ಅಲ್ಲಿ ಮೈದಳೆದಿತ್ತು ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ. ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ- ಇವೆಲ್ಲವನ್ನೂ ಚಿತ್ರ-ಚಿತ್ತಾರದ ಮೂಲಕ ಅನಾವರಣಗೊಳಿಸಿತು ಬೀಜಿಂಗ್ ಒಲಂಪಿಕ್ಸ್. ಸಂಜೆಯಾಗುತ್ತಿದ್ದಂತೆ, ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಹಕ್ಕಿ ಗೂಡೊಂದು ಬೆಳಕಿನ ಕಣ್ತೆರೆಯಿತು. ೨೯ನೇ ಒಲಂಪಿಕ್ ಉದ್ಘಾಟನೆಗೊಂಡಿತು.
ಇಡೀ ಜಗತ್ತೇ ಅಲ್ಲಿ ನೆರೆದಿತ್ತು. ಜಗದ ಎಲ್ಲ ಸೊಗಸನ್ನೂ ತನ್ನೊಳಗೆ ಹೊಂದಿದ ಸಂಭ್ರಮದೊಂದಿಗೆ ಬೀಜಿಂಗ್‌ನ ’ಹಕ್ಕಿ ಗೂಡು’ ಹೆಸರಿನ ರಾಷ್ಟ್ರೀಯ ಕ್ರೀಡಾಂಗಣ ಕಂಗೊಳಿಸಿತು. ಬಾನಂಗಳದಲ್ಲಿ ಥೇಟ್ ಹಕ್ಕಿ ಗೂಡು ಮಾದರಿಯ ಬಾಣಬಿರುಸುಗಳು ಬೆಳಗುತ್ತಿದ್ದಂತೆ, ಚೀನೀ ಪ್ರಧಾನಿ ಹೂ ಜಿಂಟಾವೊ ೨೯ನೇ ಒಲಂಪಿಕ್ ಉದ್ಘಾಟನೆ ಘೋಷಿಸಿದರು.
ಮುಂದೆ ಮೊಳಗಿದ್ದು ಬಾಣ ಬಿರುಸು, ಕೇಳಿದ್ದು ಹರ್ಷೋದ್ಗಾರ, ಬೆಳಗಿದ್ದು ಚೀನಾದ ೫೦೦೦ ವರ್ಷಗಳ ಅದ್ಭುತ ಪರಂಪರೆ. ಮನುಷ್ಯ ಈ ಪರಿಯ ಪರಿಪೂರ್ಣತೆಯನ್ನು ಮೈಗೂಡಿಸಿಕೊಳ್ಳಬಲ್ಲನೆ? ಎಂಬ ಅಚ್ಚರಿ ಹುಟ್ಟಿಸುವಂತೆ ಮೂರೂವರೆ ಸಾವಿರ ಕಲಾವಿದರು ಅದ್ಭುತ ಕಲಾ ನೈಪುಣ್ಯತೆ ಮೆರೆದರು. ಒಂದಕ್ಕಿಂತ ಒಂದು ಅಚ್ಚರಿ. ಒಂದಕ್ಕಿಂತ ಒಂದು ಅಪೂರ್ವ. ನೆರಳು, ಬಣ್ಣ, ಬೆಳಕಿನಾಟದಲ್ಲಿ ಬೆಳಗಿದ ಕ್ರೀಡಾಂಗಣದಲ್ಲಿ ನಡೆದ ಚಮತ್ಕಾರಿ ಪ್ರದರ್ಶನವನ್ನು ಜಗತ್ತು ಎವೆಯಿಕ್ಕದೇ ವೀಕ್ಷಿಸಿತು. ಚಕಿತಗೊಂಡಿತು. ಮುದಗೊಂಡಿತು. ಮೆಚ್ಚಿ ಹರ್ಷೋದ್ಗಾರ ಮಾಡಿತು.
ಜಗತ್ತಿನ ನೂರು ದೇಶಗಳ ಪ್ರಧಾನಿ, ಅಧ್ಯಕ್ಷರುಗಳು ಅಲ್ಲಿ ನೆರೆದಿದ್ದರು. ರಾಜಕೀಯ ಮರೆತು, ಸಣ್ಣತನವನ್ನು ತಾತ್ಕಾಲಿಕವಾಗಿ ತೊರೆದು, ಥೇಟ್ ಬೆರಗುಗಣ್ಣಿನ ಪ್ರೇಕ್ಷಕರಂತೆ ಉದ್ಘಾಟನಾ ಸಮಾರಂಭ ವೀಕ್ಷಿಸಿದರು. ಮೈಮರೆತರು. ಮೆಚ್ಚಿ ಚಪ್ಪಾಳೆ ತಟ್ಟಿದರು. ಸುಮಾರು ೨೦೫ ರಾಷ್ಟ್ರಗಳ ೧೦,೭೦೮ ಕ್ರೀಡಾಪಟುಗಳು ಸೇರಿದಂತೆ ಸುಮಾರು ೯೦ ಸಾವಿರ ಜನರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ನೇರ ಸಾಕ್ಷಿಯಾದರು. ಇನ್ನು ಟಿವಿ ಮೂಲಕ ಭೂಮಂಡಲದ ಈ ಅದ್ಭುತ ಕಾರ್ಯಕ್ರಮವನ್ನು ವೀಕ್ಷಿಸಿದವರು ಅದೆಷ್ಟು ನೂರು ಕೋಟಿಯೋ.
ಸುಮಾರು ಮೂರೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮ ಹಳೆ ಮತ್ತು ಚೀನಾವನ್ನು ಜಗದೆದುರು ತೆರೆದಿಟ್ಟಿತು. ಮಹಿಳೆಯರು, ಮಕ್ಕಳೂ ಸೇರಿದಂತೆ ೧೫ ಸಾವಿರ ಕಲಾವಿದರು ಕರಾರುವಾಕ್ಕಾಗಿ, ಚ್ಯುತಿ ತಪ್ಪದಂತೆ ತಮ್ಮ ಕೌಶಲ್ಯ ಪ್ರದರ್ಶಿಸಿದರು. ಒಲಂಪಿಕ್ ಅರ್ಥ ಸಾರುವ ವರ್ತುಲಗಳಿಗೆ ವಿದ್ಯುತ್ ದೀಪಗಳು ಜೀವ ತುಂಬಿದವು. ಆಗಸಕ್ಕೆ ಚಿಮ್ಮಿದ ಬಾಣ ಬಿರುಸುಗಳು ರಾತ್ರಿಯನ್ನು ಹಗಲು ಮಾಡಿದವು.
ಇನ್ನು ಹದಿನಾರು ದಿನಗಳ ಕಾಲ ಇಡೀ ಜಗತ್ತು ತನ್ನ ಜಂಜಡವನ್ನು ಮರೆಯುವುದು. ಕ್ರೀಡಾಭಿಮಾನ ಮೆರೆಯುವುದು. ಹೆಸರೇ ಕೇಳಿರದ ದೇಶಗಳ ಕ್ರೀಡಾಪಟುಗಳ ಸಾಧನೆ ಕಂಡು ನಿಬ್ಬೆರಗಾಗುವುದು. ಕುಣಿದು ಕುಪ್ಪಳಿಸುವುದು. ಮನುಕುಲದ ಶ್ರೇಷ್ಠ ಸಾಧನೆಯನ್ನು ಮೆರೆದು ಹೊರ ಭರವಸೆ, ವಿಶ್ವಾಸ ಹಾಗೂ ಸೋದರತ್ವ ಮೆರೆಯುವುದು.
ಬೀಜಿಂಗ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಈ ಎಲ್ಲ ಆಶಯಗಳಿಗೆ ಬರೆದ ಮುನ್ನುಡಿ.
- ಚಾಮರಾಜ ಸವಡಿ

- Login or register to post comments
- 506 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
ಲೇಖಕರು
ಪೂರ್ಣ ಹೆಸರು
ಚಾಮರಾಜ ಸವಡಿ
ಪರಿಚಯ
ಹುಟ್ಟಿ ಹತ್ತನೇ ತರಗತಿಯವರೆಗೆ ಬೆಳೆದಿದ್ದು ಕೊಪ್ಪಳ ಜಿಲ್ಲೆ ಅಳವಂಡಿ ಎಂಬ ಸಾಧಾರಣ ಊರಿನಲ್ಲಿ. ಓದಿದ್ದಕ್ಕೂ ಮಾಡುತ್ತಿರುವ ಕೆಲಸಕ್ಕೂ ಸಂಬಂಧವಿಲ್ಲ. ಹಲವಾರು ಕೆಲಸಗಳನ್ನು ಮಾಡಿದ ನಂತರ ಇಷ್ಟವಾಗಿ ಉಳಿದುಕೊಂಡಿದ್ದು ಪತ್ರಿಕೋದ್ಯಮದಲ್ಲಿ. ಓದುವುದು ಮತ್ತು ಬರೆಯುವುದು ಅಂದ್ರೆ ಇಷ್ಟ.
ನನ್ನ ಕನ್ನಡ ಬ್ಲಾಗ್: http://chamarajsavadi.blogspot.com
ಇಂಗ್ಲಿಷ್ ಬ್ಲಾಗ್: http://dailyeditor.blogspot.com




RSS:
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಕ್ರೀಡಾಳುಗಳಿಗಾಗಿ ಇರುವ ಮುನ್ನೂರು ಬಂಗಾರದ ಪದಕಗಳಲ್ಲಿ ಭಾರತಕ್ಕೆ ಒಂದಾದರೂ ಸಿಕ್ಕುವುದೇ?
*ಅಶೋಕ್
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
’ಬೀಜಿಂಗ್ ಒಲಂಪಿಕ್ಸ್ ಉದ್ಘಾಟನಾ ಸಮಾರಂಭ ಈ ಎಲ್ಲ ಆಶಯಗಳಿಗೆ ಬರೆದ ಮುನ್ನುಡಿ.” ಸರಿಯಾಗಿ ಹೇಳಿದಿರಿ. ಭಾರತಕ್ಕೆಮಾತ್ರ ಯಥಾಪ್ರಕಾರ ಹಳೆಯಹಾಡಿನ ಪುನರಾವರ್ತನೆ !" ಈ ಬಾರಿ ಹಾಗಾಗದಿರಲಿ, ರಾಥೋಡರೆ, ಸ್ವಲ್ಪ ಮುನ್ನುಗ್ಗಿ."
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಟೆನ್ನಿಸ್ ನಲ್ಲಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಜೋಡಿಯೂ ಇದೆ...
ಆದ್ರೆ ಈ ಸಲ ಶೂಟರ್ಸ್ ಮತ್ತು ಬಾಕ್ಸಿಂಗ್ ಟೀಮ್ಗಳು ಚೆನ್ನಾಗಿದೆ ಅಂತ ಸುದ್ಧಿಯಲ್ಲಿ ಓದಿದ ನೆನಪು...
ನೋಡೋಣ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಲೇಖನ ಬರೆವಾಗ ಅಂಥದೊಂದು ದೂರದ ಭರವಸೆ ಇತ್ತು. ಆದರೆ, ಪ್ರತಿಕ್ರಿಯೆ ಬರೆಯುತ್ತಿರುವ ಈ ಸಮಯದಲ್ಲಿ ಅದಾಗಲೇ ಆವಿಯಾಗಿ ಹೋಯ್ತು.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಬರೀ ಆಶಯದಿಂದ ಪದಕ ಬರೋದಿಲ್ವಲ್ಲ ಸರ್. ಅದಕ್ಕೆ ಬೇಕಾದ ತಯಾರಿ ಮಾಡಿಲ್ಲ ಎಂಬುದೇ ಬೇಸರ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ನಾನು ಕನಿಷ್ಠ ಮೂರು ಚಿನ್ನದ ಪದಕಗಳು ಬರುತ್ತೆ ಅಂತ ಅಂದ್ಕೊಂಡಿದ್ದೀನಿ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ನನಗಂತೂ ಅನುಮಾನ. ಬಂದರೆ, ತುಂಬ ಖುಷಿಯಾಗುತ್ತೆ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅಭಿನವ್ ಬಿಂದ್ರ ಚಿನ್ನದ ಪದಕ ಗೆದ್ದನಲ್ಲ...
ಸಿಂಗಲ್ ಈವೆಂಟ್ ನಲ್ಲಿ ಭಾರತದ ಮೊದಲ ಚಿನ್ನದ ಪದಕ ಗೆದ್ದ ಎಂಬ ಹೆಗ್ಗಳಿಕೆ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ನಿಜ ಅನಿಲ್, ಬಿಂದ್ರಾ ಬಂಗಾರ ತಂದ್ರು. ನೀವು ಬರೆದಂತೆ ಮೂವರು ಬಾಕ್ಸರ್‌ಗಳು ಕ್ವಾರ್ಟರ್ ಫೈನಲ್‌ಗೆ ಬಂದಿದ್ದಾರೆ. ನಿಜಕ್ಕೂ ಸಂತಸ ತಂದ ಬೆಳವಣಿಗೆ. ಪದಕದ ಪಟ್ಟಿಯಲ್ಲಿ ಭಾರತದ ಹೆಸರು ನೋಡದಿದ್ದರೆ ತೀರಾ ವಿಷಾದ ಎನಿಸುತ್ತದೆ. ಈ ಸಾರಿ ಹಾಗಾಗದ್ದು ತುಂಬ ಖುಷಿ ತಂದಿದೆ.
ನಿಮ್ಮ ಭರವಸೆ ಮತ್ತು ಭವಿಷ್ಯ ಎರಡೂ ನಿಜವಾದವು. ಅಭಿನಂದನೆಗಳು.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಚಾಮರಾಜ್,
ಭಾರತದ ಮೂರೂ ಬಾಕ್ಸರ್ ಗಳು ಸೆಮಿಫೈನಲ್ಸ್ ತಲುಪಿದರೆ ಚೆನ್ನ...
ನನ್ನ ಆಶೆ ಭಾರತಕ್ಕೆ ಬಾಕ್ಸಿಂಗ್ ನಲ್ಲಿ ಚಿನ್ನ, ಬೆಳ್ಳಿ ಹಾಗು ಕಂಚು ಪದಕಗಳೂ ಲಭ್ಯವಾಗಬೇಕು ಅಂತ... ಭಾರತದ ಯಾವುದೇ ವ್ಯಕ್ತಿ ಗೆದ್ದರೂ ಸಂತಸವೇ...
ಸಧ್ಯದ ಪರಿಸ್ಥಿತಿಯಲ್ಲಿ ನಮ್ಮ ದೇಶದ ಬಾಕ್ಸರ್ಸ್ ಒಳ್ಳೆ ಫಾರ್ಮ್ ನಲ್ಲಿದ್ದಾರೆ...
ನೋಡೋಣ... ಪ್ರಯತ್ನ ಅವರದು, ಮಿಕ್ಕಿದ್ದು ಆ ದೇವರಿಗೆ ಬಿಟ್ಟಿದ್ದು...
ಏನಂತೀರ?
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಇದಕ್ಕೆ ಪ್ರತಿಕ್ರಿಯೆ ನೀಡುವ ಸಮಯದಲ್ಲಿ ಅಖಿಲ್ ಕ್ವಾರ್ಟರ್ ಫೈನಲ್‌ನಿಂದ ಹೊರಬಿದ್ದಿದ್ದಾರೆ. ಇನ್ನುಳಿದ ಇಬ್ಬರು ಏನು ಮಾಡುತ್ತಾರೋ ನೋಡಬೇಕು. ಆದರೂ ಬಾಕ್ಸರ್‌ಗಳದು ಉತ್ತಮ ಹೋರಾಟ. ಮೆಚ್ಚುವಂಥ ಪ್ರಗತಿ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಹೌದು. ತುಂಬಾ ಬೇಸರವಾಯ್ತು...

ಆದ್ರೂ ಹೋರಾಡಿ ಸೋತಿದ್ದಾನೆ ಅಖಿಲ್... ಇಂದು ಅವನ ದಿನವಾಗಿರಲಿಲ್ಲ... ಅಷ್ಟೆ...
ಉಳಿದಿಬ್ಬರ ಪಂದ್ಯ ಬುಧವಾರ ಇದೆ... ಕಾದು ನೋಡೋಣ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ವಿಜಯೇಂದ್ರ ಕುಮಾರ್ ಸೆಮಿಫೈನಲ್ಸ್ ಗೆ ತಲುಪಿದ್ದಾನೆ... ಕಂಚಿನ ಪದಕವಂತೂ ಗ್ಯಾರಂಟಿ...


ಜೀತೇಂದ್ರ ಕುಮಾರ್ ಗೆ ವೀರೋಚಿತ ಸೋಲು...
ಕುಸ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕ...
ಇಂತಿ ನಿಮ್ಮ ಪ್ರೀತಿಯ,
ಅನಿಲ್ ರಮೇಶ್.
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಅನುಮಾನ. ಕ್ರಿಕೆಟ್ ಸನ್ನಿಯಲ್ಲಿರುವ ಭಾರತ ಉತ್ತಮ ಕ್ರೀಡಾಪಟುಗಳ ಹೆಸರನ್ನೂ ಗುರುತಿಸುವುದಿಲ್ಲ. ಮಾಧ್ಯಮಗಳೂ ಇದಕ್ಕೆ ಹೊರತಲ್ಲ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಪೇಸ್-ಭೂಪತಿ ಜೋಡಿಯನ್ನು ಮರೆತಿರೇಕೆ?ಗೆಲ್ಲೋದಿಲ್ಲ ಅಂತೀರಾ?
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ತುಂಬ ನಿರೀಕ್ಷೆ ಇಟ್ಟುಕೊಂಡು ನಿರಾಶರಾಗೋದು ಬೇಡ ಅಂತ ಬರೀಲಿಲ್ಲ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
’ಹಕ್ಕಿಗೂಡಿನಲ್ಲಿ ವಿಶ್ವದಗೆಳೆಯರಿಗೆ ಆದರದ , ಸಂಭ್ರಮದ, ಸ್ವಾಗತಸಮಾರಂಭ, ’ ಅಂತ ಬರೀಬಹುದಲ್ಲವೆ !
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಖಂಡಿತ ಬರೀಬಹುದು.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಜಂಜಡಗಳಲ್ಲಿ ಮುಳುಗಿ ಹೋದ ಇಡೀ ವಿಶ್ವ ಒಮ್ಮೆ ಮೈ ಕೊಡವಿಕೊಂಡು ಉಲ್ಲಸಿತವಾಗುವ ಕ್ಷಣವಿದು. ಈ ಹದಿನಾರು ದಿನಗಳು ನಮ್ಮಲ್ಲಿ ಮನುಷ್ಯನ ಸಾಧನೆ, ಹುಮ್ಮಸ್ಸು, ಉತ್ಸಾಹ, ಯೌವನದ ನೋಟಿಸ್ ಬೋರ್ಡ್ ಆಗಲಿ
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಭಾರತದ ಪದಕ ನಿರೀಕ್ಷೆ ಬಿಟ್ಟು ವೀಕ್ಷಿಸಿದರೆ ನಿಜಕ್ಕೂ ಒಲಿಂಪಿಕ್ಸ್ ಅಮೋಘ ಕ್ರೀಡಾಕೂಟವೇ.
- ಚಾಮರಾಜ ಸವಡಿ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
"ಐದು ಸಾವಿರ ವರ್ಷಗಳ ಪರಂಪರೆ. ಜಗತ್ತಿಗೆ ಹಲವಾರು ಪ್ರಥಮ ಶೋಧಗಳನ್ನು ನೀಡಿದ ಸ್ಮರಣೆ, ಕಳೆದೊಂದು ದಶಕದಿಂದ ತಾನು ಮೈಗೂಡಿಸಿಕೊಂಡಿರುವ ಆರ್ಥಿಕ ತಾಕತ್ತು, ವಿಜೃಂಭಿಸುತ್ತಿರುವ ಕ್ರೀಡಾ ಸಾಮರ್ಥ್ಯ", ಇವೆಲ್ಲದರ ಜೊತೆಗೆ ಚೀನೀಯರ ಛಲ, ಪರಿಶ್ರಮ ನಿಜಕ್ಕೂ ಮೆಚ್ಚುವಂತದ್ದೇ, ಬೆರಗುಮೂಡಿಸುವಂತದ್ದೇ!!
Corruption ಅವರಲ್ಲೂ ಇರಬಹುದು, ಆದರೆ ಅದನ್ನು ಮೀರಬಲ್ಲ ಛಲ, ಪರಿಶ್ರಮಗಳೆರಡೂ ಏನನ್ನು ಬೇಕಾದರೂ ಮಾಡಬಹುದೆಂಬುದಕ್ಕೆ ಸ್ಫೂರಕವಾಗಿದೆ. ನಾವು ಅವರಿಂದ ಕಲಿಯಬೇಕಾದದ್ದು ಬಹಳಷ್ಟಿವೆ.
ವಂದನೆಗಳೊಂದಿಗೆ,
ರವಿಶಂಕರ
ಉ: ಹಕ್ಕಿಗೂಡಿನಲ್ಲಿ ಕಣ್ತೆರೆಯಿತು ಒಲಿಂಪಿಕ್ಸ್
ಇಪ್ಪತ್ತು ವರ್ಷಗಳ ಹಿಂದೆ ಚೀನಾ ಕೂಡ ಭಾರತದಷ್ಟೇ ದುಃಸ್ಥಿತಿಯಲ್ಲಿತ್ತು. ಹಾಗೆ ನೋಡಿದರೆ, ಸೈನಿಕ ಶಕ್ತಿ ಹೊರತುಪಡಿಸಿ, ಬಹುತೇಕ ವಿಷಯಗಳಲ್ಲಿ ನಮಗಿಂತ ಕೆಟ್ಟ ಸ್ಥಿತಿಯಲ್ಲಿತ್ತು. ಆದರೆ, ಕಳೆದ ಎರಡು ದಶಕದಲ್ಲಿ ಚೀನಾ ಸಾಧಿಸಿದ್ದು ಅದ್ಭುತ ಪ್ರಗತಿ. ಅಲ್ಲಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ದಮನ ಮಾಡಲಾಗುತ್ತಿದೆ ಎಂಬ ಗಂಭೀರ ಲೋಪ ಹೊರತುಪಡಿಸಿದರೆ, ಇತರ ಪ್ರಗತಿಯನ್ನು ಅಲ್ಲಗಳೆಯುವಂತಿಲ್ಲ. ಕಡೇ ಪಕ್ಷ, ಅವರಿಂದ ಕಲಿಯುವಂಥದ್ದನ್ನಾದರೂ ನಾವು ಕಲಿಯಬಹುದಲ್ಲ?
ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅವರು ಆಯೋಜಿಸಿದ ರೀತಿ ಇಂತಹ ನಿರ್ಧಾರಗಳಿಗೆ ಪ್ರೇರಣೆ ನೀಡಿದರೆ, ಭಾರತದ ಪಾಲಿಗೆ ಅದೇ ದೊಡ್ಡ ಪದಕ.
- ಚಾಮರಾಜ ಸವಡಿ