರವ ಮುಖ್ಯ" ಅ೦ತಾ Dialogue ಹೇಳಿದಾಗ ಅವನು ಪಾಪ ತನ್ನ ಪ್ರೇಮದ ಮೇಲೆ ವಿಶ್ವಾಸ ಕಳೆದುಕೊ೦ಡು ಬಿಡುತ್ತಾನೆ.
ಲೋಕ ಈ ಪ್ರೇಮಕ್ಕೆ ಒ೦ದಲ್ಲಾ ಒ೦ದು ರೀತಿಯಿ೦ದ ವಿರೋಧವಾಗಿರುತ್ತೆ.
ಆ ವಿರೋಧವನ್ನು ಒಪ್ಪಿ ಕೊನೆಗೆ ಹೆ೦ಡ ಕುಡಿಯುವ Scene , ಹೀರೋ ಹೀರೋ ನೇ ಅಲ್ಲಾ ಅನ್ನು ವ ಹಾಗೆ ಮಾಡುತ್ತೆ.
ಒಬ್ಬ Weak ಮನುಷ್ಯ ಅನ್ನುವ ಚಿತ್ರವಿದೆ. ಆದರೆ ತಕ್ಷಣ ಮತ್ತೆ Fightu ...ಇಲ್ಲಿ ಆತ ತಾನು ಹೀರೋ ಅ೦ತ "Prove" ಮಾಡ್ತಾನೆ.
Villain ಮತ್ತು Fight ಇಲ್ಲ ಅ೦ದರೆ .. "Prove" ಮಾಡೊದು ಕಷ್ಟ.
ಆಮೇಲೆ ಕೊನೆಗೆ ಆ Military ಮನುಷ್ಯ.. ಕಾರ್ ನಲ್ಲಿ "Watch ಇಟ್ಕೋ ಬಹುದ ಅ೦ತ ಕೇಳುತಾನೆ "
ಯಾರಾದರೂ Drop ಕೊಡ ಬೇಕಾದರೆ ಈ ರೀತಿ ಕೇಳ್ತಾರೇನು ??
ಅದು Military ಯವರು ??
ಹೀಗೆ ಕೊನೆಯಲ್ಲಿ ಎಲ್ಲಾ ಕೆಡಿಸಿ ಬೋರ್ ಮಾಡಿದ್ದಾರೆ.
ಮತ್ತೊ೦ದು ಆ ಮೊಲದ "ಆನೆ rape " Joke .. ತೀರಾ ಕೆಟ್ಟದಗಿದೆ.
ಅದಕ್ಕೆ ಅವಳು ನಗುವುದೆ೦ದರೆ ಹೆಣ್ಣು ಮಕ್ಕಳನ್ನು ಒಲಿಸಿಕೊಳ್ಳುವುದಕ್ಕೆ "rape " Joke
ಹೇಳ ಬೇಕಾ ??
ಮುರಳಿ.
ಉ: ಮುಂಗಾರು ಮಳೆ ನೋಡಿದ ಮೇಲೆ
ನಿಮ್ಮ ಅಭಿಪ್ರಾಯದಂತೆ, ಸಿನಿಮಾ ಒಂದು ಮನರಂಜನೆಯೇ ಅಲ್ಲ, ಅದು ಒಂದು ಸೀರಿಯಸ್ ಸತ್ಯ ಕಥೆ!
ಜನರು ಸಿನಿಮಾ ನೋಡುವುದು ತಮ್ಮ ಬೇಸರ ಮರೆಯಲು..ಸತ್ಯವನ್ನು ಹುಡುಕಲೆಂದು ಅಲ್ಲ!!!
ಜನರು ಸಿನಿಮಾ ನೋಡುವುದು ಮನರಂಜನೆಗಾಗಿ ಮಾತ್ರ!
ಉ: ಮುಂಗಾರು ಮಳೆ ನೋಡಿದ ಮೇಲೆ
ಪ್ರಸಾದ...
ಮುರುಳಿಯವರು ಬಲು ಆದ್ಯಾತ್ಮದ ಮಾನಿಸರು.!!
ಅವರಿಗೆ ಎಲ್ಲದರಲ್ಲೂ 'ಆತ್ಮ' ಬಗ್ಗೆ ಉಂಕಿರಬೇಕು 
ಸುಮ್ನೆ ಮೋಜಿಗೆ ಹಂಗಂದೆ.! ಮುರುಳಿಯವರು ಮನ್ನಿಸಬೇಕು.
ನಂಗಂತೂ ಆ ಸಿನಿಮಾ ಸಕ್ಕತ್ ಹಿಡಿಸತು. ನಮ್ಮ ಆ ಗೆಳೆಯ ಈ ಗೆಳೆಯ ಅಂತ ನಾಲ್ಕು ಸರತಿ ನೋಡಾಯ್ತು. ಇನ್ನು ಕೆಲವರು, ಬಾ ಬಾ ಅಂತ, ಕರೇತಾವ್ರೆ.
ನಾನು/ನಾವು ಸಿನಿಮ ನೋಡೋದು ಇವಕ್ಕೆ.
. ಹೀರೋ ಸಕ್ಕತ್ ತರಲೆ ಮಾಡಿಕೊಂಡು ಇರಬೇಕು. ವಿಲನ್ ಸಕ್ಕತಾಗಿ ಒದೆ ತಿನ್ದು ಸಾಯಬೇಕು.
೧) ಮಸ್ತ್ ಹಿರೋಯಿನ್, ಹೀರೋ ಚನ್ನಾಗಿ ಕುಣಿಬೇಕು. ಹಿರೋಯಿನ್ನು ಹೆಚ್ಚು ಮಾತಾಡೋದು, ಅಳೋದು ಮಾಡಬಾರದು
೨) ಮಸ್ತ್ ಹಾಡುಗಳು
೩) ಮಸ್ತ್ ಜೋಕುಗಳು
೪) ಮಸ್ತ್ ಜಾಗಗಳು
೫) ಮಸ್ತ್ ಹೊಡೆದಾಟ
ಇವನ್ನೆಲ್ಲ ಒಂದು ಹೆಣಿಗೆಯಲ್ಲಿ ಇರಲೊಂದು ಹೆಸರಿಗೆ ಕತೆ ಸಾಕು!!
ಒಟ್ಟಿನಲ್ಲಿ ಎಲ್ಲ ಮಸ್ತ್ ಮಸ್ತ್ ಆಗಿ ಮಸ್ತಿ ಇಂದು ತುಂಬಿ ತುಳುಕಿರಬೇಕು
!! ಕತೆ ಮನೆ ಹಾಳಾಗ, ಯಾರಿಗೆ ಬೇಕು ಅವರ moral lessonಗಳು! 
ಸಿನಿಮ ನೋಡಿ ಮನಗೆ ಬಂದು, ಆ ಹಾಡುಗಳನ್ನು, sceneಗಳನ್ನು ನೆನೆಸಿಕೊಂಡು ನಾವು ಹಿಗ್ಗಿ ಕುಣಿಬೇಕು!!
ಇವೆಲ್ಲ ನಮಗೆ "ಮುಂಗಾರು ಮಳೆ"ಯಿಂದ ಆಯ್ತು!
ಇದೇ ತರ ಹಿಂದೆ 'ಮಲ್ಲ' ಸಿನಿಮ ಕೂಡ ಸಕ್ಕತ್ .. "ನಾದಿನ್ ದಿನ್ನಾ ನಾದಿನ್ ದಿನ್ನಾ"
-ಮಾಯ್ಸ
"ಸಿನಿಮಾ ನೋಡಲು ಕಲಿಯಿರಿ" ಅಂತ ಬುಕ್ಕು ಬರೆಯಬೇಕು ಅಂತ ಅನ್ನಿಸಕ್ಕೆ ಹತ್ತಿದೆ
( ತಮಾಸೆ )
ಉ: ಮುಂಗಾರು ಮಳೆ ನೋಡಿದ ಮೇಲೆ
1. ಮಸ್ತು (<ಪಾರ. ಮರಾ. ಮಸ್ತ್) (ನಾ) ಅಧಿಕ, ಹೇರಳ
2. ಮಸ್ತು (<ಪಾರ. ಮರಾ. ಮಸ್ತ್) (ಅ) ಹೆಚ್ಚಾಗಿ, ಅಧಿಕವಾಗಿ
1. ಮಸ್ತಿ (<ಪಾರ. ಹಿಂ. ಮರಾ. ಮಸ್ತೀ) (ನಾ) ೧ ಸೊಕ್ಕು, ಗರ್ವ ೨ ಆನೆ, ಒಂಟೆ ಮೊ. ಪ್ರಾಣಿಗಳ ಮದಾವಸ್ಥೆ
ಮಹೇಶರೆ ನಿಮಗೆ ಒಳ್ಳೆಯದಾಗಲಿ.
ಉ: ಮುಂಗಾರು ಮಳೆ ನೋಡಿದ ಮೇಲೆ
ಅನಿವಾಸಿಗಳೇ..
ಅದು ಆದು ಯಾವ ಮಸ್ತಿಯೂ ಅಲ್ಲ!!
ಬೇಸರ ಮಾಡಿಕೊಬೇಡಿ...
ಅಲ್ಲಿ ಮಸ್ತು ಅಂದ್ರೆ ಸಕ್ಕತ್ ಅಂತ ಅರ್ತ ಮಾಡಿಕೊಳ್ಳಿ. ಮಸ್ತಿ ಅಂದ್ರೆ pleasure, trill, enjoyment ಅಂತ ತಗೊಳ್ಳಿ!
ಉ: ಮುಂಗಾರು ಮಳೆ ನೋಡಿದ ಮೇಲೆ
ಮಸ್ತು ಮಸ್ತು ಹುಡುಗಿ ಬಂದ್ರು(ಬಂದ್ಲು), ಯಾರಿಯಾರಿಯೋ...ನಾನು ನಿನ್ನ ದೋಸ್ತು ಅಂದ್ರು(ಅಂದ್ಲು), ಯಾರಿಯಾರಿಯೋ...
ಹಾಡಿನ ಅರ್ಥ ಈಗ ಆಯಿತು
ಥಾಂಕ್ಸ್ ಕಣ್ರೀ ಅನಿವಾಸಿ, ಮಸ್ತ್ ವಿಷಯದಲ್ಲಿ ಕಣ್ಣು ತೆರೆಸಿದ ದೇವರು ಕಣ್ರೀ ನೀವು 
ಉ: ಮುಂಗಾರು ಮಳೆ ನೋಡಿದ ಮೇಲೆ
ಅನಿವಾಸಿಗಳೆ..
ಇರಲಿ ಬಿಡಿ... ಇನ್ ಮುಂದೆ 'ಮಸ್ತಿ'ಯನ್ನ ಹುಶಾರಾಗಿ ಬಳಸ್ತೀನಿ... !
ಅಂದಹಾಗೆ....
ಅಲ್ಲಿಗೆ ದುನಿಯಾ ಬಂತಾ? 'ದುನಿಯಾ' ನೋಡಿದ್ರಾ?
ಇದೂ ೧೦೦ ದಿನ ಓಡಿ ಓಡಯ್ತೆ!
"ಕರಿಯ I love you, ಕರುನಾಡ ಮೇಲಾಣೆ" ಬೊಂಬಾಟ್!!
ಉ: ಮುಂಗಾರು ಮಳೆ ನೋಡಿದ ಮೇಲೆ
ಇಲ್ಲಿ ಎರಡು ಭಾಗಗಳಿವೆ "ಕತೆ ಮನೆ ಹಾಳಾಗ' ಎಂದರೆ ಕತೆ ಬೇಡ ಎಂದು; ಒಂದು ಪಾತ್ರ ಇದ್ದ ತಕ್ಷಣ ಕತೆ ಇರಲೇಬೇಕಾಗುತ್ತದೆ! ಎಷ್ಟೇ ಸಡಿಲವಾಗಿದ್ದರೂ ಕತೆ ಇಲ್ಲದಿರುವ ಚಿತ್ರ ಇದ್ದರೆ ದಯವಿಟ್ಟು ತಿಳಿಸಿ!
ಎರಡನೇ ಭಾಗ moral lessons: ಯಾರು ಯಾರಿಗೂ ನೀತಿಪಾಠ ಹೇಳಿ ಪ್ರಯೋಜನವಿಲ್ಲ. ಅದೂ ವಯಸ್ಕರ ಸಮಾಜದಲ್ಲಿ. ಆದರೆ, ನೀವು ಕೊಂಡಾಡಿದ ಚಿತ್ರಗಳು ನೀತಿ ಹೇಳುವುದಿಲ್ಲ ಎಂದು ಮಾತ್ರ ನಾನು ನಂಬುವುದಿಲ್ಲ. ಯಾಕೆಂದರೆ, ಅವುಗಳು "ಹೊಸ" ವಿಷಯಗಳನ್ನು ಹೇಳದಿರಬಹುದು. ಆದರೆ ಹೇಳಬೇಕೆಂದಿರುವ ಕೆಲವೇ "ನೀತಿಗಳನ್ನು" ಮತ್ತೆ ಮತ್ತೆ ಹೇಳುವುದರ ಮೂಲಕ reinforce ಮಾಡುತ್ತವೆ. ಎಷ್ಟರ ಮಟ್ಟಿಗೆ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತವಂದರೆ, ಅವುಗಳು ನೀತಿಯೇ ಅಲ್ಲ ಅನ್ನಿಸುತ್ತದೆ. ಆದರೆ reinforcing ನಡೆದೇ ಇರುತ್ತದೆ. ಮೊದಲೇ ಹೇಳಿದ ಹಾಗೆ ಹೆಚ್ಚು ಜನ ನೋಡದ non-commercial ಚಿತ್ರಗಳಿಗಿಂತ, ಹೌಸ್‌ಫುಲ್ಲಾಗಿ ಓಡೋ ನೀವು ಕೊಂಡಾಡಿದ ಚಿತ್ರಗಳು ತಮ್ಮ ನೀತಿಪಾಠದ ಮೂಲಕ ಹೆಚ್ಚು ಅಪಾಯಕಾರಿಯಾಗಿ ಕಾಣುತ್ತದೆ.
ನೀತಿಪಾಠದ ಒಂದು ಉದಾಹರಣೆ: ನೀವು ಕೊಂಡಾಡುವ ಚಿತ್ರಗಳಲ್ಲಿ ಮತ್ತೆ ಮತ್ತೆ ಹೆಣ್ಣು ಮಕ್ಕಳನ್ನು "ಆಟದ ಬೊಂಬೆ"ಗಳಾಗಿ ನಿಮ್ಮ "ಮಸ್ತಿ"ಗೆ ಸರಿ ಹೋಗುವಂತೆ ತೋರಿಸುವುದು ನೀತಿಪಾಠ ಅಲ್ಲ ಎಂದು ಅಂದುಕೊಳ್ಳುತ್ತೀರ!?
"ಸಿನಿಮಾ ನೋಡಲು ಕಲಿಯುವುದು" ಹೇಗೆ?
ಉ: ಮುಂಗಾರು ಮಳೆ ನೋಡಿದ ಮೇಲೆ
ಹೋಗಲಿ ಬಿಡಿ .. ಜನ Condition ಆಗಿಬಿಟ್ಟಿದಾರೆ.
ಮನೋರ೦ಜನೆ ಅ೦ದರೆ ಕೋಟಿ ಕೋಟಿ ಕೊಟ್ಟು ಸಿನಿಮಾಗೆ..ಹೋಗೋದು
ಕಲಿಯೋದು ಅ೦ದರೆ ಲಕ್ಷ ಲಕ್ಷ ಶಾಲೆಗೆ..ಕೊಟ್ಟು ..ಹೋಗೋದು
ಪ್ರೀತಿ ಅ೦ದರೆ ಲಕ್ಷ ಲಕ್ಷ .ಕೊಟ್ಟು ದೊಡ್ಡ ಛತ್ರದಲ್ಲಿ ಮದುವೆ.
>>>ನಂಗೇನ್ ಗೊತ್ತಿತ್ತು, ಮಾರನೇ ದಿನಾನೇ
ನಿಂಗಿಂತ ಸಕ್ಕತ್ ಫಿಗರ್ ಸಿಗ್ತಾಳೆ ಅಂತ Smiling ||
ಫಿಗರ್ ---> ಹೆಣ್ಣೂ ಕೇವಲ ಮನಸ್ಸನ್ನು ಉದ್ರೇಕಿಸುವ ಫಿಗರ್ ನ೦ತೆ ಮಾತ್ರ ಕಾಣುವ ಈ ಸಿನಿಮಾಗಳಿಗೆ ಮತ್ತು ಅದನ್ನು ಕ೦ಡು ಅದನ್ನೇ ಅನುಕರಿಸುವವರಿಗೆ ಏನು ಹೇಳೋಕ್ಕಾಗುತ್ತೆ ??
ಎಲ್ಲಾ ಕಾಲ ಮಹಿಮೆ.
"ಕಾ"ಮದೇವನ ಚೇಷ್ಟೇ ಯಿ೦ದ ಲೋಕ ಉದ್ಭವ.
"ಯ"ಮದೇವವ ಅಭಿಷ್ಟೇ ಯಿ೦ದ ಲೋಕ ನಾಶ.
ಇವರಿಬ್ಬರ ಸೂತ್ರ ಗೊ೦ಬೆಗಳು ಮಾನವ "ಕಾಯ"ಕರು.
ಉ: ಮುಂಗಾರು ಮಳೆ ನೋಡಿದ ಮೇಲೆ
ನೀವು ನನ್ನ ಕವನವನ್ನು quote ಮಾಡಿದಕ್ಕೆ ಹೇಳುತ್ತಿದ್ದೇನೆ.
ಕಾಳಿದಾಸನ ಅಭಿಜ್ಞಾನ ಶಾಕುಂತಲದ ಮೊದಲ ಅಂಕದಲ್ಲೇ, ಶಕುಂತಲೆ ಮೊಲೆಯನ್ನು ವರ್ಣಿಸಿ ಎರಡು ಶ್ಲೋಕವಿದೆ.
ಇಲ್ಲಿ ನೋಡಿರಿ http://www.yorku.ca/inpar/shakuntala_ryder.pdf( ಇಂಗ್ಲೀಶಲ್ಲಿ )
"Her shoulders droop; her palms are reddened yet;
Quick breaths are struggling in her bosom fair;
The blossom o’er her ear hangs limply wet;
One hand restrains the loose, dishevelled hair."
"Beneath the barken dress
Upon the shoulder tied,
In maiden loveliness
Her young breast seems to hide,
As when a flower amid
The leaves by autumn tossed--
Pale, withered leaves--lies hid,
And half its grace is lost."
ಇಂದಲ್ಲ ಹಿಂದಿನಿಂದ ಹೆಣ್ಣು ನಮ್ಮ ಕಾವ್ಯದಲ್ಲಿ ಒಂದು ಬೊಂಬೆ. ಇಂದಿನ ಸಿನಿಮಕ್ಕೂ ಹಿಂದಿನ ಕಾವ್ಯಕ್ಕೂ ಹೆಚ್ಚಿನ ಅಂತರವಿಲ್ಲ
೧) ಮಹಾಭಾರತದಲ್ಲಿ ದ್ರೌಪದಿಯನ್ನು ದುಷ್ಯಳೆಯ ಗಂಡ(ಹೆಸರು ಗೊತ್ತಿಲ್ಲ) rape attempt ಮಾಡೋದು
೨) ರಾಮಾಯಣದಲ್ಲಿ ಸೀತಾಯನ್ನು ರಾವಣ ಆಸೆ ಪಡೋದು
೩) ಶಕುಂತಲೆ, ಊರ್ವಶಿ ಇವರು ಬರಿ 'ಕಾಮ'ದ ಗುರುತಾಗಿ ಹೇಳಿರುವುದು.
೫) ಮೋಹಿನಿಯನ್ನು ಶಿವ ಕಾಮಿಸುವುದು.
ಇವೆಲ್ಲ ಇದ್ದೇ ಇದೆ. ಇದು ಎಂತ ಹೊಸದೇನಲ್ಲ!!!
ಇದು ವೇದ, ಮಹಾಭಾರತದ ಕಾಲದಿಂದಲೂ ಇದೆ. ಇನ್ನೂ "ಲೋಕ ನಾಶ"ವಾಗಿಲ್ಲ!!
ಯಾವ ಮಹಾಕಾವ್ಯದಲ್ಲಿ ಹೆಣ್ಣನ್ನು ಕಾಮಿಸಿದ ವಿಷಯವಿದೆ?
ಉ: ಮುಂಗಾರು ಮಳೆ ನೋಡಿದ ಮೇಲೆ
ತಮಾಷೆ ಮಾಡಿದ್ದಕ್ಕೆ ಅಷ್ಟೊ೦ದು Serious ಆಗ್ ಬಿಡೋದೇ...ಛೇ !!
ನೀವು ಕಾಳಿದಾಸನ ಕಾವ್ಯವನ್ನು ಮತ್ತೊಮ್ಮೆ ಓದಿ !
ಬೇ೦ದ್ರೆ ಯವರ ಅನುವಾದವನ್ನು ಓದಿ - "ಮೇಘದೂತ".
ಉ: ಮುಂಗಾರು ಮಳೆ ನೋಡಿದ ಮೇಲೆ
ನಂಗೆ ಅನುವಾದಕ್ಕಿಂತ ಮೂಲ ಕಾಳಿದಾಸನ "ಮೇಘ ಸಂದೇಶ"ವೇ ಇಷ್ಟ. ಅದನ್ನೇ ಓದಿಕೊಂಡಿದ್ದೇನೆ.
ಅದರಲ್ಲಿ ಒಂದು ಶ್ಲೋಕಕ್ಕೆ ನನ್ನ ತರ್ಜುಮೆ ಹೀಗೆ.
ತಣ್ಣಗೆ ಚಿಟಿಚಿಟಿ ಮಳೆ ಬಂತೆಂದು ಪಟ್ಟಣದ
ಹದಿ-ಕುದಿ-ಹೆಣ್ಣುಗಳು ಚಂಗಲೆದ್ದು ಕುಣಿದರೆ,
ಮಳೆರಾಯ ದುಡಿಮೆಗೆ ಫಲವೀಯ್ಯುವನೆಂದು
ಹಳ್ಳಿಯ ಮುಗ್ದೆಯರಿಗೆ ಧನ್ಯತೆಯ ಕಣ್ಣೀರಂತೆ!
ಉ: ಮುಂಗಾರು ಮಳೆ ನೋಡಿದ ಮೇಲೆ
ಸರಿ ಅನಿವಾಸಿಗಳೇ, ನಿಮ್ಮ ಮಾತು ಸರಿ(correct and ideal)!
ಆದರೆ ನಾನು ಹೇಳಿದ ಮಾತು ದಿಟ( fact / ವಾಸ್ತವ ).
ಎಲ್ಲ Demand and Supply ಅಷ್ಟೇ!!!
ನಿಮಗೆ ನನ್ನ ಮಾತಿಂದ( ನಾನು ತಮಾಶೆಯಾಗಿ, ಹುಡುಗಾಟಕ್ಕೆ ಹೇಳಿದ್ದು ಅಂತ ನಿಮಗೆ ) ತುಂಬಾ ಬೇಜಾರು ಆಗಿದ್ರೆ, please ಬೇಜಾರು ಮಾಡಿಕೋಬೇಡಿ.!
ಉ: ಮುಂಗಾರು ಮಳೆ ನೋಡಿದ ಮೇಲೆ
ದಿಟ/ವಾಸ್ತವದ ಬಗ್ಗೆ ನಮ್ಮ ನಿಲುವೇನು ಅನ್ನುವುದು ಇಲ್ಲಿ ಪ್ರಶ್ನೆ. slavery ತೊಲಗಬೇಕು, ಸ್ವಾತಂತ್ಯ್ರ ಬೇಕು ಎಂಬ ನಿಲುವು ತಗೊಂಡ ಮೇಲೆ ಅದರತ್ತ ಕೆಲಸ ಮಾಡಲು ಸಾಧ್ಯ. ಅಷ್ಟು ದೊಡ್ಡ ಮಾತು ಯಾಕೆ, ಮನೆಯ ಮುಂದೆ ತಿಪ್ಪೆ ಇದ್ದರೆ ಅದರ ಬಗ್ಗೆ ಒಂದು ನಿಲುವು ತೆಗೆದುಕೊಂಡಾಗಲೇ ಅದನ್ನು ಸಪಾಟು ಮಾಡಲು ಶುರುವಾಗುವುದು. ವಾಸ್ತವ ಎಂದು ಅದನ್ನು ಒಪ್ಪಿಕೊಂಡು ಕೂರುವುದು ಶೋಚನೀಯವಾಗಿ ಕಾಣುತ್ತದೆ. ನೀವು ಹೇಳುವ ವಾಸ್ತವವೂ ನಾವೇ ರೂಪಿಸಿಕೊಂಡು ಆಚರಣೆಗೆ ತಂದಿರುವುದು. ಅದು ಎಲ್ಲಿಂದಲೋ ದತ್ತವಾದುದಲ್ಲ. ಏನೇ ಬದಲಾವಣೆಗೂ ನಾವು ತೆಗೆದುಕೊಳ್ಳುವ ನಿಲುವು ಮೂಲ ಕ್ರಿಯೆಯಾಗುತ್ತದೆ. ಆದರೆ ಮೇಲಿನ ನಿಮ್ಮ ಪ್ರತಿಕ್ರಿಯೆಯಲ್ಲಿ ನೀವೇ ಹೇಳಿದ ಹಾಗೆ ಈ ವಾಸ್ತವ ನಿಮ್ಮ ಅನುಕೂಲಕ್ಕೆ, ರುಚಿಗೆ ಸರಿಯಾಗಿರುವುದರಿಂದ ಬದಲಾವಣೆಯ ಅವಶ್ಯಕತೆ ನಿಮಗೆ ಇಲ್ಲ!
ಇನ್ನು ಕಾಳಿದಾಸನ ಕಾಲದಿಂದಲೂ ಇತ್ತು ಈಗಲೂ ಇರಲಿ ಎನ್ನುವ ಮಾತಿಗೆ ಏನೂ ಹೇಳಲಾಗದು. ಆಗಿನ ರೀತಿಯಲ್ಲಿ ನಾವಿಂದು ಬದುಕಲಾಗುವುದಿಲ್ಲ. ಅಥವಾ ಅಂದಿನ ಎಷ್ಟೋ ಆಚರಣೆಗಳು ಇಂದು ಇಲ್ಲ. ಮಹಾಭಾರತ ಕಾವ್ಯದ ದ್ರೌಪದಿಯ ರೀತಿ ಈವತ್ತು ನಾವು ಬದುಕಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚಿಗೆ ಹೇಳುವುದಿಲ್ಲ.
ಇಲ್ಲಿ ಬೇಜಾರಾಗುವ ಸಂಗತಿಯೇನು ಇಲ್ಲ. ನಿಮಗೆ ಹೌದೆನಿಸಿದ್ದು ನೀವು ಹೇಳುತ್ತಿದ್ದೀರಿ, ಮಾಡುತ್ತಿದ್ದೀರಿ.
ಉ: ಮುಂಗಾರು ಮಳೆ ನೋಡಿದ ಮೇಲೆ
ಸಾಮಿ, ನಿಮ್ಮ ಮೇಲಿನ ಮಾತಿನ ಒಟ್ರಾಸಿ ಈ ಸಾಲು ತಾನೆ.!!
ನೋಡಿ.. ಸಿನಿಮ ಅನ್ನೂದು ಮೋಜು/ಮಜಾ/ಮಸ್ತಿಯ ಸಂಗತಿಯನ್ನು ಊಳಿಗ, ಬಿಡುಗಡೆ, ಇವಕ್ಕೆ ಗಂಟು ಹಾಕಬೇಡಿ. ಸಿನಿಮಕ್ಕೆ ನಾವು ನಮ್ಮ ಬಾಳಲ್ಲಿ ಹೆಚ್ಚು ಬೆಲೆಕೊಡಲ್ಲ.
ಯಾಕೋ ನಿಮ್ದು ಸಿನಿಮ ಬಗ್ಗೆ ತೀರಾ ಕಾಳಜಿ ಆಯ್ತು.!
ಕಾವ್ಯದ ಗುರಿಯೊಂದೇ ರಂಜನೆ/ಮಜಾ/ಮಸ್ತಿ/ಮೋಜು. ಅದರಲ್ಲೂ "ಕಾವ್ಯೇಷು ನಾಟಕಂ ರಮ್ಯಂ". ಈ ಸಿನಿಮವೂ ಒಂದು ನಾಟಕವೇ!
ಕಾಳಿದಾಸನ ಮೇಘದೂತ, ಶಾಕುಂತಲಾ, ಹಿಡಿಸುವುದು ಹೆಚ್ಚು ಮಂದಿಗೆ ಅದರಲ್ಲಿರುವ ಹಸಿಬಿಸಿ ಸಂಗತಿಗಾಗಿ, ಹೊರತು ಅದರ ಅದರ 'ನೀತಿಗಾಗಿ' ಅಲ್ಲ! ಸಂಸ್ಕೃತದಲ್ಲಿ ಶೃಂಗಾರ/ಬೇಟ/romantic ಕಬ್ಬ/ಕಾವ್ಯಗಳು ವಿಜೃಂಬಿಸಿದಷ್ಟು/ಮರೆದನಿತ್ತು ಮತ್ತೆ ಯಾವ ಕಾವ್ಯವೂ ಮರೆದಿಲ್ಲ!! ಇದನ್ನು ಒಪ್ಪದಿದ್ದರೆ ಬಿಟ್ಟುಕೊಳ್ಳಲಿ! ಅವರು ದಿಟವಲ್ಲದ ಸುಳ್ಳ 'idealogy'ಗೆ ಜೋತು ಬಿದ್ದು, ಇರುವ ದಿಟ/ವಾಸ್ತವವನ್ನು ಮರೆತವರು.
ನೋಡಿ, ನೀವು ನಾಟಕವನ್ನು, ಬಾಳಿಗೆ ತುಂಬಾ ಹತ್ತಿರವೆಂಬಂತೆ ಬೆಸೆಯುತ್ತಿದ್ದೀರಿ. ಯಾವಾಗಲೂ ಕಾವ್ಯ ಅಂದರೆ ಇರುವುದನ್ನು ಇದ್ದಂತೇ ಹೇಳುವುದಲ್ಲ. ಕಾವ್ಯದಲ್ಲಿ ಯಾವಾಗಲೂ ಇರುವುದನ್ನು ಹಿಗ್ಗಿಸಿ ಹೇಳುವುದೇ ಇರುವುದು. ನಾಲ್ಕನ್ನು ನಲವತ್ತು ಎಂದು ಹೇಳಿದರೇ ಅದು ಕಾವ್ಯ!
ಮಹಾಭಾರತದ ದ್ರೌಪದಿಯಂತೆ, ಅವತ್ತೂ ಎಲ್ಲರೂ ಬದುಕಿಲ್ಲ.
ಕಬ್ಬದಲ್ಲಿ ಎಲ್ಲವೂ ಹಿಗ್ಗಿಸಿರುವುದು ಎಂಬ ತಿಳಿದುಕೊಳ್ಳಲೇ ಬೇಕು. ಕಬ್ಬವು ಬರಿ ಇದ್ದದ್ದನ್ನು ಇದ್ದ ಹಾಗೆ ಹೇಳಿರಲ್ಲ.
ಆದರೆ ಇಂದೂ ಕೂಡ ಕಾಳಿದಾಸ ಶಕುಂತಲೆಯ ಮೊಲೆಗಳನ್ನು ಹಸಿಬಿಸಿಯಾಗಿ ಬಣ್ಣಸಿದಂತೆ, ಮಂದಿ ಬಣ್ಣಿಸಿಕೊಂಡು ನಲಿಯುತ್ತಾರೆ. ನನ್ನ ಹಿಂದಿನ ಮಾತಿನ ತಿರುಳು ಹಣ್ಣುಗಳ ಅಂಗಾಂಗ ಮೈಮೆ ತೋರಿಸಿ, ನಾಟಕವನ್ನು ಸೂಪರ್ ದೂಪರ್ ಹಿಟ್ ಮಾಡೋದು ಆಗಿನಿಂದಲೂ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಇದುವೇ commerial ಚಿತ್ರ/ನಾಟಕದ ಹಿರಿಮೆ, ಗರಿಮೆಗಳು! ಇದರ ಇದುರು ಹತ್ತು ದನಿ ಎದ್ದರೆ, ದನಿ ಎತ್ತದ ಸಾವಿರ ಸಾವಿರ ಮಂದಿ ಇವನ್ನು 'ಆಸ್ವಾದಿಸುತ್ತಾರೆ/ಇಷ್ಟಪಡುತ್ತಾರೆ'.
ಅವರನ್ನೆಲ್ಲ 'ಪರಮ ಪೋಲಿಗಳು, ನೀಜ ರುಚಿಯವರು, ಸಮಾಜ ಫತುಕರು,' ಇನ್ನೂ ಮುಂತಾದ ಬಗೆಬಗೆಯ ದೊಡ್ಡ ದೊಡ್ಡ ಒರೆಗಳಿಂದ ಅಂದು, ತಮ್ಮನ್ನು ತಾವು ಸಂತೈಸಿಕೊಳ್ಳಬಹುದೇ ಹೊರತು, ದಿಟ/ವಾಸ್ತವವನ್ನು ಮಾರ್ಪಡಿಸುವ ತಕ್ಕುಮೆ/ಬಲ್ಮೆ ಈ ಅನ್ನುವ ಮಂದಿಗೆ ಇದೆಯೇ? ಇದ್ದರೆ ಮಾರ್ಪಡಿಸಲಿ, ನೋಡೋಣ.
ನನಗೇನೋ ಈ ರಮ್ಯವಾದ ಕಾವ್ಯಗಳಿಗಿಂದ ಜಾತಿ, ದರುಮ, ಒಂದು ಕೋಮನ್ನು ಬೈಯಲು, ತೀಯಲು ಬರೆದ ಹೊತ್ತಗೆಯನಿತ್ತು ಕುತ್ತು ಬರಬಹುದು ಎಂದು ಹೇಳಿವುದಕ್ಕೆ ಸುತರಾಂ ಒಪ್ಪುಗೆಯಿಲ್ಲ.
ದಿಟವಾಗಿಯೂ ನೋಡಿದರೆ ನಮ್ಮ ಸಮಾಜವನ್ನು ಹಾಳಗೈಯುತ್ತಿರುವುದು, ಈ 'ಮನ-ಒಡೆಯು ಭಾವನೆ' ಬಿತ್ತುವ ಸಂಗತಿಗಳೇ ಹೊರತು, "ಒಂದು ಗಂಡು, ಒಂದು ಹೆಣ್ಣು ಸೇರಿ/ಕೂಡಿ ನಲಿಯಿರಿ" ಎಂದು 'ಕೂಡು'ಅನ್ನು ಹೇಳುವ ಸಿನಿಮ/ಕಾವ್ಯಗಳಲ್ಲ!
'ಮುಂಗಾರು ಮಳೆ'ಯಂತ ಸಿನಿಮದಿಂದ ನಮ್ಮ ಸಮಾಜ ಎಕ್ಕುಟ್ಟು ಹೋಗುವುದು ಅಂದರೆ, ನಗು ಬರುತ್ದೆ. ಇನ್ನೂ ಕೆಲವರು ಪೇಪರಲ್ಲಿ, ಹೊತ್ತಗೆ ಬರೆದು ಮನಗಳ ನಡುವೆ ಕಿಚ್ಚು ಹಚ್ತಾರಲ್ಲ, ಅವು ಸಮಾಜವನ್ನು ಒಡೆದು ಪೀಸ್ ಪೀಸ್ ಮಾಡಿ, ಕಸ ಮಾಡಿ ಹಾಕುವುವು.
ಇಲ್ಲಿಗೆ ಸಾಕು! ಇದರ ಮರುನುಡಿಗೆ ನಾನು ಮರುನುಡಿಯೆನು!
ಉ: ಮುಂಗಾರು ಮಳೆ ನೋಡಿದ ಮೇಲೆ
ನಿಮ್ಮಿಷ್ಟ
"ಒಟ್ರಾಸಿ ಸಾಲು" ಅದಲ್ಲ.
ಮೋಜು/ಮಜ/ಮಸ್ತಿಗೆ ಊಳಿಗ ಬಿಡುಗಡೆಯನ್ನು ಗಂಟು ಹಾಕಿಲ್ಲ. ನಿಲುವಿನ ಮಾತಿಗೆ ಅದು ಹೇಳಿದ್ದು. ಇದು ನಿಮಗೂ ಗೊತ್ತು!
ನನ್ನ ಕಾಳಜಿಯ ಮಿತಿಯನ್ನು ನೀವು, ನಿಮ್ಮ ಮೋಜು/ಮಜ/ಮಸ್ತಿಯ ಆಳವನ್ನು ನಾನು ಹುಡುಕುವುದು ಇಲ್ಲಿ ಅಪ್ರಸ್ತುತ ಅಲ್ಲವೆ?

ಇರವುದನ್ನು ಹಿಗ್ಗಿಸುವುದು ಕಾವ್ಯದ "ಒಂದು" ಗುಣ ಅಷ್ಟೆ. ಇತ್ತೀಚೆಗಂತೂ ಹಿಗ್ಗಿಸದಯೇ ಸೂಕ್ಷ್ಮಗಳನ್ನು ಹುಡುಕುವ ಕೆಲಸ ತುಂಬಾ ಆಗಿದೆ. ಇರಲಿ. ಅದು ಕೂಡ ಇಲ್ಲಿ ಅಪ್ರಸ್ತುತ.
ದ್ರೌಪದಿಯ ಹಾಗೆ ಆವತ್ತು ಎಲ್ಲರೂ ಬದುಕಿಲ್ಲದಿರಬಹುದು. ಹಾಗೆಯೇ ಈವತ್ತು ಕೆಲವರಾದರು ಬದುಕಿದ್ದರೆ ಇಂದಿಗೆ ಕಾಳಿದಾಸನನ್ನು ಜಗ್ಗುವುದು ಸರಿಹೋಗುತ್ತಿತ್ತೇನೋ!
ಇನ್ನು, ನಂದಿನಿ ಪಾತ್ರದ ಚಿತ್ರಣದ ಬಗ್ಗೆ ನಾನು ಹೇಳಿದ್ದಕ್ಕೂ, ಹೆಣ್ಣು ದೇಹವನ್ನು ವಿಜೃಂಭಿಸುವ ನಿಮ್ಮ ಮಾತುಗಳಿಗೂ ಎಲ್ಲಿಯೋ ಸಂಬಂಧವಿದೆ ಅಂತ ಈಗ ಅನಿಸುತ್ತಿದೆ.
ಇನ್ನು ಚಿತ್ರ ನೋಡುವ ಜನರನ್ನು "ಪರಮ ಪೋಲಿಗಳು, ನೀಜ ರುಚಿಯವರು, ಸಮಾಜ ಫತುಕರು,'" ಎಂದು ಯಾರು ಹೇಳಿದ್ದಾರೋ ನನಗಂತೂ ಗೊತ್ತಿಲ್ಲ. ಈ ಚಿತ್ರ ಸಮಾಜವನ್ನು ಒಡೆಯುತ್ತದೆ ಎಂದು ಯಾರು ಹೇಳಿದ್ದರೋ ಅದೂ ಗೊತ್ತಿಲ್ಲ. ಅವರ ಮೇಲೆಲ್ಲಾ ಇಲ್ಲಿ ಯಾಕಿ ಕಾರಿದ್ದೀರೋ ಗೊತ್ತಿಲ್ಲ. ಆದರೂ "ಮನಗಳ ನಡುವೆ ಕಿಚ್ಚು ಹಚ್ಚುವವರ" ಬಗ್ಗೆ ನೀವು ಹೇಳಿದ್ದನ್ನು ನಾನೂ ಒಪ್ಪುತ್ತೇನೆ.
ಹೇಳಿದ್ದನ್ನೇ ಹೇಳುತ್ತಿರುವ ನೀವು ಇನ್ನು ಮರುನುಡಿಯುವುದಿಲ್ಲ ಎಂದದ್ದು ಸೂಕ್ತವೇ!
ಉ: ಮುಂಗಾರು ಮಳೆ ನೋಡಿದ ಮೇಲೆ
ನನ್ನಿ! ಒಳ್ಳೆಯ ಮಾತುಕತೆ ನಡೆಯಿತು
( ಇದನ್ನು ಮರೆತಿದ್ದೆ )
ಉ: ಮುಂಗಾರು ಮಳೆ ನೋಡಿದ ಮೇಲೆ
ಸಾರ್... ಏನು ಬರೀತೀರ ನೀವು!! ಬರೆದದ್ದು ಒಂದೂ ಅರ್ಥವಾಗಲ್ಲ.
ಯಾವುದಾದರೂ ಮ್ಯೂಸಿಯಮ್ಮಿನಲ್ಲಿ ನಿಮ್ಮನ್ನೂ ನಿಮ್ಮ ಬರಹವನ್ನೂ ಎತ್ತಿಡಬೇಕು!!
ಉ: ಮುಂಗಾರು ಮಳೆ ನೋಡಿದ ಮೇಲೆ
ಇದು ಮಹೇಸಪ್ಪನೋರಿಗೆ ಬರೆದದ್ದು
ಉ: ಮುಂಗಾರು ಮಳೆ ನೋಡಿದ ಮೇಲೆ
ಏನ್ ಬುದ್ದಿ ಗಂಗಾದರಪ್ಪನೋರೇ...
ಯುಗಾದಿಗೋ, ದೀಪಾವಳಿಗೋ ಕಾಣಿಸ್ಕೋತೀರಿ
!
ನಾನ್ ಬರೆದದ್ದು ಯಾರಿಗೆ ಅರ್ತ ಆಗಬೇಕಿತ್ತೋ, ಅವರಿಗೆ ಆಗೈತೆ. ವಸಿ, ಕೆಳಗಿನ ಕಮೆಂಟುಗೊಳ ನೋಡಿರಿ!
ಗಂಗಾದರಪ್ಪಂಗೆ ನಂಗೆ ಕಂಡ್ರೆ ಸಾನೆ ಪರೀತಿ..( ಹಿಂದಿನ ಅವರ ಕಮೆಂಟುಗೊಳ ನೋಡಿ, ಗೊಂತಾಗೈತೆ ).... ಅದಕ್ಕೆ ಹಿಂಗೆಲ್ಲ ತಮಾಸಿ ಮಾಡ್ತಾರೆ!
ಉ: ಮುಂಗಾರು ಮಳೆ ನೋಡಿದ ಮೇಲೆ
ಏನು ತಿಳೀಲಿಲ್ಲ ಅಂದ್ರೆ ಹೇಳಬಹುದು...ಹೀಗೆ ಅಡ್ಡಗೋಡೆ ಮೇಲೆ ದೀಪ ಇಟ್ಟಂಗೆ ಕಾಮೆಂಟ್ ಹಾಕಿದರೆ ಏನೂ ಆಗಕಿಲ್ಲ.
ಒಸಿ ಬಿಡಿಸಿ ಏನು ಗೊತ್ತಾಗ್ನಿಲ್ಲ ಅಂತ ಹೇಳಿ
ಉ: ಮುಂಗಾರು ಮಳೆ ನೋಡಿದ ಮೇಲೆ
ಗುರುವೇ ! ಬರೀ ಮನೋರ೦ಜನೆ ಯಾದರೆ ಪರಿವಾಗಿಲ್ಲಾ.
ನಾನು ಕಾಲೇಜ್ ನಲ್ಲಿ ಪಾಠ ಮಾಡಬೇಕದರೆ ಈ ರೀತಿ ತೀರಾ ಅಸಭ್ಯ ಜೋಕ್ ಹೇಳುವ್ ಕಲೆಯನ್ನು ಹುಡುಗರು
ಮಾಸ್ಟರ್ ಮಾಡಿ ಕೊಳ್ಳುತ್ತಿದ್ದರು. ಹುಡುಗಿಯರ ಮು೦ದೆ ಅವರನ್ನು ನಗುಸುವುದಕ್ಕೆ ಪಡುವ ಕಷ್ಟ ಅಷ್ಟಿಷ್ಟಲ್ಲಾ,
ಅದಕ್ಕೆ ಜೋಕ್ ಹೇಳುವುದಕ್ಕೆ ಅವ್ರು ಒಬ್ಬ್ ಹಿರೋ ನಾ ಅನುಸರಿಸಿ ತಮ್ಮ ಸ್ವ೦ತಿಕೆಯನ್ನು ಕಳೆದುಕೊ೦ಡು ಬಿಡುತ್ತಿದ್ದರು.
ಇನ್ನು ಬೇಜಾನ್ ರೀತಿ ಎಳೆ ಮನಸ್ಸುಗಳನ್ನು ಆಕರ್ಷಿಸಿ .. ಏನೇನು ಮಾಡ್ತವೋ ಈ ತರಹ ಸಿನಿಮಾಗಳು.
ಅದಿರಲಿ "ಹುಡುಗಟ " ಸಿನಿಮ ನೋಡಿದ್ರೇನು ??
ಅದೇ ರೀತಿ ಇರುತ್ತೆ ನೋಡಿ. ಹೇಗಿದೆ ?
ಉ: ಮುಂಗಾರು ಮಳೆ ನೋಡಿದ ಮೇಲೆ
"ತೀರಾ ಅಸಭ್ಯ ಜೋಕ್"
ಏನ್ರಿ ಮುರುಳಿಯವರೆ ಇಂಗ್ಲೀಶ್ ಓದಿ ಸಭ್ಯ-ಗಿಬ್ಯ ಅಂತೀರಲ್ಲ!!!
ಅಮೆರಿಕದಲ್ಲಿ ಹೆಂಗಸರನ್ನು ಪಬ್ಲಿಕ್ಕಲ್ಲಿ ಅಪ್ಪಿಕೊಳ್ಳುವುದು, ಮುತ್ತಿಕ್ಕುವುದು ಸಭ್ಯರು ಮಾಡುವವರು
ನಾರ್ತೀಗಳು ಕೂಡ ಗಂಡು-ಗಂಡುಸರು ಅಪ್ಪಿಕೊಳ್ಳುವುದು, ಅಮ್ಮ-ಮಗ ಅಪ್ಪಿಕೊಳ್ಳುವುದು, ಅಣ್ಣ-ತಂಗಿ ಅಪ್ಪಿಕೊಳ್ಳುವುದು ಇದು 'ಸಭ್ಯ' ಅಂತೆ.
ಆದರೆ ನಾವು ಸೌತವರು ಅಪ್ಪಿಕೊಳ್ಳುವುದು, ಮುತ್ತಿಡುವುದು ಪಬ್ಲಿಕ್ಕಲ್ಲಿ ಬರಿ ಮಕ್ಕಳನ್ನು!!!
'ಸಭ್ಯ' ಅನ್ನೋದು ನಾವು ತಗೆದುಕೊಳ್ಳವ 'ಭಾವ'ದಲ್ಲಿದೆ. ಕಲೆಗೆ ಹಲವು 'ಸಭ್ಯತನ' ಮೀರುವ ಅನುವಿದೆ.!!
ಅದೂ ಅಲ್ಲದೇ "ಇದು 'ಸಭ್ಯ' ಅಂತ certificate ಕೊಡಕ್ಕೆ ನೀವ್ಯಾರು?" ಅಂತ rough ಆಗಿ ಕೇಳಿದ್ರೇ? ನಾವು ಸುಮ್ನೆ ಇರಬೇಕಾಗುತ್ದೆ!
ಉ: ಮುಂಗಾರು ಮಳೆ ನೋಡಿದ ಮೇಲೆ
ಹುಡುಗಟ ಅಂತ ಸಿನಿಮ ಬಂದಿದೆಯಾ?
ಹುಡುಗಾಟದ ಹಾಡುಗಳು ಸಕ್ಕತ್!
ಉ: ಮುಂಗಾರು ಮಳೆ ನೋಡಿದ ಮೇಲೆ
ಹುಡುಗಾಟ ಸಿನಿಮಾ ಚಲೋ ಐತಿ.
ಉ: ಮುಂಗಾರು ಮಳೆ ನೋಡಿದ ಮೇಲೆ
ಸಕ್ಕತ್ ಕಂಡ್ರಿ.. ನೀವು.!!
ಹುಡುಗಾಟದ ಹಾಡುಗಳು ಚನ್ನಾಗಿವೆ. ಸಿನಿಮಕ್ಕೆ ಹೋಗಕ್ಕೆ ಬಿಡುವೇ ಆಗಿಲ್ಲ!! ಬಹಳ busy
!!
ನವರಂಗ್ ಅಲ್ಲಿ ಇದೆ ಅಲ್ವಾ?
ಇಲ್ಲಿ ನಮ್ ಕೋರಮಂಗಳದ ಕಡೆ PVR ಬಿಟ್ಟು ಸಿನಿಮಮನೆಗಳೇ ಇಲ್ಲ! PVRಅಲ್ಲಿ sold out ಕಳೆದ weekend!
ಉ: ಮುಂಗಾರು ಮಳೆ ನೋಡಿದ ಮೇಲೆ
ಧನ್ಯವಾದ ಈ ವಿಮರ್ಶೆಗೆ .. ಕಾರಣ ನನಗೆ ಆತನ ತ್ಯಾಗ .. ತ್ಯಾಗವೇ ಅನ್ನಿಸಿಲ್ಲ.
ಅವರ ಅಮ್ಮ ಕೂಡ ಅವನಿಗೆ ಕಪಾಳಕ್ಕೆ ಹೊಡೆದು "ಎಲ್ಲದಿಕ್ಕಿ೦ತಲೂ ಮನೆ , ಮನೆತನದ ಗೌರವ ಮುಖ್ಯ" ಅ೦ತಾ Dialogue ಹೇಳಿದಾಗ ಅವನು ಪಾಪ ತನ್ನ ಪ್ರೇಮದ ಮೇಲೆ ವಿಶ್ವಾಸ ಕಳೆದುಕೊ೦ಡು ಬಿಡುತ್ತಾನೆ.
ಲೋಕ ಈ ಪ್ರೇಮಕ್ಕೆ ಒ೦ದಲ್ಲಾ ಒ೦ದು ರೀತಿಯಿ೦ದ ವಿರೋಧವಾಗಿರುತ್ತೆ.
ಆ ವಿರೋಧವನ್ನು ಒಪ್ಪಿ ಕೊನೆಗೆ ಹೆ೦ಡ ಕುಡಿಯುವ Scene , ಹೀರೋ ಹೀರೋ ನೇ ಅಲ್ಲಾ ಅನ್ನು ವ ಹಾಗೆ ಮಾಡುತ್ತೆ.
ಒಬ್ಬ Weak ಮನುಷ್ಯ ಅನ್ನುವ ಚಿತ್ರವಿದೆ. ಆದರೆ ತಕ್ಷಣ ಮತ್ತೆ Fightu ...ಇಲ್ಲಿ ಆತ ತಾನು ಹೀರೋ ಅ೦ತ "Prove" ಮಾಡ್ತಾನೆ.
Villain ಮತ್ತು Fight ಇಲ್ಲ ಅ೦ದರೆ .. "Prove" ಮಾಡೊದು ಕಷ್ಟ.
ಆಮೇಲೆ ಕೊನೆಗೆ ಆ Military ಮನುಷ್ಯ.. ಕಾರ್ ನಲ್ಲಿ "Watch ಇಟ್ಕೋ ಬಹುದ ಅ೦ತ ಕೇಳುತಾನೆ "
ಯಾರಾದರೂ Drop ಕೊಡ ಬೇಕಾದರೆ ಈ ರೀತಿ ಕೇಳ್ತಾರೇನು ??
ಅದು Military ಯವರು ??
ಹೀಗೆ ಕೊನೆಯಲ್ಲಿ ಎಲ್ಲಾ ಕೆಡಿಸಿ ಬೋರ್ ಮಾಡಿದ್ದಾರೆ.
ಮತ್ತೊ೦ದು ಆ ಮೊಲದ "ಆನೆ rape " Joke .. ತೀರಾ ಕೆಟ್ಟದಗಿದೆ.
ಅದಕ್ಕೆ ಅವಳು ನಗುವುದೆ೦ದರೆ ಈಗಿನ ಕಾಲದ ಹೆಣ್ಣು ಮಕ್ಕಳನ್ನು ಒಲಿಸಿಕೊಳ್ಳುವುದಕ್ಕೆ ಈ ರೀತಿ "rape " Joke
ಹೇಳ ಬೇಕಾ ??
ಈಗಿನ ಕಾಲದ ಹೆಣ್ಣು ಮಕ್ಕಳು ಎಷ್ಟೋ Maturity ಇಟ್ಟಿದ್ದಾರೆ.
ಎಷ್ಟೊ೦ದು ಕ್ಷೇತ್ರದಲ್ಲಿ ಮು೦ದೆ ಬ೦ದಿದ್ದಾರೆ.
ಅವರನ್ನು ಚಿತ್ರಿಸುವ ಕಲೆಗಾರಿಕೆ ನಮ್ಮ ಸಿನಿಮಾದವರಿಗೆ ಎಲ್ಲಿ ಬರಬೇಕು ??
ಮೊಲೆಯ ಕುಣಿಸುವುದೊ೦ದೇ ಸಿನಿಮಾ ಕಲೆ...
ಸಿಳುಕಿದಳು ನೋಡು ಮುಗ್ಢ ಬಾಲೆ...
ಅನ್ನುವ ಕವನ ಬರೆದಿದ್ದೆ .
ಪೋಸ್ಟ್ ಮಾಡಿಲ್ಲಾ.
ಮುರಳಿ.
ಉ: ಮುಂಗಾರು ಮಳೆ ನೋಡಿದ ಮೇಲೆ
ಏನ್ರೀ ಇದು ಮುರಳಿ ಅವರೇ!!
ನೋಡಿ ಇದು "ವಿಷಯ ವಾಸನೆ" ಅಂದ್ರೆ!!
ಪೋಸ್ಟ್ ಮಾಡಿ!!ರಮಣಮಹರ್ಷಿ ಓದೋ ಮುರುಳಿ ಅವರೂ ಹೇಗೆ ಕಾಳಿದಾಸ ಆಗ್ತಾರೆ ಅಂತ ನೋಡೋಣ!!
ಉ: ಮುಂಗಾರು ಮಳೆ ನೋಡಿದ ಮೇಲೆ
ಅನಿವಾಸಿಯವರೇ,
ನಿಮ್ಮ ವಿಮರ್ಶೆ ಬಹಳ ಚೆನ್ನಾಗಿದೆ - ಚಿತ್ರ ನಿರ್ದೇಶಕರಿಂದ ಇದಕ್ಕಿಂತ ಕಡಿಮೆ ಮಟ್ಟ ನಾವು ನಿರೀಕ್ಷಿಸುವುದಿಲ್ಲ
ಮುಂಗಾರು ಮಳೆಯ ಕೆಲವು ಜೋಕ್ ಗಳು ತೀರಾ ಕಳಪೆಯಾಗಿರುವುದೂ, ಮತ್ತು ನಾಯಕಿ ಪಾತ್ರಕ್ಕೆ ಜೀವವಿಲ್ಲವಿರುವುದೂ ನಿಜ ; ಚಿತ್ರಕ್ಕೆ ಎಮ್ ಟಿ ವಿ ಮಾದರಿಯ(? - ಏಕೆಂದರೆ ನಾನು ಎಮ್ ಟಿ ವಿ ನೋಡೊಲ್ಲ!) ಸಂಗೀತ ಕುಣಿತಗಳು ಹೆಚ್ಚೇನೂ ಕೊಡಲಿಲ್ಲ.
ಆದರೂ, ಈ ಸಿನೆಮಾ ನನಗೆ ಹಿಡಿಸಿದ್ದು - ಈಗ ಬರುತ್ತಿರುವ ಬೇರೆ ಚಿತ್ರಗಳ ಮುಂದೆ, ಇದು ಎಷ್ಟೋ ವಾಸಿ ಅನ್ನೋ ಕಾರಣಕ್ಕೆ.
-ಹಂಸಾನಂದಿ
ಉ: ಮುಂಗಾರು ಮಳೆ ನೋಡಿದ ಮೇಲೆ
ಹಂಸಾನಂದಿಯವರೆ,
ಮೆಚ್ಚಿದ್ದಕ್ಕೆ ವಂದನೆಗಳು.
ನಿಮ್ಮ ಮಚ್ಚಿಗೆಯಲ್ಲಿನ ಎಚ್ಚರಿಕೆಯ ದನಿಯೂ ಅರ್ಥವಾಯಿತು.
ಉ: ಮುಂಗಾರು ಮಳೆ ನೋಡಿದ ಮೇಲೆ
ಮುರುಳಿಯವರೆ,
ಪ್ರತಿಕ್ರಿಯೆಗೆ ಧನ್ಯವಾದಗಳು.
ಬೇರೆ ಉದ್ಯಮಗಳಲ್ಲಿ "ಸಾಮಾಜಿಕ ಜಾವಾಬ್ದಾರಿ"ಯನ್ನು ಅಪೇಕ್ಷಿಸುವ ನಾವು ಸಿನೆಮಾ ಮಂದಿಯಲ್ಲೂ ಅದನ್ನು ಅಪೇಕ್ಷಿಸುವುದು ತಪ್ಪೆ? ಅದಕ್ಕೆ ಸಿನೆಮಾವನ್ನು ಒಂದು fantasy ಎಂದು ಪರಿಗಣಿಸದೇ, ನಮ್ಮ ಸಮಾಜಕ್ಕೆ ಕನ್ನಡಿ ಹಿಡಿಯುತ್ತಿದ್ದಾರೆ ಎಂದು ಗಂಭೀರವಾಗಿ ಮಾತೆತ್ತುವುದು ಒಳ್ಳೆಯದಲ್ಲವೆ? ಯಾರೂ ನೋಡದ non-commercial ಚಿತ್ರಗಳಿಗಿಂತ ಎಲ್ಲರೂ ನೋಢುವ ಇಂಥ ಚಿತ್ರಗಳ ಬಗ್ಗೆ ಪ್ರಶ್ನೆಯೆತ್ತಬೇಕು ಅನ್ನುವುದು ನನ್ನ ಯೋಚನೆ.
ಉ: ಮುಂಗಾರು ಮಳೆ ನೋಡಿದ ಮೇಲೆ
ಮತ್ತೊ೦ದು ಆ ಮೊಲದ "ಆನೆ rape " Joke .. ತೀರಾ ಕೆಟ್ಟದಗಿದೆ.
ಅದಕ್ಕೆ ಅವಳು ನಗುವುದೆ೦ದರೆ ಈಗಿನ ಕಾಲದ ಹೆಣ್ಣು ಮಕ್ಕಳನ್ನು ಒಲಿಸಿಕೊಳ್ಳುವುದಕ್ಕೆ ಈ ರೀತಿ "rape " Joke
ಹೇಳ ಬೇಕಾ ??
ಹೌದು, ಅಂತ ಕೊಳಕು ಜೋಕಿಗೆ ಯಾವ್ ಹುಡುಗಿ ನಗ್ತಾಳ್ರಿ? ನಮಗೂನೂ ಅದೊಂದ್ ಜೋಕೇ ಅನಿಸುವದಿಲ್ಲಾ.
ಉ: ಮುಂಗಾರು ಮಳೆ ನೋಡಿದ ಮೇಲೆ
ಅವ್ರೇ ಅವ್ರೇ ಅವ್ರೇ ಅವ್ರೇ ಅನ್ನುವ ಜಪ ಬೇಕೇ ??
ಉ: ಮುಂಗಾರು ಮಳೆ ನೋಡಿದ ಮೇಲೆ
ಅವ್ರೇ ಅವ್ರೇ ಅವ್ರೇ ಅವ್ರೇ ಅನ್ನುವ ಜಪ ಬೇಕೇ ??
ಲೋ ಅನ್ರೀ, ಲೇ ಅನ್ರೀ,
ಉ: ಮುಂಗಾರು ಮಳೆ ನೋಡಿದ ಮೇಲೆ
ಅನ್ರಿ ಅಲ್ಲ, ಅನ್ನಲೇ ಅಂತ್ ಹೇಳಲೇ.
ಉ: ಮುಂಗಾರು ಮಳೆ ನೋಡಿದ ಮೇಲೆ
ಯಾಕೋ ಅನಿಸುತಿದೆ ಸುಮ್ಮನೆ... ವರ್ಷಗಳೇ ಕಳೆದು ಹೋಗಿವೆಯಲ್ಲ ಸಿನಿಮಾ ಥಿಯೇಟರ್ ಗೆ ಹೋಗದೇ. ಈಗಲಾದರೂ ''ಮುಂಗಾರು ಮಳೆ" ಚಿತ್ರ ನೋಡಲೆಂದೇ ಟಾಕಿಸ್ ಮುಂದೆ ನಿಂತ mass ಮಂದಿಯಲ್ಲಿ(ಬಾಲ್ಕನಿಯೂ ಸೇರಿದಂತೆ ) ನನ್ನನ್ನು ಗುರುತಿಸಿಕೊಳ್ಳಲಾಗದೇನೆ ಯಾಕೋ ಸುಮ್ಮನೆ ಸುಮ್ಮನೆ ಇದ್ದೇನಲ್ಲ...
ಇದೀಗ ಉತ್ತರ ಸಿಕ್ಕಿತು ಬಿಡಿ- ಇಂತಹ ಸಿನಿಮಾ ನೋಡಿ ಖಷಿ ಪಡುವ ವರ್ಗವೇ ಬೇರೆ ಇದೆ;ನಮ್ಮ ನಾಡಿನಲ್ಲಿ.
ಅಷ್ಟಕ್ಕೂ, "ಅದೃಷ್ಟಕ್ಕೆ ಇನ್ನೊಂದು ಹೆಸರೇ ಮುಂಗಾರು ಮಳೆ'' ಎನ್ನೋಣವೇ..
ಹಾಂ, ಇನ್ನೊಂದು ಉದಾಹರಣೆ ಇದೆ ಎನ್ನುವಿರಾ.. "ದುನಿಯಾ" ಈ ಸಾಲಿಗೆ ಸೇರುತ್ತದೆಯಲ್ಲವೇ..
ಏನೇ ಆಗಲಿ ಇದು ಕನ್ನಡ ಚಿತ್ರ ರಂಗಕ್ಕೆ ಅದೃಷ್ಟದ ಹೊಸ ತಿರುವೂ ಹೌದು. ಇನ್ನಾದರೂ ಮಚ್ಚು, ಲಾಂಗುಗಳ "ಮಸ್ತಿ " ಮತ್ತು ಹಾವಳಿ ಕಡಿಮೆಯಾದೀತೆಂದು ನಿಟ್ಟುಸಿರೆಳೆದು ನಿರೀಕ್ಷಿಸೋಣವೇ..
-ಎಚ್.ಶಿವರಾಂ
ಉ: ಮುಂಗಾರು ಮಳೆ ನೋಡಿದ ಮೇಲೆ
ಮೊಲ ಆನೆಯ ರೇಪಿನ ಜೋಕಿನಂಥಾದ್ದೇ ಅಸಂಬದ್ಧ ಶಬ್ದಗಳನ್ನು "ಸೃಷ್ಟಿಸಿ" ಸುಧಾ ಪತ್ರಿಕೆಯಲ್ಲಿ ತಮ್ಮ ಅನುಭವದ ಪ್ರದರ್ಶನವನ್ನೂ ಮಾಡಿದ್ದಾರೆ ಚಿತ್ರದ ನಿರ್ದೇಶಕರು.!
ಎನಗಿಂತ ಕಿರಿಯರಿಲ್ಲ
ಉ: ಮುಂಗಾರು ಮಳೆ ನೋಡಿದ ಮೇಲೆ
http://thatskannada.oneindia.in/column/triveni/130607mungaru_male1.html
ಇನ್ನೊಂದು !
ಉ: ಮುಂಗಾರು ಮಳೆ ನೋಡಿದ ಮೇಲೆ
ಒಂದ್ ಸಿನಿಮಾ ಅಂದ್ ಮೇಲೆ ಎಲ್ಲಾನೂ ಒಳ್ಳೆಯದೇ ಇರಬೇಕು ಅಂತ್ ಅಂದ್ಕೋಬಾರದು. ಬರಿ entertainment ಇದ್ರೇ ಸಾಕು ಅಂದ್ರೆ ತಪ್ಪಾಗುತ್ತೆ. message ಇರಬೇಕು ಅಂತ ಕಾಸರವಳ್ಳಿಯವರಂತೆ ಪ್ರಶಸ್ತಿಗಾಗಿ ಸಿನಿಮಾ ಮಾಡಿದ್ರೇ ಎನ್ ಬಂತು ಬಾಗ್ಗೆ? ಒಂದ್ ಒಳ್ಳೇ message ನಾ entertainment ನೊಂದಿಗೆ ಕೊಟ್ರೇ ಅದು ಮಂದಿಗೆ ತನ್ ತಾನೇ ಹಿಡಿಸುತ್ತೆ. "ಮುಂಗಾರು ಮಳೆ" ಅದನ್ನು ಮಾಡಿ ತೋರಿಸಿದೆ.
ಸಿನಿಮಾದ ಮುಗಿಯದಂತೆ ಕಾಣೊ ಕೊನೆ ಇದೆಯಲ್ಲಾ ಅದು ಸಿನಿಮನೆಯಿಂದ ಹೊರಬಂದಾಗಲೂ ಅದು ಉಂಟು ಮಾಡುವ ಭಾವನೆ,feelings ಹಾಗೇ ಮನಸಲ್ಲಿ ಉಳಕೊಳ್ಳೋ ಹಾಗೆ ಮಾಡುತ್ತೆ. ನಮ್ಮೆಲ್ಲರ ಬಾಳಲ್ಲೂ ನಾವು ಯಾರಿಗಾಗಿಯೋ ಇಲ್ಲವೇ ಯಾವುದಕ್ಕೋ ಹಂಬಲಿಸಿರುತ್ತೇವೆ. ಅದರಿಂದ ನಮ್ಮವರೇ ಆದ ಇನ್ನಾರಿಗೋ ಆಗುವ ತೊಂದರೆಯನ್ನು ನೆನೆದು ನಾವು ತ್ಯಾಗ ಮಾಡಬೇಕಾರುತ್ತೆ.
ಒಂದ್ ವೇಳೆ ಪ್ರೀತಮ್, ನಂದಿನಿನಾ ಓಡಸ್ಕೊಂಡ್ ಹೋಗಿದ್ದಿದ್ರೇ "ಮುಂಗಾರು ಮಳೆ" ಹೀಗೆ ದೋ ಅಂತ ಸುರಿತಾನೇ ಇರಲಿಲ್ಲ. i think there lies the point. :-)'
ಉ: ಮುಂಗಾರು ಮಳೆ ನೋಡಿದ ಮೇಲೆ
ಏನ್ರೀ (ನೋ ) ಆಯ್ತು ನಿಮ್ಮ್ ಗೇ (ನಿ೦ಗೇ).. ತು೦ಬಾ Philospophical ಆಗ್ ಬಿಟ್ಟೂ ಏನೇನೋ ಹೇಳ್ತಾಯಿದ್ದಿಯಾ
ಉ: ಮುಂಗಾರು ಮಳೆ ನೋಡಿದ ಮೇಲೆ
ಏನಿಲ್ಲಾ ಮುರುಳಿs, "ಹಾಗೇ ಸುಮ್ಮನೇ"