ನನ್ನ ಜನಕ ಆಮ್ಲಜನಕ

— ಟಿ.ಪಿ.ಕೈಲಾಸಂ

ಪ್ರೀತಿಯೇ ಇಲ್ಲದ ಮೇಲೆ..

ಹೊಟ್ಟೆಯೊಳಗೆ ಏನೋ ತಳಮಳ. ಬ್ಲಿಂಕ್ ಆಗ್ತಾ ಇರುವ ಕೆಂಪು ದೀಪ ಫೋನ್ನಲ್ಲಿ ಯಾವುದೋ ಸಂದೇಶ ಇದೆ ಅಂತ ಹೇಳುತ್ತಿತ್ತು. ಮೆಸೇಜ್ ಗುಂಡಿ ಒತ್ತುವಾಗ ಇವಳ ಕೈ ನಡುಗಿತು. ಅವಳೇನಾದರೂ ಕರೆ ಮಾಡಿದ್ದರೇ..ಮತ್ತೊಮ್ಮೆ ಹೊಟ್ಟೇಲಿ ತಿರುವಿ ಹಾಕಿದಂತಾಯಿತು. ತಾನು ಬಸುರಿ ಅನ್ನೋದನ್ನೂ ಕೇರ್ ಮಾಡ್ದೇ ಯಾವ್ದೋ ಕ್ಷುಲ್ಲಕ ಕಾರಣಕ್ಕೆ ಹಿಂದೆ ಅವಳು ಕಟುವಾಗಿ ಬರೆದ ಪತ್ರ ಓದಿ ಪಟ್ಟ ಪಾಡು ನೆನಪಾಯಿತು. ಕೆಲಸಕ್ಕೆ ಬಾರದ ಜಾಹಿರಾತಿನ ಸಂದೇಶ ಕೇಳಿ ಇವಳಿಗೆ ಒಟ್ಟಿಗೆ ದುಃಖ ಹಾಗೂ ನಿರಾಳವಾಯಿತು.

ಆಡುತ್ತಿದ್ದ ಮಕ್ಕಳಲ್ಲಿ ಏನೋ ಜಗಳವಾಗಿ ವಾಸ್ತವಕ್ಕೆ ಬಂದಳು. ಮಕ್ಕಳ ಜಗಳ ಬಿಡಿಸಿ ಬುದ್ಧಿ ಹೇಳಿ ಇವತ್ತು ರಾತ್ರಿ ಸೋದರ ಪ್ರೇಮ ತುಂಬಿರುವ ಕಥೆ ಹೇಳಲು ನಿರ್ಧರಿಸಿದಳು.

ಸಂಜೆಹೊತ್ತಿಗೆ ತಾನು ದುಡುಕಿ ಫೋನ್ ಮಾಡಿದ್ದು ಶುದ್ಧ ಮೂರ್ಖತನದ ಕೆಲಸ ಅಂತ ಇವಳಿಗೆ ತೀವ್ರತರವಾಗಿ ಅನ್ನಿಸತೊಡಗಿತು. ಅವಳನ್ನ ನೋಡಿ ಯುಗ ಯುಗಗಳಾಗಿದೆ! ಈಗ ಯಾಕೆ ಬೇಕಾಗಿತ್ತು ಈ ರಗಳೆಯೆಲ್ಲ? ಎಲ್ಲಾರಿಗೂ ಎಲ್ಲಾದಕ್ಕೂ ಬೆನ್ನು ತಿರುಗಿಸಿ ಹೋದವಳಿಗೆ ಬರುವ ರಜೆಯಲ್ಲಿ ನಮ್ಮೂರಿಗೆ ಮಗಳೊಟ್ಟಿಗೆ ಬರಲಿಷ್ಟ ಪಡುತ್ತೀಯ ಅಂದಷ್ಟೆ ಸಂದೇಶ ಬಿಟ್ಟು ಸಂಪರ್ಕ ಕಡಿದಿದ್ದಳು. ಇನ್ನೇನು ತಾನೆ ಹೇಳಬಹುದಿತ್ತು? ಕರುಳ ಕಿತ್ತು ಕೊಟ್ಟರೆ ಹುರಿ ಹಗ್ಗವೆಂದವಳಿಗೆ ಬೇರೇನು ಹೇಳಬೇಕಾಗಿತ್ತು?

ಮದುವೆಯಾಗಿ ಹೋದ ಮೇಲೆ ಅವಳು ಕಳಿಸಿದ ನಾಯಿಮರಿ ಚಿತ್ರವಿರುವ ಗ್ರೀಟಿಂಗ್ ಕಾರ್ಡ್ ಇವಳ ಮದುವೆಯಾಗುವವರೆಗೂ ಶೋಕೇಸಿನಲ್ಲಿಟ್ಟ ನೆನಪಾಯಿತು.ಜೊತೆಯಲ್ಲೇ ಪಲ್ಲವಿ ಜೋಷಿ ನಟಿಸಿದ್ದ ಇವಳಿಗೆ ತುಂಬ ಮೆಚ್ಚುಗೆಯಾಗಿದ್ದ ಚಿತ್ರ. ಚಿಕ್ಕಂದಿನಲ್ಲಿ ತಾನು ಅಪ್ಪ ಎಂದೇ ನಂಬಿಗೊಂಡಿದ್ದ ಅಮ್ಮನ ಮಿಂಡನೊಬ್ಬನನ್ನು ಬಾಲ್ಯದ ಯಾವುದೋ ನೆನಪುಗಳಿಗೆ ಜೋತು ಬಿದ್ದು ಕಾಣಲು ಹೋಗಿ ಅವನ ಕೈಯಲ್ಲೇ ಕೊಲೆಯಾಗುವ ಯುವತಿಯ ಕಥೆ. ತಾನೂ ಹಾಗೆ...ಇಲ್ಲ ನಾನು ಹಾಗಲ್ಲ...ಅವಳು ಅನುಭವಿಸಿರೋ ಕಷ್ಟದ ಒಂದು ಪರ್ಸೆಂಟ್ ಅನುಭವ ನನಗಿಲ್ಲ ಸ್ವಯಂ ಮರುಕದಿಂದ ತುಂಬಿರುವ ಯೋಚನಾ ಸರಣಿಗೆ ಅಸಹ್ಯ ಪಡುತ್ತ ಹೇಳಿಕೊಂಡಳು.

ಸುಡುಗಾಡು ಯೋಚನೆಗಳು ಅಂತ ತಲೆ ಕೊಡವಿ ಎದ್ದು ಆಟದ ಭರದಲ್ಲಿ ಮಕ್ಕಳು ಕಪಾಟಿನಿಂದ ಬೀಳಿಸಿದ್ದ ಫೋಟೋ ಆಲ್ಬಮ್ ನೋಡಿ ಲೊಚಗುಟ್ಟುತ್ತಾ ಎತ್ತಿಡುವಾಗ ಕಂಡ ಅವನ ಚಿತ್ರ ನೋಡಿ ನಕ್ಕಳು.ಎಲ್ಲಿ ತೆಗೆದಿದ್ದು ಇದು ಮಡಕೇರಿಯಲ್ಲಿ ಅಲ್ವಾ.. ಮದುವೆಯಾಗಿ ಮಗು ಇದ್ರು ನನ್ನ ಬಗ್ಗೆ ತಲೆ ಕೆಡಿಸ್ಕೊಂಡಿದ್ದನಲ್ಲಾ...ಹಿರಿಯಕ್ಕನಂತೆ ಅವನಿಗೆ ಉಪದೇಶಮಾಡಿ ತಲೆ ಸವರಿದ್ದರೂ...ಹಾಗನಿಸಿದ್ದನ್ನ ಗಂಡನ ಬಳಿ ಹೇಳಿಯೂ ಇದ್ದಳು.

ಸಂಜೆ ಓಪ್ರ ವಿನ್ಫ್ರಿಯ ಶೊ ಹಾಕಿದರೆ ಸಿಸ್ಟರ್ಸ್ ಸ್ಪೆಶಲ್ಲು. ಟಕ್ ಅಂತ ಟಿವಿ ಆರಿಸಿ ಉಕ್ಕಿ ಬರುತ್ತಿದ್ದ ಕಣ್ಣೀರಿನಿಂದ ದಿಂಬು ತೋಯಿಸಿದಳು. ಮನದಣಿಯೆ ಅತ್ತು ಸಾಕಾಗಿ ಎನಫ್ ಈಸ್ ಎನಫ್ ಬೇರಾರಿಗೋ ಹೇಳುವಂತೆ ತನಗೆ ತಾನೆ ಹೇಳಿದಳು.ಮನಸ್ಸು ತುಂಬ ಕದಡಿದಾಗ ಇವಳು ಬಳಸುತ್ತಿದ್ದ ಟೆಕ್ನಿಕ್ ಇದು. ಬತ್ತೋಗಿರೋ ಪ್ರೀತಿಯ ಸೆಲೆಯ ಮುಂದೆ ಬಾಯಾರಿಕೆ ಅಂತ ಅತ್ತರೆ ಏನುಪಯೋಗ? ಇಲ್ಲ ಅಂತ ಆಕ್ಸೆಪ್ಟ್ ಮಾಡ್ಕೊಳದನ್ನ ಕಲೀಬೇಕು... .ಐ ಹೆವ್ ಟು ಲರ್ನ್ ಟು ಲೆಟ್ ಗೋ ಹೌದು ಲೆಟ್ ಗೋ..ಬೋಧಿಸಿಕೊಂಡ ನೀತಿ ಪಾಟದಿಂದ ಇವಳ ಮನಸ್ಸು ತುಸು ಹಗುರವಾಯ್ತು. ತನ್ನೆಲ್ಲಾ ಸಂತಾಪದ ಸಲ್ಲಾಪಗಳನ್ನು ತಾಳ್ಮೆಯಿಂದ ಕೇಳಿ ಸಮಾಧಾನಿಸಿದ ಕರುಣೆಯ ಮೂಲ ನೆನೆದು ಭಾವ ತುಂಬಿ ಬಂದು ಅಹಂಕಾರದಿಂದಲ್ಲ ಸಿಟ್ಟಿನಿಂದಲ್ಲ ಪ್ರೀತಿಯಿಂದ ಐ ವಿಲ್ ಲೆಟ್ ಹರ್ ಗೊ...ಅವಳಿಗೆ ಎಲ್ಲ ಒಳ್ಳೇದಾಗ್ಲಿ ಭಗವಂತ ಯಾವಗ್ಲೂ ಅವಳ್ನ ಕಾಪಾಡಪ್ಪ ಅಂತ ಪ್ರಾರ್ಥಿಸಿ ಅವಳ ಫೋನ್ ನಂಬರ್ ಬರೆದಿದ್ದ ಕಾಗದಾನ ನಿಧಾನವಾಗಿ ಹರಿದು ಬಿಸಾಡಿದಳು.

ದೊಡ್ಡ ಬೆಟ್ಟವೊಂದನ್ನು ಕೆಳಗಿಳಿಸಿದಂತೆ ಅನ್ನಿಸಿ ಈಗಂತೂ ಇವಳು ತನ್ನ ಮಾಮೂಲಿನ ಸ್ಥಿತಿಗೆ ಬಂದಳು. ತನ್ನೆಲ್ಲಾ ಕೆಲಸಗಳನ್ನೂ ಎಂದಿನ ಹುರುಪಿನಿಂದಲೇ ಮಾಡಿ ಎರಡು ದಿನಗಳಿಂದ ಇದೇ ವಿಷಯವಾಗಿ ಕಂಗೆಟ್ಟು ಸರಿಯಾಗಿ ಮಾಡದ ನಿದ್ದೆಯನ್ನೆಲ್ಲಾ ಮಾಡಿಬಿಡುವ ನಿರಾಳವಾದ ಮನಸಿನಿಂದ ಮಲಗಿದಳು.ಸುಮಾರು ಹೊತ್ತು ಹೊರಳಾಡಿದ ಮೇಲೆ ಎದ್ದು ಕಸದ ಬುಟ್ಟಿಯಿಂದ ಹರಿದು ಬಿಸಾಡಿದ ಕಾಗದದ ತುಂಡುಗಳನ್ನ ಹೆಣಕಿ ಜೋಪಾನವಾಗಿ ಎತ್ತಿಟ್ಟಳು.

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪ್ರೀತಿಯೇ ಇಲ್ಲದ ಮೇಲೆ..

venkatesh's picture

ಕಥೆಯ ನಿರೂಪಣೆ ಅದ್ಭುತವಾಗಿದೆ. ಇದು ದೀರ್ಘಕಥೆಯ, ಒಂದು ಭಾಗ ಮಾತ್ರ. ಸ್ವಲ್ಪ ಇನ್ನು ವಿವರವಾಗಿ ಬರೆದಿದ್ದರೆ, ಚೆನ್ನಾಗಿತ್ತು. ಕಸದ ಬುಟ್ಟಿಯಿಂದ ಹೆಕ್ಕಿ ಹರಿದ ತುಂಡುಕಾಗದಗಳನ್ನು ಮರು ಸಂಗ್ರಹಮಾಡುವ ವ್ಯಕ್ತಿಯ ಮಾನಸಿಕ ತೊಳಲಾಟವನ್ನು ಚೆನ್ನಾಗಿ ನಿರೂಪಿಸಿದ್ದೀರಿ. ಆದರೆ, ದಿಡೀರ್ ಯೆಂದು ನಿಮ್ಮ ಕಥೆ ಅಂತ್ಯಗೊಳ್ಳುತ್ತದೆ. ಬರೆಯುತ್ತಿರಿ.

ನಿಮ್ಮ ಅನಿಸಿಕೆಯಂತೆ, ನೀವು ಹೇಳಿದಹಾಗೆ, ನಾನು ಮತ್ತೆ ಬರೆಯಲು ಪ್ರಾರಂಭಿಸಿದೆ. ಅದೇ..... ಯೆಂಕ್ಟೇಸಪ್ಪನ್ ಕಂತೆ ಪುರಾಣ !

ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

ಉ: ಪ್ರೀತಿಯೇ ಇಲ್ಲದ ಮೇಲೆ..

Achala Sethu's picture

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು Smiling ಶೋಕ ರಸದ ಮೇಲೆ ಬೇಸ್ ಆಗಿರೋ ಕಥೆಗಳು ಚಿಕ್ಕದಾಗಿದ್ದರೆ ಒಳ್ಳೆಯದಲ್ಲವೇ Smiling

ಉ: ಪ್ರೀತಿಯೇ ಇಲ್ಲದ ಮೇಲೆ..

gurubaliga's picture

ನೀವು ಹೇಳಿದ್ದು ಸರಿ. ಶೋಕ, ಗೋಳು ಇವೆಲ್ಲ ಚಿಕ್ಕದಾಗಿರಬೇಕು.
ನಿಮ್ಮ ಕತೆ ಅಗಾಧ ಕ್ಯಾನ್ವಾಸ್ ಒಂದರ ಇಣಕಿಂಡಿಯಂತೆ ಇದ್ದರೂ ಆ ಎಲ್ಲ ಹೇಳದ ಕತೆಗಳ ಎಳೆಗಳನ್ನು ಅಲ್ಲಲ್ಲಿ ಅವಿತಿಟ್ಟು, ಮುಟ್ಟಿದ ಕೂಡಲೇ ಆ ದಿಸೆಯಲ್ಲಿ ಹರಡಿಕೊಂಡು ಬಿಡುವ ಕೊಲ್ಯಪ್ಸಿಬಲ್ ಅನುಭವವನ್ನು ನೀಡುತ್ತದೆ.
ಇದು ಎದೆ ಬರಿದುಮಾಡುವ ಗೊಣಗಾಟವೂ ಹೌದು.

ಉ: ಪ್ರೀತಿಯೇ ಇಲ್ಲದ ಮೇಲೆ..

venkatesh's picture

ಶೋಕರಸವೂ ಜೀವನ ಪಥದಲ್ಲಿನ ಹೆಜ್ಜೆಗಳಿಗೆ ಶಕ್ತಿಕೊಡುವುದು. ಎಲ್ಲಾರಸಗಳಂತೆ, ಅದೂ ಒಂದು ರಸ. ಹೆಚ್ಚಿನ ಮತ್ವ ಅದಕ್ಕೆ ಸಲ್ಲದು !
ಕನ್ನಡ ನನ್ನ ತಾಯ್ನುಡಿ; ನನ್ನುಸಿರು.

Syndicate content