ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ಬಾಬಾ ತೆರೆದದ್ದು ಒಂದೇ ಕಣ್ಣೇ?!

July 22, 2008 - 9:19am — nagenagaari

(ನಗೆ ನಗಾರಿ ಆಧ್ಯಾತ್ಮ ಬ್ಯೂರೋ)

ಬೆಂಗಳೂರಿನ ಬಸವನಗುಡಿಯ ಸಮೀಪದ ಗವಿಗಂಗಾಧರೇಶ್ವರ ನಗರದ ಮನೆಯೊಂದರಲ್ಲಿ ವಿಸ್ಮಯ ನಡೆದಿರುವುದು ವರದಿಯಾಗಿದೆ. ಶಿರಡಿ ಸಾಯಿ ಬಾಬಾರ ಮಣ್ಣಿನ ಮೂರ್ತಿಯೊಂದು ಸರಿಯಾಗಿ ಗುರುವಾರದ ಗುರು ಪೌರ್ಣಮಿಯಂದು ಎಡಗಳನ್ನು ತೆರೆದಿದೆ! ಅದನ್ನು ಸಾಯಿಬಾಬಾ ಕೃಪಾಕಟಾಕ್ಷ ಎಂದುಕೊಂಡು ಭಕ್ತರು ದಾಂಗುಡಿ ಇಡುತ್ತಿದ್ದಾರೆ, ನಾಸ್ತಿಕರು ಉಡಾಫೆಯಿಂದಲಾದರೂ ಒಮ್ಮೆ ನೋಡಿಕೊಂಡು ಬರಲು ಸಾಲು ನಿಂತಿದ್ದಾರೆ. ಟಿವಿ ಚಾನಲ್‌ಗಳು ಸಿಕ್ಕಿತೆಮಗಿಂದು ರಸಗವಳ ಎಂದುಕೊಂಡು ನಾಲ್ಕು-ಐದು ತಾಸು ತಮ್ಮನ್ನು ಹರಾಜು ಹಾಕಿಕೊಂಡಿವೆ. ಪತ್ರಿಕೆಗಳು ಜನಮರುಳೋ, ಜಾತ್ರೆ ಮರುಳೋ ಸಂಪಾದಕರಿಗೆ ಮರುಳೋ ತಿಳಿಯದೆ ಕಂಗಾಲಾಗಿವೆ. ಈ ಮಧ್ಯೆ ಸುದ್ದಿಯ ಆಜುಬಾಜುಗಳನ್ನು ತಡಕಿ ವರದಿ ಮಾಡುವ ನಗೆ ಸಾಮ್ರಾಟರು ಸಾಯಿ ಬಾಬಾ ತೆರೆದದ್ದು ಒಂದೇ ಕಣ್ಣನ್ನೇ? ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಾಯಿಬಾಬಾ ಒಂದೇ ಕಣ್ಣು ತೆರೆದದ್ದು ಏಕೆ ಎಂದು ತಮ್ಮೆರಡು ಕಣ್ಣುಗಳ ಮೇಲೆ ಚಾಳೀಸು ಏರಿಸಿಕೊಂಡು ತನಿಖೆಗೆ ಇಳಿದಿದ್ದಾರೆ.

ತನಿಖೆಗೆ ಹೊರಟಿದ್ದ ನಗೆ ಸಾಮ್ರಾಟರು ತಮ್ಮ ಎಂದಿನ ಚಾಕಚಕ್ಯತೆಯಿಂದ ತನಿಖೆಗೆ ತಯಾರಿ ಮಾಡಿಕೊಂಡರು. ಉದ್ಗ್ರಂಥಗಳನ್ನು ಓದಿ, ದೊಡ್ಡವರನ್ನು ಮಾತನಾಡಿಸಿ ವಿಷಯ ಸಂಗ್ರಹಿಸುವುದು ಅವರ ವಾಡಿಕೆ. ಹಿಂದೊಮ್ಮೆ ಯಾರೋ ಬುದ್ಧಿವಂತರು ಲಂಕೇಶರ ಬಗ್ಗೆ ಹೇಳಿದ್ದು ಗಮನಕ್ಕೆ ಬಿತ್ತು. ಅಡಿಗರ ಕಾವ್ಯವನ್ನು ಮೆಚ್ಚಿ ಲಂಕೇಶರು ಅಡಿಗರು ನನ್ನ ಕಣ್ಣ ತೆರೆಸಿದರು ಎಂದು ಹೇಳಿಕೊಂಡಿದ್ದರು. ಅದಕ್ಕೆ ಟಾಂಗು ಕೊಟ್ಟ ಮಹಾಶಯರಾರೋ ಅಡಿಗರು ತೆರೆಸಿದ್ದು ಲಂಕೇಶರ ಒಂದೇ ಕಣ್ಣನ್ನೇ ಎಂದು ಗೇಲಿ ಮಾಡಿದ್ದರು, ಡಯಾಬಿಟಿಸ್ ಅವರಿಗೆ ಕರುಣಿಸಿದ ಒಂಟಿ ಕಣ್ಣನ್ನು ಹೀಯಾಳಿಸಿ. ಬಹುಶಃ ಈ ಸಂಗತಿ ತನಿಖೆಯಲ್ಲಿ ಸಹಾಯವಾಗಬಹುದು ಎಂದು ಸಾಮ್ರಾಟರು ನೋಟ್ ಮಾಡಿಟ್ಟುಕೊಂಡರು.

ಸಾಮ್ರಾಟರು ಬ್ಲ್ಯಾಕ್ ಟಿಕೆಟ್ಟು ತೆಗೆದುಕೊಂಡು ಪೊಲೀಸರಿಗೆ ಬೆಚ್ಚಗೆ ಮಾಡಿ ಸಾಲಿನಲ್ಲಿ ಮುಂದಕ್ಕೆ ಹಾರಿ ಬಸವನಗುಡಿಯ ಆ ಮನೆಗೆ ಹೋಗಿ ಶಿರಡಿ ಬಾಬಾರ ವಿಗ್ರಹವನ್ನು ತದೇಕ ಚಿತ್ತದಿಂದ ನೋಡುತ್ತಾ ಕುಳಿತರು. ಒಮ್ಮೆಗೆ ಸಾಯಿ ಬಾಬಾ ಕಣ್ಣು ಮಿಟುಕಿಸಿದಂತೆ ಭಾಸವಾಗಿ ಸಾಮ್ರಾಟರಿಗೆ ಕಣ್ಣು ಕತ್ತಲೆ ಬಂದಂತಾಯ್ತು. ಸಾವರಿಸಿಕೊಂಡು ವಿಗ್ರಹದ ಆಜುಬಾಜು ಪರೀಕ್ಷಿಸಲು ಮುಂದಾದರು. ಏನೂ ಕಾಣಲಿಲ್ಲ. ಇನ್ನೂ ಹೆಚ್ಚು ಪ್ರಯತ್ನ ಪಟ್ಟರೆ ಅಲ್ಲಿನ ಭಕ್ತರು-ಆದಿಗಳು ತಮ್ಮನ್ನು ಚಚ್ಚಿ ಬದನೇಕಾಯಿ ಮಾಡುತ್ತಾರೆಂಬ ಎಚ್ಚರದಿಂದ ತಣ್ಣಗೆ ಕುಳಿತು ಯೋಚಿಸಲು ಶುರು ಮಾಡಿದರು. ಥಟ್ಟನೆ ಸಾಮ್ರಾಟರಿಗೆ ಒಕ್ಕಣ್ಣು ಶುಕ್ಲಾಚಾರ್ಯರ ನೆನಪಾಯಿತು. ಕೃಷ್ಣನ ಕೈಲಿ ದರ್ಭೆಯಿಂದ ಚುಚ್ಚಿಸಿಕೊಂಡು ಒಂದು ಕಣ್ಣು ಕುರುಡಾಗಿಸಿಕೊಂಡ ಆ ಆಚಾರ್ಯರನ್ನು ಒಕ್ಕಣ್ಣು ಶುಕ್ಲಾಚಾರ್ಯರು ಎಂದು ಕರೆಯಲು ಶುರುವಾಯಿತು. ಬಹುಶಃ ಈ ಬಾಬಾರಿಗೂ ಎರಡು ಕಣ್ಣುಗಳಿದ್ದು ಒಂದು ಕಣ್ಣನ್ನು ಭಕ್ತರ ಭಕ್ತಿ ಏನಾದರೂ ಮುಚ್ಚಿಸಿಬಿಟ್ಟಿದೆಯಾ ಎಂದು ಸಾಮ್ರಾಟರಿಗೆ ಸಂಶಯ ಬಂತು. ಹತ್ತಿರದಲ್ಲಿ ಅಂಥ ಭಕ್ತರು ಯಾರಾದರೂ ಇದ್ದಾರೆಯಾ ಎಂದು ಹುಡುಕಿಸಿದರು. ಪ್ರಯೋಜನವಾಗಲಿಲ್ಲ. ಆ ಆಯಾಮವನ್ನು ಕೊಂಚ ಬದಿಗಿಟ್ಟು ಯೋಚಿಸಲು ಶುರು ಮಾಡಿದರು.

ಹಿಂದೊಮ್ಮೆ ಗಣೇಶ ಹಾಲು ಕುಡಿದ ಪವಾಡ ಕಾಳ್ಗಿಚ್ಚಿನಂತೆ ವ್ಯಾಪಿಸಿದ್ದಾಗ ನಗೆ ಸಾಮ್ರಾಟರು ತನಿಖೆ ಕೈಗೊಂಡು ಸತ್ಯಾಂಶವನ್ನು ಬಯಲು ಮಾಡಿದ್ದರು. ಗಣೇಶ ಬರೀ ಹಾಲು ಕುಡಿಯುತ್ತಾನೆ ಎಂಬುದು ಭಕ್ತ ಜನರು ಹಬ್ಬಿಸಿರುವ ವದಂತಿ. ಆತ ನೀರನ್ನೂ ಕುಡಿಯುತ್ತಾನೆ, ಪೆಪ್ಸಿ ಕೋಲಗಳನ್ನೂ ಕುಡಿಯುತ್ತಾನೆ, ಒಟ್ಟಿನಲ್ಲಿ ದ್ರವವಾದ ಏನನ್ನಾದರೂ ಕುಡಿಯುತ್ತಾನೆ ಎಂದು ಸಾಮ್ರಾಟರು ತಮ್ಮ ತನಿಖೆಯಿಂದ ಸಾಬೀತು ಮಾಡಿದ್ದರು.(ಆದರೆ ಆ ವರದಿಯ ಲಿಂಕನ್ನು ಕೊಡೋಣವೆಂದರೆ ಭಕ್ತಾದಿಗಳನ್ನು ಅದನ್ನು ಎಗರಿಸಿ ಬಿಟ್ಟಿದ್ದಾರೆ!) ಈಗ ಬಾಬಾ ಪವಾಡದ ಹಿಂದಿನೆ ರಹಸ್ಯವನ್ನು ಬೇಧಿಸಲು ತಿಣುಕಿ ಸಾಮ್ರಾಟರು ತಮ್ಮ ಚೇಲ ಕುಚೇಲನನ್ನು ಕರೆಸಿಕೊಂಡರು.

ಕುಚೇಲ ಸಹ ‘ನವಗ್ರಹ’ ಟಿವಿಗಳ ಕಾಟದಿಂದ ಮೂರ್ತಿಯನ್ನು ತಪ್ಪಿಸಿ ಮೂಲೆಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಿದ. ಅನಂತರ ಏನೋ ಗೂಢವಾದದ್ದನ್ನು ಕಂಡು ಹಿಡಿದವನ ಹಾಗೆ ಮುಖವನ್ನು ಕೆಳಗೆ ಹಾಕಿಕೊಂಡ. ಏನೆಂದು ಕೇಳಿದರು ಸಾಮ್ರಾಟ್. ‘ಬಾಬಾ ಅಳುತ್ತಿದ್ದಾರೆ, ಅದೂ ಒಂದೇ ಕಣ್ಣಲ್ಲಿ’ ಎಂದ ಚೇಲ. ‘ಯಾಕಂತೆ ಕೇಳು’ ಪುಸಲಾಯಿಸಿದರು ಸಾಮ್ರಾಟ್. ‘ತಾನು ಭಕ್ತರ ಪ್ರೀತಿಗೆ ಮೆಚ್ಚಿ ಕೃಪಾಕಟಾಕ್ಷ ಬೀರೋಣ ಅಂದುಕೊಂಡು ಎರಡೂ ಕಣ್ಣು ತೆರೆಯುವವನಿದ್ದೆ. ಒಂದು ಕಣ್ಣು ತೆರೆಯುತ್ತಿದ್ದ ಹಾಗೆಯೇ ಭಕ್ತರು ನನಗೆ ನಮಿಸುವುದನ್ನು ಮರೆತು ಟಿವಿಯವರಿಗೆ ಫೋನ್ ಮಾಡಲು ನುಗ್ಗಿದರು. ನನಗೆ ಗಾಬರಿಯಾಗಿ ಇನ್ನೊಂದು ಕಣ್ಣು ತೆರೆಯದೆ ಹಾಗೇ ಇಟ್ಟುಕೊಂಡಿರುವೆ. ಮೇಲಾಗಿ ಬೆಂಗಳೂರಿನ ಈ ಮಾಲಿನ್ಯಗೊಂಡ ಹವೆಯಲ್ಲಿ ಎರಡೂ ಕಣ್ಣು ತೆರೆದಿಡುವುದು ರಿಸ್ಕು ಅಲ್ಲವಾ?’ ಎಂದರಂತೆ ಬಾಬಾ. ಸಾಮ್ರಾಟರು ಕುತೂಹಲದಿಂದ ಕೇಳಿದ್ದನ್ನೆಲ್ಲಾ ನೋಟ್ ಮಾಡಿಟ್ಟುಕೊಂಡರು.

ಈ ಮಧ್ಯೆ ಬಾಬಾ ಒಂಟಿ ಕಣ್ಣನ್ನು ತೆರೆದಿರುವುದು ಸಂತೋಷಕ್ಕೋ ದುಃಖಕ್ಕೋ ಎಂದು ಭಕ್ತಾದಿಗಳು ತಲೆ ಕೆಡಿಸಿಕೊಳ್ಳುತ್ತಿದ್ದರು. ಕೆಲವು ಲೌಕಿಕರು ಬಾಬಾ ಮೂರ್ತಿ ನೋಡುವುದಕ್ಕೆ ಫೀಸು ಜಾಸ್ತಿಯಾಯ್ತಲ್ಲವಾ ಎಂದು ಗೊಣಗುತ್ತಿದ್ದರು. ಇನ್ನೂ ಕೆಲವು ಉಗ್ರ ವ್ಯಗ್ರ ಭಕ್ತಾದಿಗಳು ಪತ್ರಕರ್ತರು, ಬುದ್ಧಿ ಜೀವಿಗಳು, ನಾಸ್ತಿಕರು, ವಿಚಾರವಾದಿಗಳು ಹಾಗೂ ವಿಜ್ಞಾನಿಗಳಿಗೆ ಪ್ರವೇಶವಿಲ್ಲ ಎಂದು ಒಂದು ಬೋರ್ಡನ್ನು ಬರೆಸುತ್ತಿದ್ದರು. ಕೆಲವೆಡೆ ಮುಗ್ಧ ಭಕ್ತರು ತಮ್ಮ ಮನೆಯ ಮೂರ್ತಿಗಳ ಮುಂದೆ ಕುಳಿತುಕೊಂಡು ‘ಒಂದು ಕಣ್ಣಾದರೂ ತೆರೆದು ಸೇವೆಯನು ಕೊಡು ಪ್ರಭುವೆ...’ ಎಂದು ಭಕ್ತಿರಸವನ್ನು ಹರಿಸಿ ಹಾಡುತ್ತಿದ್ದದ್ದು ಕಂಡು ಬಂದಿತು. ಕೆಲವು ತತ್ವಜ್ಞಾನಿಗಳು ಬಾಬಾ ಒಂದು ಕಣ್ಣು ತೆರೆದರೋ ಅಥವಾ ತೆರೆದಿದ್ದ ಎರಡು ಕಣ್ಣುಗಳಲ್ಲಿ ಒಂದನ್ನು ಮುಚ್ಚಿದರೋ ಎಂದು ಗಾಢವಾಗಿ ಸಮಾಲೋಚಿಸುತ್ತಿದ್ದರು. ಕೆಲವು ತುಂಟ ಪಡ್ಡೆಗಳು ಬಾಬಾ ಯಾರಿಗೆ ಕಣ್ಣು ಹೊಡೆಯುತ್ತಿದ್ದಾರೆ ಅಂತ ತನಿಖೆಗೆ ಇಳಿದುಬಿಟ್ಟಿದ್ದವು. ಇನ್ನೂ ಕೆಲವು ತರ್ಕ ಬುದ್ಧಿಗಳು ‘ಬಾಬಾ ಎರಡು ಕಣ್ಣು ತೆರೆದಿಲ್ಲ. ಇಲ್ಲೇ ಇರೋದು ಲಾಜಿಕ್! ಎರಡೂ ಕಣ್ಣು ತೆರೆದಿರುವ ವಿಗ್ರಹಗಳು ಸಾವಿರಾರು ಸಿಕ್ಕುತ್ತವೆ. ಜನರ್ಯಾರೂ ಅವುಗಳ ಹಿಂದೆ ಬೀಳುವುದಿಲ್ಲ. ಆದರೆ ಒಂದೇ ಕಣ್ಣು ತೆರೆದರೆ ಅಲ್ಲವೇ ಜನರನ್ನು ಸೆಳೆಯುವುದಕ್ಕೆ ಆಗುವುದು?’ ಎಂದು ಮೆಲ್ಲಗೆ ಪಕ್ಕದವನಲ್ಲಿ ಪಿಸುಗುಟ್ಟುತ್ತಿದ್ದ. ದೂರದಲ್ಲಿ ಕುಳಿತಿದ್ದ ವೇದಾಂತಿ, ‘ಪ್ರತಿ ಬೆಳಗು, ಪ್ರತಿ ಇರುಳು, ಸುಯ್ವ ತಂಗಾಳಿ ಎಲ್ಲವೂ ದೇವರ ಪವಾಡ ಅದನ್ನು ನೋಡಿ ಪರವಶವಾಗುವ ಬದಲು ಜನ ಇಲ್ಲಿ ಸಾಲುಗಟ್ಟಿ ತೂಕಡಿಸುತ್ತಿದ್ದಾರೆ’ ಎಂದು ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದ.

ಸಾಮ್ರಾಟರು ತಿಣುಕಿ, ಚಡಪಡಿಸಿ ಕೊನೆಗೂ ರಹಸ್ಯವನ್ನು ಬಯಲು ಮಾಡಿದರು. ಅದನ್ನು ಜಗಜ್ಜಾಹೀರುಗೊಳಿಸಲು ತೀರ್ಮಾನಿಸಿದ್ದಾರೆ. ಭಗವಂತನ ಸಂದೇಶವನ್ನು ಮಾನವ ಕುಲಕ್ಕೆ ತಿಳಿಸಲು ಬಯಸಿದ್ದಾರೆ. ಅವರ ವರದಿ ಹೀಗಿದೆ: ‘ವಿಜ್ಞಾನ ಹಾಗೂ ಆಧ್ಯಾತ್ಮ ಇವೆರಡು ನಿಸರ್ಗದ ಎರಡು ಕಣ್ಣುಗಳು. ಒಂದು ಕಣ್ಣು ಹೊರಗಿನದನ್ನು ನೋಡಲು. ವಿಜ್ಞಾನ ನಮಗೆ ಹೊರಗಿನ ಜಗತ್ತಿನ ಸಂಗತಿಗಳನ್ನು, ವಿಸ್ಮಯಗಳನ್ನು ನೋಡಲು ಸಹಾಯ ಮಾಡುತ್ತದೆ. ಇದರಿಂದ ಲೌಕಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಇನ್ನೊಂದು ಕಣ್ಣು ಒಳಗಣ್ಣು. ಇದು ಆಧ್ಯಾತ್ಮದ ಕಣ್ಣು. ಇದು ನಮ್ಮೊಳಗನ್ನು ನಮಗೆ ದರ್ಶಿಸುವ ಕಣ್ಣು. ಇದರಿಂದ ಮನುಷ್ಯ ಮನೋಲೋಕದ ವಿಸ್ಮಯಗಳನ್ನು, ಮನಸ್ಸಿನ ಆಳ ಅಗಲಗಳನ್ನು, ತನ್ನ ಪ್ರಜ್ಞೆಯ ಮಹತ್ತನ್ನು ಕಾಣಬಹುದು. ಬಾಬಾ ಈ ಸಂದೇಶವನ್ನು ಸಾರುವುದಕ್ಕಾಗಿಯೇ ಒಂದು ಕಣ್ಣನ್ನು ತೆರೆದು ಮತ್ತೊಂದು ಕಣ್ಣನ್ನು ಮುಚ್ಚಿಕೊಂಡು ಕುಳಿತಿದ್ದಾರೆ.’

  • ಲಲಿತ ಪ್ರಬಂಧ, ಹಾಸ್ಯ
~.~
  • Login or register to post comments
  • 337 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 22, 2008 - 9:47am — ASHOKKUMAR

ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!

ASHOKKUMAR's picture

ನನಗೆ ತನಿಖೆಯಿಂದ ತಿಳಿದು ಬಂದದ್ದು:
ಈಗ ಎಡದ ಕಣ್ಣು ತೆರೆದು ಸುದ್ದಿ ಮಾಡಿದ ಬಾಬಾ,ಮುಂದೆ ಬಲದ ಕಣ್ಣು ತೆರೆದು ಮತ್ತಷ್ಟು ಸುದ್ದಿ ಮಾಡುವ ಆಯ್ಕೆ ಉಳಿಸಿಕೊಳ್ಳಲು ಬಯಸಿದ್ದಾರೆ.
(ನನ್ನ ಕನಸಿನಲ್ಲಿ ಬಂದು ಬಾಬಾ ಇದನ್ನು ಹೇಳಿದ್ದು)
*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 22, 2008 - 8:13pm — nagenagaari

ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!

nagenagaari's picture

ನಿಮ್ಮ ತನಿಖಾ ತಂಡವನ್ನು ನಮ್ಮತ್ತ ಕಳುಹಿಸಿ ಕೊಡಿ ಕೊಂಚ ಟ್ರೇನಿಂಗ್ ಮಾಡ್ಬೇಕು. ನೀವು ಹಿಂಗೆ ಹೇಳಿದ್ದಾದ ಮೇಲೆ ಬಾಬಾ ಮತ್ತೆಲ್ಲೋ ಇನ್ನೊಂದು ಕಣ್ಣು ಮಿಟುಕಿಸಿದ್ದಾರೆ.
ನಿಮ್ಮ ಕನಸನ್ನು ಸ್ಥಳೀಯ ಭಕ್ತ ಮಂಡಳಿ ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು ಅದರ ಮೇಲೆ ನಿಮ್ಮ ಅಧಿಕಾರ ಇಲ್ಲವೆಂದು ತಿಳಿಸಿ ನಮಗೆ ಪ್ರಕಟಣೆ ಕಳುಹಿಸಿದ್ದಾರೆ!
......................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:11pm — kannadakanda

ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!

kannadakanda's picture

ಬಾಬಾ ಒಂದು ಕಣ್ಣು ತೆಱೆದಾಗ ನಮ್ಮೀ ಜನ ಎರಡೂ ಕಣ್ಣು ಮುಚ್ಚಿಬಿಡುತ್ತಾರೆ. ಹಿಂದೊಮ್ಮೆ ಬೆಂಗಳೂರಿನಲ್ಲಿ ಗಣಪತಿ ಹಾಲು ಕುಡಿಯುವಾಗ ನಾನು ನಂಬದೆ ನನ್ನ ಕೈಯಿಂದ ಗಣಪತಿಗೆ ಹಾಲು ಕುಡಿಸಲಾಗದೆ ಜನ ಪೆಚ್ಚಾದರು. ಆದರೆ ಕಣ್ಣು ಮುಚ್ಚಿಬಿಟ್ಟರು. ಯಾವನೋ ಬುದ್ಧಿವಂತ ನನ್ನನ್ನು ಅಲ್ಲಿಂದ ಪುಸಲಾಯಿಸಿ ಕಳಿಸಿಬಿಟ್ಟ. ನಾನು ಲೋಟದಲ್ಲಿ ಗಣಪ ಹಾಲೇಕೆ ಕುಡಿಯಲಾಱ ಎನ್ನುವುದಕ್ಕೂ ಉತ್ತರ ಸಿಗದೆ ಆ ದೇವಸ್ಥಾನದಿಂದ ಕಾಲ್ತೆಗೆದಿದ್ದೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
August 1, 2008 - 10:00am — nagenagaari

ಉ: ಬಾಬಾ ತೆರೆದದ್ದು ಒಂದೇ ಕಣ್ಣೇ?!

nagenagaari's picture

ಅಯ್ಯೋ ನನ್ನ ಸಂಗತಿಯನ್ನು ಕೇಳಿ ಸಾರ್. ಗಣಪತಿ ಕೇವಲ ಹಾಲನ್ನು ಮಾತ್ರ ಕುಡಿಯೋದಿಲ್ಲ. ಕ್ಯಾಪಿಲರಿ ಆಕ್ಷನ್‌ನಿಂದಾಗಿ ಏನೇ ‘ದ್ರವ’ ಇಟ್ಟರೂ ಏರಿಸುತ್ತಾನೆ ಎಂದು ಸಾಬೀತು ಮಾಡಲು ಹೋಗಿ ಬಾರಿಸಿಕೊಂಡು ಬಂದಿದ್ದೆ. ಅಹಿಂಸಾವಾದಿ ಭಕ್ತರಿಂದ!
.....................................
ನಗುವು ಸಹಜ ಧರ್ಮ ನಗದಿರುವುದು ನಿಮ್ಮ ಕರ್ಮ!
ನನ್ನ ಬ್ಲಾಗ್: http://nagenagaaridotcom.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ವಿಶ್ವಾಸಮತ: ಆನೆಗೆ ಅನ್ಯಾಯ!
  • ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ತೀವ್ರ ಪ್ರತಿಭಟನೆ
  • ವಿನಾಯಕನ ಇ-ಮೇಲ್!
  • ಭಜ್ಜಿ ಸಿಂಗಿಗೆ ಶಾಂತನಿಂದ ಕೋಚಿಂಗ್
  • ಸಾಮ್ರಾಟರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ!
Syndicate content

ಲೇಖಕರು

nagenagaari's picture

ಪೂರ್ಣ ಹೆಸರು
ನಗೆ ಸಾಮ್ರಾಟ್

ಪರಿಚಯ

ನಗೆಯ ಹೊನಲು ಹರಿಸುವುದರಲ್ಲೇ ತೃಪ್ತಿ. ಅದಕ್ಕಾಗೇ ಈ ತಾಣ ತೆರೆದಿರುವೆ:
http://nagenagaaridotcom.wordpress.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಹೊಸ ಲೇಖನಗಳು

  • ಬಾಗಲವಾಡದ ಗಿರಿಯೊಡೆಯ ಸ್ವಯಂವ್ಯಕ್ತ ಶ್ರೀ ಲಕ್ಷ್ಮೀ ವೆಂಕಟರಮಣ...
  • ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
  • ಗೂಗಲ್ ಅನುವಾದಕ... ಅವಾಂತರ
  • ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
  • ಲಿನಕ್ಸ್ ಗೆ ೧೭ ವರ್ಷದ ಹರೆಯ
  • ರಾಜ್ಯೋತ್ಸವ ಓಟ ೨೦೦೮
  • ಮುದ್ರಿಸಿದ್ದು ಅಳಿಸಿಹೋಗುವ ಕಾಗದ

ಇತ್ತೀಚಿನ ಪ್ರತಿಕ್ರಿಯೆಗಳು

  • mahesha
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:10pm
  • Deeparavishankar
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 8, 2008 - 3:01pm
  • savithasr
    ಉ: ಸ್ವಾತಂತ್ರ್ಯ ಮತ್ತು ಸ್ವರಾಜ್ಯ
    October 8, 2008 - 2:51pm
  • mahesha
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:37pm
  • venkatesh
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:17pm
  • girish.rajanal
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 8, 2008 - 2:08pm
  • Deeparavishankar
    ಉ: ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
    October 8, 2008 - 1:59pm
  • venkatesh
    ಉ: ವಿಮಾನದಿಂದ ಕೆಳಗೆ ಕಾಣುವ ಚಿತ್ರ !
    October 8, 2008 - 1:55pm
  • Deeparavishankar
    ಉ: ನನ್ನ ಮನಸ್ಸಿನ ಅಜ್ಞಾನ
    October 8, 2008 - 1:55pm
  • Deeparavishankar
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 8, 2008 - 1:50pm
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator