ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

October 4, 2008 - 11:30am — Chamaraj
Rural Hotel.jpg

ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

ನಮ್ಮ ಕಡೆ ಸಂಯುಕ್ತ ಕರ್ನಾಟಕ ಏಕಮೇವಾದ್ವಿತೀಯ ಪತ್ರಿಕೆಯಾಗಿದ್ದ ಕಾಲವದು. ನಮ್ಮೂರಿಗೆ ಬರುತ್ತಿದ್ದ ಪತ್ರಿಕೆಗಳ ಪೈಕಿ ಸಂ.ಕ.ದ್ದೇ ಸಿಂಹಪಾಲು. ಅದು ಬೆಳಿಗ್ಗೆ ಹತ್ತಕ್ಕೆ ಬಂದರೆ, ಪ್ರಜಾವಾಣಿ ಮಧ್ಯಾಹ್ನ ಮೂರು ಗಂಟೆಗೆ ಬರುತ್ತಿತ್ತು. ಕನ್ನಡಪ್ರಭ ಬಂದರೆ ಬಂತು ಇಲ್ಲವೆಂದರೆ ಇಲ್ಲ. ಹೀಗಾಗಿ, ಸಂ.ಕ. ಬರುವುದನ್ನೇ ಕಾಯುತ್ತ ಹೋಟೆಲ್ ಪಕ್ಕದ ಬಸ್‌ಸ್ಟ್ಯಾಂಡ್‌ನಲ್ಲಿ ಜನ ಕೂತಿರುತ್ತಿದ್ದರು. ಪತ್ರಿಕೆ ಬರುವುದೊಂದೇ ತಡ, ಹೋಟೆಲ್ ಕಾಪಿ ಹಾಕಿದ ಹುಡುಗ, ಊರೊಳಗೆ ಪತ್ರಿಕೆ ಹಂಚಲು ಹೋಗುತ್ತಿದ್ದ. ಇದ್ದ ಒಂದು ಪತ್ರಿಕೆ ಅಷ್ಟೂ ಪುಟಗಳನ್ನು ಹಂಚಿಕೊಂಡು ಜನ ಓದಲು ಗುಂಪುಗುಂಪಾಗಿ ಕೂಡುತ್ತಿದ್ದರು. ಅವರ ಪೈಕಿ ಬಹುತೇಕರು ಅನಕ್ಷರಸ್ಥರು ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಪತ್ರಿಕೆಗಳ ಸುದ್ದಿಗಳೂ ಬಲೇ ತಮಾಷೆಯಾಗಿರುತ್ತಿದ್ದವು. ಅಪರಾಧ ಸುದ್ದಿಗಳಿಗೆ ಎಲ್ಲಿಲ್ಲದ ರೋಚಕತೆ. ಪುಟಗಳು ಹಂಚಿಹೋಗಿರುತ್ತಿದ್ದುದರಿಂದ, ಮುಖ್ಯ ಸುದ್ದಿ ಯಾವುದು ಎಂಬುದು ನಗಣ್ಯವಾಗುತ್ತಿತ್ತು. ಸಿಕ್ಕ ಪುಟದಲ್ಲಿನ ಸುದ್ದಿಗಳನ್ನೇ ಒಬ್ಬ ಜೋರಾಗಿ ಓದುತ್ತ ಹೋಗುತ್ತಿದ್ದ. ಪ್ರತಿಯೊಂದು ಪ್ಯಾರಾಕ್ಕೂ ಆತ ನಿಲ್ಲಲೇಬೇಕು. ಏಕೆಂದರೆ, ಸುದ್ದಿ ಕೇಳುತ್ತಿದ್ದವರ ಕಾಮೆಂಟ್‌ಗಳಿಗೆ ಅವಕಾಶ ಬೇಕಲ್ಲ! ಆಗ (ಈಗ ಕೂಡಾ) ಸಂಯುಕ್ತ ಕರ್ನಾಟಕದ ನ್ಯೂಸ್ ಪ್ರಿಂಟ್ ಗುಣಮಟ್ಟ ಅಷ್ಟಕ್ಕಷ್ಟೇ. ಎರಡು ಕೈಗಳು ಬದಲಾಯಿಸುವುದರಲ್ಲಿ ಪತ್ರಿಕೆಯ ಅಕ್ಷರಗಳು ಮಸುಕಾಗಿ, ಹಾಳೆ ಮುದ್ದೆಯಾಗಿ ಓದುವುದು ಕಷ್ಟವಾಗಿಬಿಡುತ್ತಿತ್ತು. ಆಗ ಬಣ್ಣದ ಮುದ್ರಣ ಬಂದಿದ್ದಿಲ್ಲ. ಅಥವಾ ಸಂ.ಕ. ಅದನ್ನು ಅಳವಡಿಸಿಕೊಂಡಿರಲಿಲ್ಲ. ಚಿತ್ರಗಳೋ ಚುಕ್ಕೆಚುಕ್ಕೆಗಳ ಗುಪ್ಪೆಗಳು. ಆದರೂ, ಅದು ತರುತ್ತಿದ್ದ ಸುದ್ದಿಗಳು ರೋಚಕವಾಗಿರುತ್ತಿದ್ದವು.

ಪತ್ರಿಕೆ ಬಿಡಿಸಿಕೊಂಡು ಮೇಲಿನಿಂದ ಓದಲು ಶುರು ಮಾಡಿದರೆ ಜನ ನಿಶ್ಯಬ್ದವಾಗಿ ಕೇಳುತ್ತಿದ್ದರು. ಅದೇನೋ ಗೊತ್ತಿಲ್ಲ, ಅವತ್ತಿಗೂ ಇವತ್ತಿಗೂ ಸಂ.ಕ.ದ ಬಹುತೇಕ ಸುದ್ದಿಗಳು ’ನಮ್ಮ ಪ್ರತಿನಿಧಿಯಿಂದ’ ಎಂಬ ಒಕ್ಕಣೆಯಿಂದ ಶುರುವಾಗುತ್ತವೆ. ಹೆಡ್ಡಿಂಗ್ ಮುಗಿದ ಕೂಡಲೇ ಕಂಸದಲ್ಲಿ ’ನಮ್ಮ ಪ್ರತಿನಿಧಿಯಿಂದ’ ಎಂಬುದು ಶುರುವಾಗಬೇಕು. ಹಾಗಂದರೇನು ಎಂಬುದು ಆಗ ಗೊತ್ತಿದ್ದಿಲ್ಲ. ಅದರ ನಿಜಾರ್ಥ ತಿಳಿದಿದ್ದೇ ನಾನು ಪತ್ರಿಕೋದ್ಯಮಕ್ಕೆ ಬಂದಾಗ. ತಮ್ಮ ವರದಿಗಾರ ನೀಡಿದ ಸುದ್ದಿಗಳನ್ನೇ ಸಂ.ಕ. ನಮ್ಮ ಪ್ರತಿನಿಧಿಯಿಂದ ಎಂದು ಬಲೇ ಹೆಮ್ಮೆಯಿಂದ ಅಚ್ಚು ಹಾಕಿಕೊಳ್ಳುತ್ತಿತ್ತು. ಅದು ಈಗಲೂ ಇದೆ.

ಅವತ್ತು ಬಂದ ಸುದ್ದಿ ಯಾವುದೋ ಹಳೆಯ ಕ್ರೈಂ. ವಿವಾಹಿತೆಯ ಮೇಲೆ ಅತ್ಯಾಚಾರ ಎಸಗಿದ್ದ ಸುದ್ದಿಯದು. ಕಟ್ಟೆಯ ಮೇಲೆ ಕೂತವ ರಾಗವಾಗಿ ಓದಲು ಶುರು ಮಾಡಿದ: ವಿವಾಹಿತೆಯ ಮೇಲೆ ಅತ್ಯಾಚಾರ ನಮ್ಮ ಪ್ರತಿನಿಧಿಯಿಂದ...

ಅತ್ಯಾಚಾರ ಎಲ್ಲಾಯಿತು, ಹೇಗಾಯಿತು, ಪೊಲೀಸರು ಏನು ಹೇಳುತ್ತಾರೆ, ಇತ್ಯಾದಿ ವಿವರಗಳೆಲ್ಲ ಮುಗಿದ ನಂತರ, ಸಮಾಜ ಕೆಟ್ಟು ಹೋಗುತ್ತಿದೆ, ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ ಎಂಬ ಕಳವಳದೊಂದಿಗೆ ವರದಿ ಮುಕ್ತಾಯವಾಗುತ್ತಿತ್ತು. ಮುಂದಿನ ಸುದ್ದಿಗೆ ಹೋಗುವ ಮುನ್ನ, ಕಟ್ಟೆಯ ಮೇಲೆ ಕೂತವರಿಂದ ಕಾಮೆಂಟ್‌ಗಳು, ಚರ್ಚೆ, ವಾಗ್ವಾದ.

ತಾಕತ್ತಿದ್ದರೆ ಸ್ಪರ್ಧಿಸಿ, ಸಚಿವರಿಗೆ ಪಾಟೀಲ್ ಸವಾಲ್ ನಮ್ಮ ಪ್ರತಿನಿಧಿಯಿಂದ ಗದಗ ಜೂನ್ ೨೯ ಒಂದು ವೇಳೆ ...ರಿಗೆ ನಿಜವಾದ ತಾಕತ್ತಿದ್ದರೆ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಹುಲಕೋಟಿ ಹುಲಿ ಕೆ.ಎಚ್. ಪಾಟೀಲ್ ಕಾಂಗ್ರೆಸ್ ಸಚಿವರಿಗೆ ಸವಾಲು ಹಾಕಿದ್ದಾರೆ. ಖಾಸಗಿ ಸಮಾರಂಭಕ್ಕೆ ಇಲ್ಲಿಗೆ ಆಗಮಿಸಿದ್ದ ಅವರು ಈ ಸವಾಲು ಒಡ್ಡಿದ್ದಾರೆ... - ಹೀಗೆ ಸುದ್ದಿಗಳು ಪುಂಖಾನುಪುಂಖವಾಗಿ ಓದಲ್ಪಡುತ್ತಿದ್ದವು. ಅಲ್ಲಿ ಕೂತ ಯಾರಿಗೂ ಅರ್ಜೆಂಟ್ ಕೆಲಸಗಳಿರುತ್ತಿದ್ದಿಲ್ಲ. ಮಧ್ಯಾಹ್ನದವರೆಗೆ ಸಮಯ ಕಳೆಯುತ್ತಿದ್ದುದೇ ಹೀಗೆ.

ಟಿವಿ ಎಂಬ ವಸ್ತುವಿನ ಅಸ್ತಿತ್ವವೇ ಇಲ್ಲದ, ಟೇಪ್ ರೆಕಾರ್ಡರ್‍ಗಳಿನ್ನೂ ಕಾಲಿಟ್ಟಿರದ ದಿನಗಳಲ್ಲಿ ಪತ್ರಿಕೆಗಳು ಹಾಗೂ ಅವುಗಳಲ್ಲಿ ಬರುತ್ತಿದ್ದ ಚಿತ್ರ-ವಿಚಿತ್ರ ಸುದ್ದಿಗಳು ಹಳ್ಳಿಗಳನ್ನು ಆವರಿಸಿಕೊಂಡಿದ್ದವು. ನನಗೆ ಓದುವ ಆಸಕ್ತಿ ಹುಟ್ಟಿದ್ದೇ ಇವುಗಳಿಂದ. ನಮ್ಮ ಹಳ್ಳಿಯ ಆಚೆ ಬೇರೆಯದೇ ಆದ ಜಗತ್ತಿದೆ ಎಂಬ ಸತ್ಯವನ್ನು ನಿತ್ಯವೂ ಬಿತ್ತರಿಸುತ್ತ, ಆ ಜಗತ್ತನ್ನೊಮ್ಮೆ ಕಾಣಬೇಕೆಂಬ ಹುಚ್ಚನ್ನು ಬಿತ್ತಿದ್ದು ಅವು.

ಇದೆಲ್ಲಾ ಏಕೆ ನೆನಪಾಯಿತೆಂದರೆ, ಇವತ್ತು ನಸುಕಿನಲ್ಲಿ ಹೋದ ಕರೆಂಟ್ ಬೇಗ ಬರಲೇ ಇಲ್ಲ. ಕಂಪ್ಯೂಟರ್ ಗೌರಮ್ಮನಂತೆ ಕೂತಿತ್ತು. ಟಿವಿ ಸತ್ತುಹೋಗಿತ್ತು. ರೇಡಿಯೋದಲ್ಲಿ ಸುದ್ದಿ ಬರುವ ಸಮಯ ಪತ್ತೆ ಹಚ್ಚುವುದೇ ಕಷ್ಟ. ಬಂದರೂ ಅವು ಸರ್ಕಾರಿ ಸುದ್ದಿಗಳು. ಏನು ಮಾಡುವುದು? ಪತ್ರಿಕೆ ಹಾಕುವ ಹುಡುಗನ ದಾರಿ ಕಾಯುತ್ತ ನಿಂತಾಗ ಹಳೆಯ ದಿನಗಳು ಕಣ್ಮುಂದೆ ಸುಳಿದವು. ಹಳ್ಳಿ, ಹೋಟಲ್, ಬಸ್‌ಸ್ಟ್ಯಾಂಡ್ ಹೆಸರಿನ ಸಣ್ಣ ಕಟ್ಟೆ, ಅಲ್ಲಿನ ಜನ, ಅವರ ಸುದ್ದಿ ದಾಹ ಎಲ್ಲಾ ನೆನಪಾಗುತ್ತ ಹೋದವು.

- ಚಾಮರಾಜ ಸವಡಿ

  • ಪ್ರಬಂಧ
~.~
  • Login or register to post comments
  • 475 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 4, 2008 - 7:55pm — ASHOKKUMAR

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

ASHOKKUMAR's picture

ವಿಡಂಬನೆ ಇಷ್ಟವಾಯಿತು. Smiling
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 8:16pm — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಥ್ಯಾಂಕ್ಸ್‌ ಅಶೋಕ್‌. ಹೀಗೇ ಸುಮ್ನೇ ಬರೆದಿದ್ದು.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 9:32pm — Sunil Jayaprakash

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Sunil Jayaprakash's picture

ಏನ್ ಕಾಲ ಬಂತಪ್ಪಾ!!!! Laughing out loud ಈ ಮಹತ್ಕಾರ್ಯವನ್ನು ಎಸಗಿದವರಿಗೆ ಏನು ಶಿಕ್ಷೆಯಾಯಿತು ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 11:10am — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಎಲ್ರೂ ಸಕತ್‌ ಎಂಜಾಯ್‌ ಮಾಡಿದ್ರು. ಶಿಕ್ಷೆಯಾಗಿದ್ದು ಪೇಪರ್‌ಗೆ. ಏಕೆಂದರೆ, ಅಷ್ಟೊಂದು ಜನ ಮುಗಿ ಬಿದ್ದು ಓದಲು ಹೋಗಿ ಪೇಪರ್‌ ಮುದ್ದೆಯಾಗಿಹೋಯ್ತು!

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 9:52pm — shobha.koppad

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

shobha.koppad's picture

ಟೈಟಲ್ ನೋಡಿ ಗಾಬರಿ ಆಯ್ತು Smiling

ಶೋಭಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 4, 2008 - 11:18pm — Nagaraj.G

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Nagaraj.G's picture

ಟೈಟಲ್ ನೋಡಿ ಎಲ್ಲೋ ಸಂಪದ ಬಳಗದವರಿಂದ ಅತ್ಯಾಚಾರ ಅಂದುಕೊಂಡು ಗಾಬರಿಪಟ್ಟೆ.
ನಾಗರಾಜ್. ಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 11:09am — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಛೇ ಛೇ, ಸಂಪದಿಗರು ಹಾಗೆಲ್ಲ ಮಾಡೋದಿಲ್ಲ ಬಿಡಿ. ಒಂದು ವೇಳೆ ಮಾಡಿದರೂ ಬ್ಲಾಗ್‌ನಲ್ಲಿ ಬರೀತಾರೆ.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 10:16pm — Nagaraj.G

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Nagaraj.G's picture

ಲೇಖನ ತುಂಬಾ ಚೆನ್ನಾಗಿದೆ ಕಣ್ರೀ......
ನಮ್ಮ ಸ್ಕೂಲಲ್ಲಿ ನಾನು ಸಹ ಇದೆ ತರ ಪ್ರೇಯರ್ ಮಾಡಿದ ನಂತರ ಪೇಪರ್ ಗಟ್ಟಿಯಾಗಿ ಓದುತ್ತಿದ್ದೆ.
ನಾಗರಾಜ್. ಜಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 7:41pm — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಥ್ಯಾಂಕ್ಸ್‌ ನಾಗರಾಜ್‌. ಬಹುಶಃ ನೀವೂ ಎಲ್ಲ ಅಪರಾಧಗಳನ್ನು ಮಾಡಿಯೇ ಹೊರಬಂದ ಹಾಗೆ ಕಾಣ್ತದೆ Smiling

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 11:08am — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಟೈಟಲ್‌ ಬಗ್ಗೆ ಪ್ರತಿಕ್ರಿಯೆ ಆಯ್ತು. ಲೇಖನದ ಬಗ್ಗೆ ಏನೂ ಹೇಳಲೇ ಇಲ್ಲ?

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 6:01pm — siddharam

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

siddharam's picture

ನಿಮ್ಮ ಲೇಖನಗಳು ವಿಶೇಷವಾಗಿ, ಆಕರ್ಷಣೀಯವಾಗಿರುತ್ತವೆ. ಸಂಯುಕ್ತ ಕರ್ನಾಟಕ ಎಷ್ಟು ಹಳೆಯದಾದರೂ, ಉತ್ತರ ಕರ್ನಾಟಕದಲ್ಲಿ ಅದು ಕೆಲ ಖಾಯಂ ಓದುಗರಿಗೆ ರೋಮಾಂಚನ ನೀಡುವುದಂತೂ ನಿಜ! ಕೆಲವರಿಗೆ ಜೋರಾಗಿ ಓದಿದರೇ ಅರ್ಥವಾಗುವುದು ಎಂಬುದೂ ವಿಚಿತ್ರವಲ್ಲವೇ? ನಮ್ಮ ಪ್ರತಿನಿಧಿಯಿಂದ!
-ಸಿದ್ಧರಾಮ ಹಿರೇಮಠ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 5, 2008 - 7:52pm — Chamaraj

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

Chamaraj's picture

ಅಭ್ಯಾಸ ಬಲ ಅಲ್ಲವೇ ಸಿದ್ಧರಾಮ ಅವರೇ. ಸಂಯುಕ್ತ ಕರ್ನಾಟಕ ಬದಲಾಗಿಲ್ಲ ಎಂಬ ಖುಷಿಗಿಂತ ಬದಲಾಗಿದ್ದರೆ ಚೆನ್ನಿತ್ತು ಎಂಬ ಅನಿಸಿಕೆಯೇ ಹೆಚ್ಚು. ಜಡ್ಡುಗಟ್ಟಿದ ಅಭಿಪ್ರಾಯಗಳು, ಏಕಪಕ್ಷೀಯ ನಿಲುವು, ಪಕ್ಷಪಾತ ಇನ್ನೂ ಹಾಗೇ ಇವೆ. ಪುಟ ವಿನ್ಯಾಸವಂತೂ ದೇವರಿಗೇ ಪ್ರೀತಿ. ಈಗ ಅದರ ಸ್ಮರಣೆ ಏನಿದ್ದರೂ, ಹಿಂದೆ ಅದು ಮಾಡಿದ ಉತ್ತಮ ಕೆಲಸಕ್ಕಾಗಿ ಮಾತ್ರ.

- ಚಾಮರಾಜ ಸವಡಿ
http://chamarajsavadi.blogspot.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 6, 2008 - 2:54pm — siddharam

ಉ: ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

siddharam's picture

ನೀವು ಹೇಳುವುದೂ ನಿಜ ಚಾಮರಾಜ, ಬದಲಾವಣೆ ಬೇಕು. ಹಳೆಯದನ್ನೂ ಮರೆಯುವಂತಿಲ್ಲ ಅಲ್ಲವೇ? ಹಿಂದಿನ ದಾರಿ ಅರಿತಲ್ಲದೆ, ಮುಂದಿನ ದಾರಿಯನ್ನು ಅರಿಯಲಾಗದು ಎಂದು ಶರಣರೇ ಹೇಳಿದ್ದಾರಲ್ಲ! ಹಳೆಯದನ್ನು ಅರಗಿಸಿಕೊಳ್ಳುತ್ತಲೇ ಹೊಸದು ಸೃಷ್ಟಿಯಾಗಬೇಕು ಏನಂತೀರಾ?
-ಸಿದ್ಧರಾಮ ಹಿರೇಮಠ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ
  • ಸು‌ದ್ದಿ ಪ್ರಸಾರದಲ್ಲಿ ಎಡವುವ ಪತ್ರಿಕೆ...
  • ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ
  • ಇದೇನಾ ಪತ್ರಿಕೋದ್ಯಮ?
  • ವಿಜಯ ಕರ್ನಾಟಕದ ಅಂತರ್ಜಾಲ ಆವೃತ್ತಿ
Syndicate content

ಲೇಖಕರು

Chamaraj's picture

ಪೂರ್ಣ ಹೆಸರು
ಚಾಮರಾಜ ಸವಡಿ

ಪರಿಚಯ

ವೃತ್ತಿಯಿಂದ ಪತ್ರಕರ್ತ. ಸದ್ಯ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ ಕೆಲಸ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.

ನನ್ನ ಬ್ಲಾಗ್‌: http://chamarajsavadi.blogspot.com

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಮುಂಬೈನ, ಟಾಜ್, ಒಬೆರಾಯ್ ಹೋಟೆಲ್ ಗಳು, ನಾರಿಮನ್ ಹೌಸ್, ಹಾಗೂ ಸಿ.ಎಸ್. ಟಿ, ಕಾಮಾ ಆಸ್ಪತ್ರೆ,ಗಳಲ್ಲಿ ಆದ ನರಮೇಧ, ಹಾಸ್ಟೇಜಸ್ ಗಳ ಆಕ್ರಂದನಗಳಿಂದಲೂ ಪಾಠಕ
  • ಹಿರಿಯರ ಆಸೆ
  • ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
  • ಸ್ಥಿತಪ್ರಜ್ಞ
  • ಕಾಡುಹಂದಿ ಮತ್ತು ಮೈಕಲ್ ಜಾಕ್ಸನ್!
  • ರಾಕೆಟ್, ಟೆಲಿಸ್ಕೋಪ್ ಸಂಶೋಧನೆಯಾಗುವ ಮುಂಚೆಯೇ ಭಾರತೀಯರಿಗೆ ತಿಳಿದ್ದಿದ್ದವೇ?
  • ಇತಿಹಾಸದಿಂದ ಪಾಠ ಕಲಿಯದೇ..ಭವಿಷ್ಯದಲ್ಲಿ ನಾವು ಇತಿಹಾಸ ನಿರ್ಮಿಸಬಲ್ಲೆವೇ?

ಇತ್ತೀಚಿನ ಪ್ರತಿಕ್ರಿಯೆಗಳು

  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
  • ಗಣೇಶ
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:42am
  • kalpana
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:41am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 164 ಅತಿಥಿಗಳು ಆನ್ಲೈನ್ ಇರುವರು.


ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು

— ಭಾಗವತ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator