ನನ್ನ ತೊದಲು ತುಟಿಗಳಿಗೆ ಪ್ರಾರ್ಥಿಸಲು ಕಲಿಸಿದಿರಿ,
ನನ್ನ ತಪ್ಪಡಿಗಳನು ತಿದ್ದುತ್ತ ಜೊತೆಯಲ್ಲೆ ಸಾಗಿದಿರಿ,
ಕೈಹಿಡಿದು ಬರೆಸಿ ಕೈಬರಹವನ್ನು ಚೆಂದಗಾಣಿಸಿದಿರಿ,
ನನ್ನ ಚಿತ್ತಭಿತ್ತಿಯಲಿ ನೂರಾರು ಬಣ್ಣಗಳ ತುಂಬಿದಿರಿ.
ನಾನು ಕಲಿತಷ್ಟೂ ಕಲಿಸುವ ಉತ್ಸಾಹವಿತ್ತು ನಿಮ್ಮಲ್ಲಿ,
ನಿಮ್ಮಿಂದಾಗಿಯೆ ಕಲಿಕೆಯ ಹಂಬಲ ಚಿಗುರಿತ್ತು ನನ್ನಲ್ಲಿ.
ನೀವು ಕಲಿಸುವಾಗಲೆಲ್ಲ ಆಗುತ್ತಿತ್ತು ಪಾಠವೂ ಆಟ!
ದಿನಕಳೆದಂತೆ ಹತ್ತಿರವಾಗುತ್ತಿತ್ತು ನಮ್ಮೀ ಒಡನಾಟ.
ಹಂಚಿಕೊಂಡಿರಿ ನನ್ನೊಡನೆ ಸಂತಸದ ಘಳಿಗೆಗಳ
ಮುಚ್ಚಿಟ್ಟಿದ್ದು ಸರಿಯೆ ನಿಮ್ಮ ಯಾತನೆ-ತಳಮಳ?
ವಾಸಿಯಾಗದ ಖಾಯಿಲೆಯಿಂದ ನರಳುತ್ತಿದ್ದರೂ ನೀವು,
ನನ್ನೊಂದು ಸಾಧನೆ ಮರೆಸುತ್ತಿತ್ತು ನಿಮ್ಮೆಲ್ಲ ನೋವು.
ನನ್ನ ಪ್ರಗತಿಯನು ಕಂಡು ಹಿರಿ-ಹಿರಿ ಹಿಗ್ಗಿದ್ದು ನೀವೇ,
ನನಗಿಂತ ಹೆಚ್ಚು ಭವಿಷ್ಯದ ಕನಸು ಕಂಡಿದ್ದೂ ನೀವೇ;
ಬೀಜ ಬಿತ್ತಿ, ನೀರು-ಗೊಬ್ಬರವೆರೆದು ಪೋಷಿಸಿದ ನೀವೇ
ಮರವಾಗುವ ತನಕ ಕಾಯದೇ ಹೋದದ್ದು ನ್ಯಾಯವೇ?
ಇಂದು, ನಾನು ಅಪ್ಪ ಆಗುತ್ತಿರುವ ಸಮಯದಲ್ಲಿ,
ಬರಿಯ ನಿಮ್ಮ ನೆನಪೇ ತುಂಬಿದೆ ನನ್ನ ಮನದಲ್ಲಿ.
ಏಕಿರಬೇಕು ನೀವು ಎಲ್ಲೋ ದೂರದಲ್ಲಿ ದೇವರ ಬಳಿ?
ಬಂದುಬಿಡಿ ಅಪ್ಪ, ನಮ್ಮ ಕಂದನ ರೂಪ ತಾಳಿ!

- Login or register to post comments
- 2254 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪರಿಚಯ
ವೃತ್ತಿಯಿಂದ ನಾನೊಬ್ಬ ಸಾಫ್ಟ್‌ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.



RSS:
ಕಿವಿಯ ನಾಡಿನ ಕವಿಗೆ ಸ್ವಾಗತ!
ಕಿವಿಯ ನಾಡಿನ ಕವಿಗೆ ಸ್ವಾಗತ!
ಚೆನ್ನಿಹುದು ಚೆನ್ನಿಹುದು ಕವನ
ಅಕ್ಕರೆಯ ತಂದೆಗಿದು ನಮನ
ಮಗನಲಾಗಲವನ ಮರುಜನನ!
ಮನೆಯಾಗಲಿ ಸುಖದ ಸದನ
ನಿಮ್ಮವ
ಬೆನಕ
ಕನ್ನಡಪುಟ.ಬ್ಲಾಗ್‍ಸ್ಪಾಟ್.ಕಾಂ.
ನೀವು 'ಅಪ್ಪ' ಆಗುತ್ತಿರುವುದಕ್ಕೆ ಅಭಿನಂದನೆಗಳು!
ಎಲ್ಲಾ ಕಡೆಗೆ 'ಅಪ್ಪನ ಕುರಿತು ಪದ್ಯಗಳನ್ನ ಯಾರೂ ಬರೆದೇ ಇಲ್ಲ' ಅಂತ ಆಡಿಕೊಳ್ಳುತ್ತಿರೋ ಹೊತ್ತಿಗೆ ನಿಮ್ಮ ಕವನ ಅದ್ಭುತವಾಗಿದೆ. ಚಿಕ್ಕ ವಯಸ್ಸಿನಲ್ಲಿ ತಂದೆಯನ್ನ ಕಳೆದುಕೊಂಡ ನಮ್ಮೆಲ್ಲರ ನೋವನ್ನ ಈ ಪದ್ಯದಲ್ಲಿ ಹಿಡಿದು ಹಾಕಿದ್ದೀರಿ.
ನೀವು 'ಅಪ್ಪ' ಆಗುತ್ತಿರುವುದಕ್ಕೆ ಅಭಿನಂದನೆಗಳು!
kaaloo
http://kaalachakra.blogspot.com/